
ವೇಣೂರು:ಅಧಿಕ ಪ್ರಮಾಣದ ವಿದ್ಯುತ್ ಪ್ರವಾಹಿಸಿ ಅರ್ಥ್ ವಯರ್ನಿಂದ ವಿದ್ಯುತ್ ಶಾಕ್ಗೆ ಒಳಪಟ್ಟು ದಂಪತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಕೊಕ್ರಾಡಿ ಗ್ರಾಮದ ಪಾಡಿ ಬನತ್ಯರಡ್ಡ ಮನೆ ಸಂಜೀವ ಮೂಲ್ಯ (61) ಹಾಗೂ ಅವರ ಪತ್ನಿ ಸರೋಜಿನಿ (44) ಮೃತಪಟ್ಟ ದುರ್ದೈವಿಗಳು. ಮನೆಯಲ್ಲಿದ್ದ ಪುತ್ರಿ ಅಶ್ವಿತಾ ಹಾಗೂ ಸಂಬಂಧಿ ಯುವಕ ಸುಜಿತ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ಗುರುವಾರ ತಡರಾತ್ರಿ ಮನೆ ಸಣ್ಣಗೆಯ ಮಳೆಯೊಂದಿಗೆ ಗುಡುಗು ಬರುತ್ತಿದ್ದ ಸಮಯ ಕಡಿತಗೊಂಡಿದ್ದ ವಿದ್ಯುತ್ ಒಮ್ಮೆಲೆ ಬಂದ ವೇಳೆ ಮನೆಯ ಸ್ವಿಚ್ ಬೋರ್ಡ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ಚಾವಡಿಯಲ್ಲಿ ಬೀಡಿಕಟ್ಟುತ್ತಿದ್ದ ಸರೋಜಿನಿ ಅವರು ಏನಾಗುತ್ತಿದೆ ಎಂದು ತೋಚದೆ ಪ್ಯೂಸ್ ತೆಗೆಯಲೆಂದು ಬೊಬ್ಬೆ ಹಾಕುತ್ತಲೇ ಮನೆಯ ಕಿರುಬಾಗಿಲಿನ ಮೂಲಕ ಹೊರಗೆ ಓಡಿಹೋಗಿದ್ದಾರೆ. ಅಷ್ಟರಲ್ಲಾಗಲೇ ಮನೆಯ ಅಂಗಳದಲ್ಲಿದ್ದ ಅರ್ಥ್ ವಯರ್ನಿಂದ ವಿದ್ಯುತ್ ಶಾಕ್ಗೆ ಒಳಪಟ್ಟು ಅಲ್ಲೇ ಬಿದ್ದುಬಿಟ್ಟಿದ್ದಾರೆ. ಈ ವೇಳೆ ಆಗತಾನೆ ಮಲಗಿದ್ದ ಸಂಜೀವ ಮೂಲ್ಯರವರು ಪತ್ನಿಯ ಬೊಬ್ಬೆ ಕೇಳಿ ಮನೆಯ ಅದೇ ಕಿರು ಬಾಗಿಲಿನ ಮೂಲಕ ಹೊರಗಡೆ ಓಡಿ ಬಂದು ರಕ್ಷಿಸುವಷ್ಟರಲ್ಲಿ ಅವರೂ ಕೂಡಾ ಅರ್ಥ್ ವಯರ್ನ ವಿದ್ಯುತ್ ಶಾಕ್ಗೆ ಒಳಪಟ್ಟು ಸ್ಥಳದಲ್ಲೇ ಬಿದ್ದುಬಿಟ್ಟಿದ್ದು, ದಂಪತಿಗಳಿಬ್ಬರ ಪ್ರಾಣಪಕ್ಷಿ ಅದಾಗಲೇ ಹಾರಿಹೋಗಿದೆ. ಮನೆಯಲ್ಲಿದ್ದ ಪುತ್ರಿ ಅಶ್ಚಿತಾ ಹಾಗೂ ಸಂಬಂಧಿ ಸುಜಿತ್ ಮನೆಯ ಮುಂಭಾಗಿಲಿನಿಂದ ಹೊರಗಡೆ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಸ್ವಿಚ್ ಬೋರ್ಡ್ ಹಾಗೂ ವಯರಿಂಗ್ ಬೆಂಕಿಗೆ ಸುಟ್ಟು ಕರಕಲಾಗಿದ್ದು, ಸ್ವಿಚ್ಬೋರ್ಡ್ ಬಳಿಯಲ್ಲಿದ್ದ ಸೋಪಾವೂ ಬೆಂಕಿಗಾಹುತಿಯಾಗಿದೆ.
