ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನಿಂದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

ಜೀವನ ಮೌಲ್ಯ ಮತ್ತು ಅನುಭವದಿಂದ ಯಾವ ಸಮಾಜವನ್ನೂ ಗೆಲ್ಲಬಹುದು: ಡಾ| ಮುಖ್ಯಮಂತ್ರಿ ಚಂದ್ರು

ಧರ್ಮಸ್ಥಳ: ಶಿಕ್ಷಣ ಬೇಕಾದಷ್ಟಿದೆ. ಆದರೆ ನೈತಿಕ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಇಂದು ಎಲ್ಲೆಡೆ ಕಾಣುತ್ತಿದೆ. ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆ ಅತೀ ಅಗತ್ಯವಾದುದು. ಕಲೆಗೆ ಜಾತಿ ಧರ್ಮದ ಭೇದವಿಲ್ಲ, ಶಿಕ್ಷಣದ ಪದವಿಗಳಿಗಿಂತ ನಮ್ಮ ಜೀವನದಲ್ಲಿರುವ ಮೌಲ್ಯಗಳು ಮತ್ತು ಅನುಭವದಿಂದ ಯಾವ ಸಮಾಜವನ್ನೂ ಗೆಲ್ಲಬಹುದು. ಅಂತಹಾ ವಿವಿಧತೆಯಲ್ಲಿ ಏಕತೆ ಸಾರುವ ಧರ್ಮಸ್ಥಳ ಕ್ಷೇತ್ರ ಇಂದು ಎಲ್ಲ ರಂಗಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ಮೌಲ್ಯಾಧಾರಿತ ವಿಶ್ವಮಾನವ ವಿಶ್ವವಿದ್ಯಾನಿಲಯವಾಗಿ ನಮ್ಮ ಮುಂದೆ ಇದೆ ಎಂದು ಖ್ಯಾತ ಚಲನಚಿತ್ರ ಕಲಾವಿದ ಡಾ| ಮುಖ್ಯಮಂತ್ರಿ ಚಂದ್ರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ. 6 ರಂದು ನಡೆದ, ಶ್ರೀ ಧ. ಮಂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ 17 ನೇ ವರ್ಷದ ಅಂಚೆ ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಪುರಸ್ಕಾರ ನೆರವೇರಿಸಿ ಮಾತನಾಡಿದರು.

ಆಂಗ್ಲ ಭಾಷಾ ಅತಿ ವ್ಯಾಮೋಹ ಬೇಡ: ಸಮಾಜದಲ್ಲಿ ಇಂದು ಆಂಗ್ಲ ಭಾಷಾ ವ್ಯಾಮೋಹ ಬೆಳೆದಿದೆ. ಕೆಲವೆಡೆ ಹಾವಳಿಯಾದರೆ ಇನ್ನೂ ಕೆಲವಡೆ ಹೇರಲಾಗುತ್ತಿದೆ. ಆಂಗ್ಲಭಾಷೆ ಬೇಡ ಎನ್ನೂದಿಲ್ಲ. ಜ್ಞಾನ ವಿಶ್ವದ 6 ಸಾವಿರಕ್ಕೂ ಅಧಿಕ ಭಾಷೆಗಳಲ್ಲಿ 2500 ಅಧಿಕ ಭಾಷೆಗಳು ಭಾರತದಲ್ಲಿವೆ. 200 ಕ್ಕೂ ಅಧಿಕ ಭಾಷೆಗಳು ಕರ್ನಾಟಕದಲ್ಲಿವೆ. ಇಷ್ಟೆಲ್ಲಾ ಭಾಷೆಗಳನ್ನು ಒಳಗೊಂಡಿರುವ ನಮ್ಮ ದೇಶ ಭಾಷಾ ಸಂಸ್ಕೃತಿಯಲ್ಲಿ ಬಂಬರ್ 1ಸ್ಥಾನದಲ್ಲಿದೆ. ಸಂಪಾದನೆಗೆ ಬೇಕಾದರೆ ಇತರ ಭಾಷೆಗಳನ್ನು ಚೆನ್ನಾಗಿ ಕಲಿಯಿರಿ. ಆದರೆ ನಮ್ಮ ತಾಯಿ ಭಾಷೆಯಲ್ಲಿರುವ ಹೃದಯ ಶ್ರೀಮಂತಿಕೆ ಮರೆತುಬಿಡಬೇಡಿ. ಗ್ರಾಮೀಣ ಭಾಗದ ಮಹಿಳೆಯರಿಂದ ಮತ್ತು ಕರಾವಳಿ ಭಾಗದಲ್ಲಿ ಯಕ್ಷಗಾನ ಕಲೆಯಿಂದಾಗಿ ಕನ್ನಡ ಭಾಷೆ ಉಳಿದಿದ್ದು, ಹೊಸ ಹೊಸ ಪದಪ್ರಯೋಗಗಳು ಸೇರ್ಪಡೆಯಾಗುತ್ತಿವೆ. ಇಲ್ಲೂ ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಇದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಕಲೆಯನ್ನು ಕೇವಲ ಮಾರಾಟಕ್ಕಾಗಿ ಪ್ರೀತಿಸಬೇಡಿ: ಡಾ. ಹೆಗ್ಗಡೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕಲೆಯಲ್ಲಿ ಸೃಜನಾತ್ಮಕ ಕಲೆ ಮತ್ತು ವಾಸ್ತವಿಕತೆ ಎಂಬ ಎರಡು ವಿಧಗಳಿದ್ದು, ಕಲೆಯನ್ನು ಮಾರಾಟದ ಉದ್ಧೇಶಕ್ಕಾಗಿ ಪ್ರೀತಿಸಬೇಡಿ. ನಿಮ್ಮ ಮನಸ್ಸಿನ ಆನಂದಕ್ಕಾಗಿ, ಭಾವನೆ ಅಭಿವೃಕ್ತಿಗೊಳಿಸುವುದಕ್ಕಾಗಿ ಪ್ರೀತಿಸಿ. ಕಲೆಗೆ ಅಪಾರವಾದ ಪರಿವರ್ತನಾ ಶಕ್ತಿ ಇದೆ. ಕಲಾವಿದ ಪಾತ್ರದಾರಿಯಾಗುವ ಮೂಲಕ ತಮ್ಮನ್ನು ತಾವೇ ದೋಷಿಗಳಾಗಿ, ಅಪರಾಧಿಗಳಾಗಿ ಚಿತ್ರಿಸಿಕೊಂಡು ಸಮಾಜದಲ್ಲಿ ಇಂತಹಾ ಕೆಲಸ ಮಾಡಬೇಡಿ ಎಂಬುದಾಗಿ ಸಂದೇಶ ನೀಡುತ್ತಾರೆ. ಪ್ರಾಥಮಿಕ ಹಂತದಲ್ಲಿ ಕಲೆಗೆ ಪ್ರೋತ್ಸಾಹ ಅತೀ ಅಗತ್ಯವಾಗಿದೆ. ಗಂಜೀಫ ರಘುಪತಿ ಭಟ್ಟ್ ಅವರಿಗೆ ಅಂತಹಾ ಪ್ರೋತ್ಸಾಹ ಸಿಕ್ಕಿದ್ದರಿಂದ ಅವರು ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾರೆ. ಶಬರಿ ಅವರೂ ಇಂತಹದ್ದೇ ಪ್ರಿಭಾನ್ವಿತೆಯಾಗಿ ಇಂದು ವೇದಿಕೆ ಮೂಲಕ ನಮಗೆ ತಿಳಿಯುತ್ತಿದ್ದು ಅವರಿಗೂ ಮುಂದೆ ಉಜ್ವಲ ಭವಿಷ್ಯ ಇದೆ ಎಂದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆಯವರು, ಡಿ ಹರ್ಷೇಂದ್ರ ಕುಮಾರ್, ಮುಖ್ಯಮಂತ್ರಿ ಚಂದ್ರು ಅವರ ಧರ್ಮಪತ್ನಿ ಪದ್ಮಾ ಚಂದ್ರು, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ ಸೀತಾರಾಮ ತೋಳ್ಪಡಿತ್ತಾಯ ಉಪಸ್ಥಿತರಿದ್ದರು.
ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಐ ಶಶಿಕಾಂತ್ ಜೈನ್ ಸ್ವಾಗತಿಸಿ ಪ್ರಸ್ತಾವನೆಗೈದರು. ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಂದ್ರಶೇಖರ ಕೆದಿಲಾಯ ಪ್ರಾರ್ಥನೆ ಹಾಡಿದರು. ಸ್ಪರ್ಧಾ ವಿಜೇತರ ವಿವರವನ್ನು ಬಂಟ್ವಾಳ ರಾಮಚಂದ್ರ ಪ. ಪೂ ಕಾಲೇಜು ಪೆರ್ನೆಯ ಚೆನ್ನಕೇಶವ ಡಿ. ಆರ್ ನೀಡಿದರು. ಬಂಟ್ವಾಳದ ಶಿಕ್ಷಕ ಸದಾಶಿವ ನಾಯಕ್ ನಿರೂಪಿಸಿ ಮೂಡಬಿದ್ರೆ ಪ್ರೌಢ ಶಾಲಾ ಶಿಕ್ಷಕ ಬಾಲಕೃಷ್ಣ ರೆಖ್ಯ ವಂದಿಸಿದರು. ಸ್ಪರ್ಧಾ ತೀರ್ಪುಗಾರಿಕೆಯನ್ನು ಖ್ಯಾತ ಚಿತ್ರ ರಚನೆಕಾರರಾದ ವಿಶ್ವನಾಥ, ಜಗಧೀಶ್ ಹಾಸನ ಇವರು ನೆರವೇರಿಸಿದರು.

