ಬರಡಾದ ಸೋಮಾವತಿ ನದಿ: ನಗರದಲ್ಲಿ ನೀರಿಗೆ ತತ್ವಾರ

Advt_NewsUnder_1
Advt_NewsUnder_1
Advt_NewsUnder_1

ಖಾಸಗಿ ಕೊಳವೆ ಬಾವಿಗಳನ್ನು ಆಶ್ರಯಿಸಿದ ನ.ಪಂ

ಬೆಳ್ತಂಗಡಿ: ಬೆಳ್ತಂಗಡಿ ನಗರಕ್ಕೆ ನೀರಿನ ಆಶ್ರಯವಾಗಿದ್ದ ಸೋಮಾವತಿ ನದಿ ಈ ಬಾರಿಯ ಸುಡು ಬಿಸಿಲಿಗೆ ಬರಡು ಭೂಮಿಯಂತಾಗಿದಿದೆ. ನೀರಿನ ಅಂತರ್ಜಲ ಕುಸಿತದಿಂದ ನದಿ ನೀರು ಬತ್ತಿ ಹೋಗಿದ್ದು, ನಗರದಲ್ಲಿ ಕುಡಿಯುವ ನೀರಿಗೆ ತತ್ವಾರ ಕಂಡು ಬಂದಿದೆ.
ಬೆಳ್ತಂಗಡಿ ನಗರಕ್ಕೆ ಹಿಂದೆ ಸೋಮಾವತಿ ನದಿ ನೀರು ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಆಶ್ರಯವಾಗಿತ್ತು. ಇಲ್ಲಿ ಪ್ರತಿ ವರ್ಷ ಮಣ್ಣಿನ ಒಡ್ಡು ನಿರ್ಮಿಸಿ ಎಪ್ರಿಲ್-ಮೇ ತನಕ ಜ್ಯಾಕ್‌ವೆಲ್ ಮೂಲಕ ನೀರು ಶುದ್ಧೀಕರಿಸಿ ನಗರದ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸೋಮಾವತಿ ಹೊಳೆಯಲ್ಲಿ ನೀರಿಲ್ಲ. ನಗರದ ಜನರಿಗೆ ನೀರಿನ ಆಶ್ರಯ ತಾಣವಾಗಿದ್ದ ಈ ಹೊಳೆಯಲ್ಲಿ ನೀರು ಬತ್ತಿ ಹೋಗಿದೆ. ಈ ವರ್ಷ ಜನವರಿಯಿಂದಲೇ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದು ಮಾರ್ಚ್‌ನಲ್ಲಿ ನೀರಿಲ್ಲದೆ ನದಿ ಬರಡು ಭೂಮಿಯಂತೆ ಕಂಡು ಬರುತ್ತಿದೆ. ಕುಡಿಯುವ ನೀರಿಗಾಗಿ ಇಲ್ಲಿ ಮಣ್ಣಿನ ಒಡ್ಡು ಕಟ್ಟಿದ್ದರೂ ಅದರಲ್ಲಿಯೂ ನೀರು ಇಲ್ಲದೆ ಸಂಕಷ್ಟ ಎದುರಾಗಿದೆ.

ರೂ.13 ಕೋಟಿಯ ಯೋಜನೆ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರೂ. 13 ಕೋಟಿ ವೆಚ್ಚದಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಸೋಮವತಿ ನದಿಯಿಂದ ಜ್ಯಾಕ್‌ವೆಲ್ ಮೂಲಕ ನೀರೆತ್ತಿ, ಕೊಟ್ಲ ಗುಡ್ಡೆಯಲ್ಲಿರುವ ಜಲಶುದ್ಧೀಕರಣ ಘಟಕಕ್ಕೆ ಪೈಪ್ ಮೂಲಕ ಸಾಗಿಸಿ, ಅಲ್ಲಿಂದ ಶುದ್ಧ ಕುಡಿವ ನೀರನ್ನು ನ.ಪಂ ವ್ಯಾಪ್ತಿಯಲ್ಲಿ ಒದಗಿಸಲಾಗುತ್ತಿತ್ತು. ಕಳೆದ ವರ್ಷ ನದಿಯಿಂದ ರೂ.8 ಲಕ್ಷ ಲೀ. ನೀರನ್ನು ದಿನವೊಂದರಲ್ಲಿ ಪಡೆಯಲಾಗುತ್ತಿತ್ತು. ಆದರೆ ಈ ಬಾರಿ ನದಿ ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ಬರ ಬಂದಿದೆ.