ತೀರಾ ಬಡ ಕುಟುಂಬ
ಪ್ರಗತಿಪರ ಕೃಷಿಕರಾಗಿದ್ದ ಸಂಜೀವ ಮೂಲ್ಯರವರು ಹಲವು ಕಡೆ ಪ್ರಶಸ್ತಿಗಳನ್ನು ಪಡೆದುಕೊಂಡವರು. ಸರೋಜಿನಿ ಬೀಡಿ ಕಟ್ಟಿ ಮನೆಯ ಖರ್ಚು ನೋಡಿಕೊಳ್ಳುತ್ತಿದ್ದರು. ಪುತ್ರಿ ಅಶ್ವಿತಾ ವಾಮದಪದವು ಸ.ಪ್ರ.ದ. ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆಯ ಖರ್ಚು ವೆಚ್ಚಗಳನ್ನು ಪೂರೈಸುತ್ತಿದ್ದ ದಂಪತಿ ಏಕೈಕ ಪುತ್ರಿಗೆ ಶಿಕ್ಷಣವನ್ನೂ ನೀಡುತ್ತಿದ್ದರು. ಇದೀಗ ಹೆತ್ತವರನ್ನು ಕಳೆದುಕೊಂಡ ಪುತ್ರಿ ಅನಾಥೆಯಾಗಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವೇಣೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಶಾಸಕ ಹರೀಶ್ ಪೂಂಜ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ಸಹಾಯಕ ಅಧೀಕ್ಷಕ ಸೈದುಲ್ಲಾ ಅಡಾವತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರಾನ್ಸ್ಫಾರ್ಮರ್ನಲ್ಲೂ ಬೆಂಕಿ
ಟ್ರಾನ್ಸ್ಫಾರ್ಮರ್ಗೆ ಏಕಾಏಕಿ ಅಧಿಕ ಪ್ರಮಾಣದ ವಿದ್ಯುತ್ ಪ್ರವಾಹಿಸಿದ ಪರಿಣಾಮ ಟ್ರಾನ್ಸ್ಫಾರ್ಮರ್ನಲ್ಲಿ ಭಾರೀ ಶಬ್ಧದೊಂದಿಗೆ ಬೆಂಕಿಕಾಣಿಸಿಕೊಂಡಿದೆ. ಪರಿಣಾಮವಾಗಿ ಸ್ಥಳದಲ್ಲಿದ್ದ ಪೊದೆಯೂ ಬೆಂಕಿಗಾಹುತಿಯಾಗಿದೆ. ಈ ಟ್ರಾನ್ಸ್ಫಾರ್ಮರ್ನಿಂದ ಸಂಪರ್ಕಿಸುವ ಮೂರ್ನಾಲ್ಕು ಮನೆಗಳ ವಯರಿಂಗ್ಗಳು ಸುಟ್ಟುಹೋಗಿದೆ.
ಆಕಸ್ಮಿಕವಾಗಿ ಮೃತಪಟ್ಟ ಸಂಜೀವ ಮೂಲ್ಯ-ಸರೋಜಿನಿ ದಂಪತಿಯ ಕುಟುಂಬಕ್ಕೆ ಪರಿಹಾರ ಮೊತ್ತ ಘೋಷಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.