ನೆರಿಯದಲ್ಲಿ ತುಳುನಾಡ ಪುರುಷ ಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನೆರಿಯ: ತಾಲೂಕಿನ ಹಲವು ಗ್ರಾಮಗಳಲ್ಲಿ ಪುರ್ಸಪೂಜೆಯು ಆಚರಣೆಯಲ್ಲಿದ್ದು ನೆರಿಯ ಗ್ರಾಮದಲ್ಲಿ ಕಳೆದ 40 ವರ್ಷಗಳಿಗಿಂತಲೂ ಹಿಂದಿನಿಂದ ಆಚರಿಸಿಕೊಂಡು ಬರುತ್ತಿದ್ದು ಈ ಪುರುಷರ ಬಳಗದಲ್ಲಿ ಗ್ರಾಮದಲ್ಲಿ ನಡೆಯುವ ಸಮಾರಂಭಗಳಿಗೆ ಮಿತ ಬಾಡಿಗೆಯಲ್ಲಿ ಪಾತ್ರೆ, ಮೇಜು, ಕುರ್ಚಿಗಳು ದೊರೆಯುತ್ತಿದ್ದು ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ.
ನಮ್ಮ ತುಳುನಾಡು ಹಲವು ವಿಶೇಷ ಧಾರ್ಮಿಕ ಆಚರಣೆಗಳಾದ ಆಟಿಕಳೆಂಜ ಕರಂಗೋಲು, ಪಿಲಿಪಂಜೆ, ಪುರ್ಸಪೂಜೆಯಂತಹ ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಏಕತೆಯನ್ನು ಸಾರುವ ಸಂಭ್ರಮದ ಹಬ್ಬಗಳು. ಇಂತಹ ಆಚರಣೆಗಳಲ್ಲಿ ಪುರ್ಸಪೂಜೆಯೂ ಒಂದು. ತುಳು ತಿಂಗಳಾದ ಸುಗ್ಗಿಯ ಹುಣ್ಣಿಮೆ ವಿಶೇಷ.ಸುಗ್ಗಿಕಾಲ ಕೃಷಿ ಚಟುವಟಿಕೆಗಳ ಸಂಭ್ರಮದ ಕಾಲ ಗದ್ದೆ ಸಾಗುವಳಿಯ ಹೊತ್ತು. ಪ್ರಾಚೀನ ಕಾಲದಲ್ಲಿ ಕೃಷಿಕರು ಸುಗ್ಗಿಯ ಕಾಲದಲ್ಲಿ ತಮ್ಮನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಭಾಗಿಯಾಗುವುದು ವಿರಳ. ಇಂತಹ ಸಂದರ್ಭದಲ್ಲಿ ಜನರೇಕೆ ದೇವಾಲಯಕ್ಕೆ ಬರುತ್ತಿಲ್ಲ? ಎಂದು ದೇವರಿಗೆ ಕುತೂಹಲ ಉಂಟಾಗುತ್ತದೆ. ಕದ್ರಿಯಲ್ಲಿರುವ ಶಿವ ಪಾರ್ವತಿಗೂ ಬೇಸರವಾಗುತ್ತದೆ. ಜೋಗಿಮಠಕ್ಕೆ ಬಂದ ಶಿವನಿಗೆ ಎಲ್ಲೆಂದರಲ್ಲಿ ಗದ್ದೆ ಬಯಲಿನಲ್ಲಿ ಪಾಡ್ಡನ ಸಂದಿಯ ಸಂಭ್ರಮದಲ್ಲಿ ರೈತಾಪಿ ವರ್ಗದವರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ಮನಗಂಡು ತಾನೇ ಜನರ ಬಳಿಗೆ ಹೋಗಬೇಕೆಂದು ತೀರ್ಮಾನಿಸುತ್ತಾನೆ. ಪಾರ್ವತಿಯೂ ಶಿವನ ಜತೆ ಹೊರಡುತ್ತಾಳೆ. ತಮ್ಮ ನಿಜರೂಪದಲ್ಲಿ ಹೋಗದೆ ಕೊರಗ ಕೊರಪೊಳ್ದಿ ರೂಪದಲ್ಲಿ ಕದ್ರಿಯಿಂದ ರಾತ್ರಿಯೇ ಹೊರಡುತ್ತಾರೆ. ಹೀಗೆ ಹೊರಟು ಬರುವಾಗ ದ್ವಾರಪಾಲಕನಾದ ಕೊಡಮಣಿಂತಾಯನಿಗೆ ತಿಳಿದು ಶಿವ ಪಾರ್ವತಿಯರಿಗೆ ತಿಳಿಯದ ಹಾಗೆ ಹಿಂಬಾಲಿಸುತ್ತಾನೆ. ಇವರೊಂದಿಗೆ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ, ಊರೂರು ತಿರುಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮೊಟ್ಟಿಕಲ್ಲು ಸಾಯಿಬ. ಎಲ್ಲವನ್ನು ತ್ಯಾಗಮಾಡಿರುವ ಸನ್ಯಾಸಿ, ಅಲ್ಲದೆ ಪ್ರತಿನಿತ್ಯ ದೇವಸ್ಥಾನದ ಚಾಕರಿ ಮಾಡುತ್ತಿದ್ದ ಗುತ್ತಿನಾರ್ ಎಂಬಾತ ಅವರೊಂದಿಗೆ ಸೇರಿಕೊಳ್ಳುತ್ತಾರೆ. ಈ ಕಥೆಯನ್ನು ಹಿರಿಯರು – ಮಾಯಿಪೋದು ಸುಗ್ಗಿ ಪತ್ತುನ ಪುಣ್ಣಮೆಗ್ ಮೂಜಿದಿನತ ಗೊಬ್ಬು ಗೊಬ್ಬೊಡುಂದು ಐವೆರ್ ಪುರುಷೆರ್, ಮೂವೆರ್ ಸನ್ಯಾಸಿ, ಒರಿದೈವಗ್ ತೋಜಿದ್ ಬತ್ತಂಡ್ ಎಂದು ಹೇಳುವ ಮೂಲಕ ತಿಳಿಸಿಕೊಡುತ್ತಾರೆ. ಸುಗ್ಗಿ ಹುಣ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಹಲವು ವೇಷಗಳನ್ನು ಧರಿಸಿ ಬಿದಿರಿನ ಕೋಲನ್ನು ಹಿಡಿದು ದಿಮಿಸೋಲೆ ಪದಗಳನ್ನು ಹಾಡಿಕೊಂಡು ಮನೆ ಮನೆಗೆ ತೆರಳುತ್ತಾರೆ. ದೇವರ ಪೀಠಕ್ಕೆ ಕನ್ನಡಿ ಇಟ್ಟು ಈ ಸಂದರ್ಭದಲ್ಲಿ ಅರಳುವ ದಡ್ಡ್ ಸಂಪಿಗೆ, ಅಬ್ಬಲಿಗೆ ಹೂವಿನಿಂದ ಅಲಂಕರಿಸಿ ನಾದಸ್ವರ ಬ್ಯಾಂಡ್ ವಾಲಗದೊಂದಿಗೆ ತಂಡವು ಮನೆ ಮನೆಗೆ ಸಾಗುತ್ತದೆ. ಮನೆಬಾಗಿಲಿಗೆ ಬಂದ ತಂಡವನ್ನು ದೀಪ ಬೆಳಗಿ ಮನೆಯ ಯಜಮಾನ ಬರಮಾಡಿಕೊಳ್ಳುತ್ತಾನೆ. ಹಾಗೂ ಅಕ್ಕಿ, ತೆಂಗಿನಕಾಯಿ ಹಣವನ್ನು ನೀಡಿ ಸತ್ಕರಿಸುತ್ತಾರೆ. ಹುಣ್ಣಿಮೆಯ ಮುನ್ನಾದಿನ ಅಥವಾ ನಂತರದ ಒಂದು/ಮೂರು/ಐದು ದಿನಗಳಲ್ಲಿ ಮಾತ್ರ ಮನೆಮನೆಗೆ ತೆರಳುತ್ತಾರೆ. ನಂತರ ಎಲ್ಲರೂ ಒಂದು ಕಡೆ ಸೇರಿ ರಾಶಿ ಪೂಜೆ ನೆರವೇರಿಸಿ ಅವಲಕ್ಕಿಯನ್ನು ಪ್ರಸಾದ ರೂಪವಾಗಿ ಹಂಚುತ್ತಾರೆ.
ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ಪುರ್ಸಕಟ್ಟುವ ಹಬ್ಬದಲ್ಲಿ ಹಿರಿಯರೊಂದಿಗೆ ಕಿರಿಯರು ಸೇರಿ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯ ಎಂದು ಹಿರಿಯರಾದ ನೆರಿಯ ಗ್ರಾಮದ ಪೆರ್ಣ ಗೌಡರು ಅಭಿಪ್ರಾಯಪಡುತ್ತಾರೆ. – ಪೆರ್ಣ ಗೌಡ ನೆರಿಯ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.