ಉತ್ತಮ ಅಧ್ಯಯನದಿಂದ ಮೌಲ್ಯಯುತ ಲೇಖನ: ಡಾ.ಯಶೋವರ್ಮ
ಉಜಿರೆ: ಪುಸ್ತಕಗಳನ್ನು ಹೆಚ್ಚೆಚ್ಚು ಓದುವ ಹವ್ಯಾಸದಿಂದ ಪ್ರಾಪಂಚಿಕ ಜ್ಞಾನದ ಜೊತೆಗೆ ನಮ್ಮಲ್ಲಿ ಅಲೋಚನೆ, ವಿವೇಕ ಜಾಗೃತಗೊಳ್ಳುತ್ತದೆ. ಉತ್ತಮ ಅಧ್ಯಯನದಿಂದ ಮೌಲ್ಯಯುತ ಲೇಖನಗಳು ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದರು.
ಅವರು ಮೇ 5ರಂದು ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಮೂರು ಪುಸ್ತಕಗಳ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಓದು ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಪಠ್ಯಕ್ಕೆ ಪೂರಕವಾಗಿ ಪುಸ್ತಕಗಳನ್ನು ಓದಿ ವಿಮರ್ಶೆ ಮಾಡಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಇಂದು ಬಿಡುಗಡೆಯಾದ ಕೃತಿಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕುವೆಂಪು ವಿವಿ ಸಹಾಯಕ ಪ್ರಾಧ್ಯಾಪಕ ಲೇಖಕ ಡಾ| ಸತೀಶ್ಕುಮಾರ್ ಅಂಡಿಂಜೆ ಮಾತನಾಡಿ ವಿದ್ಯಾರ್ಥಿ ಕೇಂದ್ರಿಕೃತ ಕೃತಿಗಳ ಅಧ್ಯಾಯನದಿಂದ ಮಹತ್ವದ ವಿಷಯಗಳು ಅನಾವರಣವಾಗುತ್ತದೆ ಎಂದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಟಿ.ಎನ್ ಕೇಶವ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಬಿ. ಗಣಪಯ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವೆಂಕಟರಮಣ ಹೆಗ್ಡೆ, ಅಬ್ದುಲ್ ಹ್ಯಾರೀಸ್, ವರದಶಂಕರ, ಮೇಧಾ ರಾಮಕುಂಜ ಕೃತಿ ಪರಿಚಯ ಮಾಡಿದರು. ಶೃತಿ ಹೆಗ್ಡೆ ಪ್ರಾರ್ಥಿಸಿದರು.ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರೊ| ಭಾಸ್ಕರ ಹೆಗ್ಡೆ ಪ್ರಸ್ತಾಪಿಸಿ, ಸ್ವಾಗತಿಸಿದರು. ಪರಾಶರ ಐನಕೈ ನಿರೂಪಿಸಿದರು. ಉಪನ್ಯಾಸಕಿ ಗೀತಾ ಎ.ಜೆ ವಂದಿಸಿದರು.