“ಚಾರ್ಮಾಡಿ ಹೊಟೇಲ್”ನಿಂದ ತ್ಯಾಜ್ಯ ಹೊರಕ್ಕೆ: ಚುನಾವಣಾ ಆಯೋಗಕ್ಕೆ ದೂರು

ಚಾರ್ಮಾಡಿ: ಇಲ್ಲಿನ ಗೋಳಿಕಟ್ಟೆ ಸನಿಹದ ಹೊಟೇಲ್ ಚಾರ್ಮಾಡಿ ಇದರ ಮಾಲಿಕರು ಹೊಟೇಲ್‌ನ ಅಡುಗೆ ತ್ಯಾಜ್ಯ ನೀರು, ಕೊಳಚೆ ನೀರು ಮತ್ತು ಶೌಚಾಲಯದ ನೀರನ್ನು ಹರಿಯವು ನದಿಗೆ ಬಿಡುತ್ತಿದ್ದು ಇದರಿಂದ ಜನವಸತಿ ಪ್ರದೇಶದ ನಮಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
ಹೊಟೇಲ್ ಮಾಲಿಕರ ಈ ಸಮಸ್ಯೆಯಿಂದ ಪ್ರದೇಶದ ಜನ ಮೂಗುಮುಚ್ಚಿ ಬದುಕುವಂತಾಗಿದೆ. ಅಲ್ಲದೆ ನದಿಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಗ್ರಾಮಸ್ತರು ಹೊಟೇಲ್ ಮಾಲಿಕರನ್ನು ಸಂಪರ್ಕಿಸಿ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಳಿಕೊಂಡರೂ ಅವರು ಅದಕ್ಕೆ ಸ್ಪಂದಿಸಿಲ್ಲ. ಅಲ್ಲದೆ ಇವರ ಈ ಕೃತ್ಯದಿಂದಾಗಿ ನೇತ್ರಾವತಿ ನದಿಯೂ ಮಲಿನವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಾಲಿಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಬಹಿಷ್ಕಾರದ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ:
ಸದ್ರಿ ಪರಿಸರದ ನಾವು ಈ ಬಗ್ಗೆ ಪಂಚಾಯತ್, ತಾ.ಪಂ, ಮತ್ತು ಇತರ ಇಲಾಖೆಗಳಿಗೆ ಹಲವು ಬಾರಿ ಲಿಖಿತ ಮತ್ತು ಮೌಖಿಕ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆ ಹಿನ್ನೆಲೆಯಲ್ಲಿ ಈ ಪತ್ರಕ್ಕೆ ಸಹಿ ಹಾಕಿದ ನಾವು ಈ ಬಾರಿ ಚುನಾವಣೆ ಬಹಿಷ್ಕಾರ ನಡೆಸುತ್ತಿದ್ದೇವೆ ಎಂದು ಪವನ್ ಕುಮಾರ್ ನೇತೃತ್ವದಲ್ಲಿ 25 ಮಂದಿ ನಾಗರಿಕರು ಸಹಿ ಮಾಡಿದ ಪತ್ರವನ್ನು ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ.

ನೋಟೀಸು ನೀಡಿದ್ದೇವೆ. ಆರೋಗ್ಯ ಇಲಾಖೆಗೂ ಪತ್ರ ನೀಡಿದ್ದೇವೆ:
ಜನರ ಮನವಿಗೆ ಪಂಚಾಯತ್ ಸ್ಪಂದಿಸಿದೆ. ನೋಟೀಸು ನೀಡಿದ ಬಳಿಕ ಹೊಟೇಲ್ ಮಾಲಕರು ತ್ಯಾಜ್ಯಕ್ಕೆ ಗುಂಡಿ ಮಾಡಿಕೊಂಡಿದ್ದು ಅದರಿಂದ ಹೊರಬರುವ ನೀರನ್ನು ಅವರ ತೋಟಕ್ಕೆ ಬಿಡುತ್ತಿದ್ದಾರೆ. ಅದೂ ಕೂಡ ಜನವಸತಿ ಪ್ರದೇಶಕ್ಕೆ ಸಮೀಪವಿರುವುದರಿಂದ ದುರ್ವಾಸನೆ ಬೀರುತ್ತಿದ್ದು ಸಮಸ್ಯೆಯಾಗಿದೆ. ಈ ಬಗ್ಗೆ ಹೊಟೇಲ್ ಮಾಲಿಕರಿಗೆ ನೋಟೀಸು ಮೂಲಕ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆಗೂ ವರದಿ ನೀಡಲಾಗಿದೆ.
-ಪ್ರಕಾಶ್ ಶೆಟ್ಟಿ, ಪಿಡಿಒ ಗ್ರಾ.ಪಂ ಚಾರ್ಮಾಡಿ

ತ್ಯಾಜ್ಯ ನಿರ್ವಹಣೆಗೆ ಗುಂಡಿ ಮಾಡಿದ್ದೇವೆ;
ಹೊಟೇಲ್‌ನಿಂದ ಹೊರಬರುವ ತ್ಯಾಜ್ಯ ನಾವು ಎಲ್ಲೂ ಹೊರಬಿಡುತ್ತಿಲ್ಲ. ಅದರ ನಿರ್ವಹಣೆಗಾಗಿ 2 ರಿಂಗ್ ಹಾಕಿದ ಇಂಗುಗುಂಡಿ ಮಾಡಿದ್ದೇವೆ. ಅದಕ್ಕೆ ಪಂಪು ವ್ಯವಸ್ಥೆ ಮಾಡಿಕೊಂಡಿದ್ದು ಗುಂಡಿ ತುಂಬಿದರೆ ಮೋಟಾರು ಮೂಲಕ ತೆಗೆದು ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಿರ್ವಹಿಸಲಾಗುತ್ತಿದೆ. ನಮ್ಮ ಮನೆ ಬಳಿ 300 ಅಡಿಕೆ ಮರದ ತೋಟ ಇದ್ದು ಅದಕ್ಕೆ ಕುರಿ ಗೊಬ್ಬರ ಹಾಕಿದ ಮರುದಿನ ಮಳೆ ಬಂದಿರುವುದರಿಂದ ಸ್ಪಲ್ಪ ವಾಸನೆ ಬಂದಿರಬಹುದು. ಇದನ್ನು ಚುನಾವಣಾಧಿಕಾರಿಗಳು, ಪಿಡಿಒ ಮತ್ತು ದೂರುದಾರರು ಖುದ್ದು ನೋಡಿದ್ದಾರೆ. ನಮಗೆ ಯಾರಿಗೂ ತೊಂದರೆ ಮಾಡುವ ಉದ್ಧೇಶವಿಲ್ಲ.
-ಹಸನಬ್ಬ ಚಾರ್ಮಾಡಿ. “ಹೊಟೇಲ್ ಚಾರ್ಮಾಡಿ” ಮಾಲಿಕರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.