ನೀರು ಪೂರೈಕೆ ಅವಧಿ ಕಡಿತ : ನ.ಪಂ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳ ಬಳಕೆದಾರರಿಗೆ ಬೋರ್‌ವೆಲ್ ಹಾಗೂ ನದಿಯಿಂದ ಶುದ್ಧೀಕರಿಸಿದ ನೀರನ್ನು ಕೊಟ್ಲಗುಡ್ಡೆ ಮತ್ತು ಕೋರ್ಟು ಸಮೀಪದ 2.5 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ಗಳಿಗೆ ಪೂರೈಕೆ ಮಾಡಿ ಅಲ್ಲಿಂದ ವಾರ್ಡ್‌ಗಳ ಮನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ನದಿಯ ನೀರು ಬತ್ತಿ ಹೋಗಿರುವುದರಿಂದ ನ.ಪಂ ವ್ಯಾಪ್ತಿಯಲ್ಲಿ 14 ಕೊಳವೆ ಬಾವಿಗಳಿದ್ದು, ಅದರ ನೀರನ್ನು ಮಾತ್ರ ನೀಡಲಾಗುತ್ತಿದೆ. ಹಿಂದೆ ಬೇಕಾದಷ್ಟು ನೀರು ಸಿಗುತ್ತಿತ್ತು. ಆದರೆ ಈಗ ದಿನಕ್ಕೆ 2 ಗಂಟೆ ಮಾತ್ರ ಪೂರೈಕೆ ಮಾಡಲಾಗುತ್ತಿದೆ.

ಖಾಸಗಿ ಕೊಳವೆಯಿಂದ ನೀರು: ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರು ಪೂರೈಕೆ ಮಾಡುವ ಅವಧಿಯನ್ನು ಮತ್ತಷ್ಟೂ ಕಡಿಮೆಗೊಳಿಸುವ ಸಾಧ್ಯತೆಗಳಿವೆ. ಜೊತೆಗೆ ನದಿಯಲ್ಲಿ ನೀರಿಲ್ಲದಿರುವುದರಿಂದ ಖಾಸಗಿಯವರಿಂದ 3 ಕೊಳವೆ ಬಾವಿಗಳನ್ನು ನಗರ ಪಂಚಾಯತು ಪಡೆದುಕೊಂಡಿದೆ. ಜೊತೆಗೆ ನ.ಪಂದ 14 ಕೊಳವೆ ಬಾವಿಯಿಂದ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮಗಳನ್ನು ಕೈಗೊಂಡಿದೆ.

ತಹಶೀಲ್ದಾರರ ಸ್ಪಂದನೆ: ಸುದೇಮುಗೇರು ಪರಿಸರಕ್ಕೆ ಕಳೆದ 3 ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಜನರು ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ಇದರ ಬಗ್ಗೆ ನ.ಪಂ ಅಧಿಕಾರಿಗಳ, ಇಂಜಿನಿಯರ್‌ರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ಹೋದ 8 ನೇ ವಾರ್ಡಿನ ನಾಗರಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಚುನಾವಣಾ ಬಹಿಷ್ಕಾರ ಹಾಗೂ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧರಿಸಿದ್ದರು. ಈ ವಿಷಯವನ್ನು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿದ ಅವರು ವಾರ್ಡ್‌ನ ಮನೆಗಳಿಗೆ ಹಾಗೂ ನೀರು ಪೂರೈಕೆಯಾಗುವ ಕೊಳವೆ ಬಾವಿಯನ್ನು ಪರಿಶೀಲನೆ ನಡೆಸಿ ಜನರ ಕಷ್ಟಕ್ಕೆ ಸ್ಪಂದಿಸಿ ಕೂಡಲೇ ಅಲ್ಲಿಯೇ ಸಮೀಪದ ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡುವಂತೆ ಮೌಖಿಕವಾಗಿ ತಿಳಿಸಿದ ಹಿನ್ನಲೆಯಲ್ಲಿ ಈಗ ಸುದೇಮುಗೇರು ಪರಿಸರಕ್ಕೆ ಒಳ್ಳೆಯ ನೀರು ಬರುತ್ತಿದೆ ಎಂದು ನ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಡಿ. ತಿಳಿಸಿದ್ದಾರೆ.

ಬೆಳ್ತಂಗಡಿ ಸೋಮಾವತಿ ನದಿ ಬರಡಾಗಿದ್ದು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿದೆ. ಇದಕ್ಕಾಗಿ ಖಾಸಗಿಯಾಗಿ ೩ ಕೊಳವೆ ಬಾವಿಗಳನ್ನು ನಗರ ಪಂಚಾಯತು ಪಡೆದುಕೊಂಡಿದೆ. ಜೊತೆಗೆ ನ.ಪಂ ವ್ಯಾಪ್ತಿಯಲ್ಲಿ 14 ಕೊಳವೆ ಬಾವಿಗಳಿವೆ. ಇವುಗಳಿಂದ ನಗರದ ಜನರಿಗೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸುದೇಮುಗೇರು ಪರಿಸರದಲ್ಲಿ ಪೂರೈಕೆ ಮಾಡಲಾಗುತ್ತಿದ್ದ ನೀರು ಕಲುಷಿತಗೊಂಡ ದೂರು ಬಂದ ಹಿನ್ನಲೆಯಲ್ಲಿ ಅಲ್ಲಿಗೆ ಖಾಸಗಿಯಾಗಿ ಪಡೆದುಕೊಂಡ ಕೊಳವೆ ಬಾವಿಯಿಂದ ಈಗ ನೀರು ಪೂರೈಕೆ ಮಾಡಲಾಗುತ್ತಿದೆ.
– ಸುಧಾಕರ್ ಮುಖ್ಯಾಧಿಕಾರಿ ನ.ಪಂ ಬೆಳ್ತಂಗಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.