ವಿಶೇಷತೆಗಳು:
* ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪೂರೈಸಿದ ಡಾ. ಡಿ ವೀರೇಂದ್ರ ಹೆಗ್ಗಡೆ ದಂಪತಿಯನ್ನು ಡಾ| ಮುಖ್ಯಮಂತ್ರಿ ಚಂದ್ರು ದಂಪತಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
* ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಿಡಿಸಿದ ಚಿತ್ರಗಳನ್ನು ಸಭಾಂಗಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ಎಲ್ಲ ಅತಿಥಿ ಗಣ್ಯರು ಅದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
* ರಾಜ್ಯದ ನಾನಾ ಕಡೆಯಿಂದ ಚಿತ್ರಕಲಾವಿದರು ಆಗಮಿಸಿ ತಮ್ಮ ಚಿತ್ರಕೌಶಲ್ಯ ಮೆರೆದರು.

ಕುಂಚ-ಗಾನ- ನೃತ್ಯ ವೈಭವ
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಅವರ ಪರಿಕಲ್ಪನೆಯಲ್ಲಿ ಮೂಡಬಂದಂತೆ ಇದೇ ಮೊದಲ ಬಾರಿಗೆ ಪ್ರಧಾನ ವೇದಿಕೆ ಮತ್ತು ಉಪವೇದಿಕೆಯಲ್ಲಿ ಕುಂಚ-ಗಾನ-ನೃತ್ಯ ವೈಭವ ಕಾರ್ಯಕ್ರಮ ಅಪೂರ್ವವಾಗಿ ಮೂಡಿಬಂತು. ಕಾವ್ಯಶ್ರೀ ಅಜೇರು ಯಕ್ಷಗಾಯನಕ್ಕೆ ಉಜಿರೆ ಎಸ್‌ಡಿಎಂ ಕಾಲೇಜು ಯಕ್ಷಕಲಾ ತಂಡದಿಂದ ಯಕ್ಷ ನೃತ್ಯ ಪ್ರದರ್ಶನ ನಡೆಯಿತು. ಇದೇ ವೇಳೆ ಪ್ರಧಾನ ವೇದಿಕೆಯ ಇಕ್ಕೆಲಗಳಲ್ಲಿ ಅಂತಾರಾಷ್ಟ್ರೀಯ ಚಿತ್ರಕಲಾವಿದ ಗಂಜೀಫ ರಘುಪತಿ ಭಟ್ ಅವರು ಕನಿಷ್ಠ ಅವಧಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಚಿತ್ರ ರಚಿಸಿದರೆ, ವೇಗದ ಚಿತ್ರಕಲಾವಿದೆ ಖ್ಯಾತಿಯ ಶಬರಿ ಗಾಣಿಗ ಅವರು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಚಿತ್ರ ಬರೆದು ಸಭೆಯಿಂದ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.