ಎ.14-25: ಮರೋಡಿ ದೇವಸ್ಥಾನದಲ್ಲಿ ಸಂಕ್ರಾಂತಿ ಸಂಭ್ರಮ

ಪ್ರತಿಷ್ಠಾ ಮಹೋತ್ಸವ, ದೇವರಿಗೆ ಬೆಳ್ಳಿಕವಚ ಸಮರ್ಪಣೆ

ಮರೋಡಿ: ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಎ.14 ರಂದು ಮೇಷ ಸಂಕ್ರಮಣ ಪ್ರಯುಕ್ತ ಷಟನಾರಿಕೇಳ ಗಣಯಾಗ ಮತ್ತು ಕಳೆದ 12 ಸಂಕ್ರಾಂತಿಯಂದು ನಡೆಯುತ್ತಿದ್ದ ಯಾಗ ಹೋಮಗಳ ಸಮಾಪ್ತಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಬೆಂಗಳೂರಿನ ಖ್ಯಾತ ಉದ್ಯಮಿ ಸುರೇಶ್ ಹೆಗ್ಡೆ ಈ ಸಂಕ್ರಾತಿ ಕಾರ್ಯಕ್ರಮದ ಸೇವಾಕರ್ತರಾಗಿದ್ದಾರೆ. ಅಲ್ಲದೆ, ಅವರು ಈ ಹಿಂದೆ ನೀಡಿದ್ದ ಆಶ್ವಾಸನೆಯಂತೆ ಅಂದು ಶ್ರೀ ಉಮಾಮಹೇಶ್ವರ ದೇವರ ಪಾಣಿಪೀಠ, ಶಿವಲಿಂಗಕ್ಕೆ ಕವಚ ಮತ್ತು ಪ್ರಭಾವಳಿ ನಿರ್ಮಾಣಕ್ಕೆ ಸುಮಾರು 4 ಕೆಜಿಯಷ್ಟು ಬೆಳ್ಳಿಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಲಿದ್ದಾರೆ.

ಎ.25 ರಂದು ಪ್ರತಿಷ್ಠೆ ಕಾರ್ಯಕ್ರಮ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಎ. 25 ರಂದು ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಸುರೇಶ್ ಹೆಗ್ಡೆ ದಂಪತಿಯಿಂದ ದೇವರಿಗೆ ಪಾಣಿಪೀಠ, ಶಿವಲಿಂಗದ ಕವಚ ಮತ್ತು ಪ್ರಭಾವಳಿಯ ಸಮರ್ಪಣೆ ನಡೆಯಲಿದೆ.
ಬೆಳಿಗ್ಗೆ ಚಂಡಿಕಾ ಯಾಗ ಮತ್ತು ರುದ್ರ ಯಾಗ ನಡೆಯಲಿದೆ. ಭಕ್ತರು ಒಂದು ಸಾವಿರ ರೂ. ರಶೀದಿಯನ್ನು ಮಾಡಿದಲ್ಲಿ, ಯಾಗದ ಸಂಕಲ್ಪವನ್ನು ಮಾಡಿ, ಬ್ರಹ್ಮಾರ್ಪಣೆ ಬಿಟ್ಟು ಪ್ರಸಾದವನ್ನು ಪಡೆಯಲು ಅವಕಾಶವಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ನಿಡ್ಡಾಜೆ ವಿಜಯ ಆರಿಗ ಮತ್ತು ಕುಟುಂಬಸ್ಥರ ಸೇವಾರ್ಥ ರಂಗಪೂಜೆ ನಡೆಯಲಿದೆ.
ಸಂಕ್ರಾತಿ ಕಾರ್ಯಕ್ರಮ ಹಾಗೂ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಊರ ಪರವೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮತ್ತು ಕಾರ್ಯದರ್ಶಿ ಜಯಂತ ಕೋಟ್ಯಾನ್ ಕೋರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.