ನಾರಾವಿ: ವ್ಯಕ್ತಿಗೆ ಮಾರಕಾಯುಧದಿಂದ ಗಂಭೀರ ಹಲ್ಲೆ; ಮೂವರ ವಿರುದ್ಧ ಪ್ರಕರಣ ದಾಖಲು

ನಾರಾವಿ: ತಾಯಿಯ ಜೊತೆ ಕೆಲಸದ ಮನೆಯಲ್ಲಿ ನೆರೆಹೊರೆಯ ವ್ಯಕ್ತಿ ಸಲುಗೆಯಿಂದ ಮಾತನಾಡುತ್ತಿದ್ದಾರೆ ಎಂದು ಆಪಾದಿಸಿ ನಾರಾವಿ ಗ್ರಾಮದ ತುಂಬೆಗುಡ್ಡೆ ನಿವಾಸಿ ಕರಿಯ (45ವ.) ಎಂಬವರ ಮೇಲೆ ಮಹಿಳೆಯ ಇಬ್ಬರು ಮಕ್ಕಳು, ಮತ್ತೊಬ್ಬರು ಸೇರಿ ಗಂಭೀರ ಹಲ್ಲೆ ನಡೆಸಿ ಕೊಲೆಯತ್ನಗೈದಿರುವ ಪ್ರಕರಣ ನಡೆದಿದೆ.
ಘಟನೆಯಿಂದ ಗಾಯಗೊಂಡಿರುವ ಕರಿಯ ಅವರು ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಆರೋಪಿತರ ವಿರುದ್ಧ ಹಲ್ಲೆ, ಕೊಲೆಯತ್ನದಂತಹಾ ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಮಕ್ಕಳಾದ ರಮೇಶ, ಸಂತೋಷ ಮತ್ತು ಕೃಷ್ಣಪ್ಪ ಎಂಬವರೇ ಈ ಕೃತ್ಯವೆಸಗಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿರುವ ಕರಿಯ ಅವರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿರುವಂತೆ, ನೆರೆಮನೆಯ ಗುಲಾಬಿ ಎಂಬವರು ನಾರಾವಿ ಜಯವರ್ಮ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಅನ್ಯೋನ್ಯವಾಗಿ ಮಾತನಾಡಿಕೊಂಡಿರುವ ವಿಚಾರದಲ್ಲಿ ಗುಲಾಬಿಯ ಮಕ್ಕಳಾದ ಸಂತೋಷ ಮತ್ತು ರಮೇಶರವರಿಗೆ ಅಸಮಾದಾನ ಇತ್ತು. ಈ ಬಗ್ಗೆ ಹಿಂದೊಮ್ಮೆ ಕರಿಯ ಅವರಿಗೆ ಬೈದಿದ್ದರು, ಇದಾದ ಬಳಿಕ ಮಾ. 24 ರಂದು ರಜೆಯಾದ್ದರಿಂದ ರಾತ್ರಿ ನೆರೆಯ ಸುಶೀಲರವರು ವಾಸವಾಗಿರುವ ಬಿಡಾರದ ಹೊರೆಗೆ ಜಗಲಿಯಲ್ಲಿ ಕರಿಯ ಅವರು ಸುಶೀಲರ ಜೊತೆ ಮಾತನಾಡುತ್ತಿದ್ದ ಸಮಯ ಆರೋಪಿಗಳಾದ ರಮೇಶ, ಸಂತೋಷ, ಕೃಷ್ಣಪ್ಪ ಇವರುಗಳು ಕಬ್ಬಿಣದ ರಾಡು, ಕತ್ತಿ ಮತ್ತು ಕಬ್ಬಿಣದ ಸರಳಿನಿಂದ ಗಂಭೀರ ಹಲ್ಲೆ ನಡೆಸಿದ್ದರು. ಈ ವೇಳೆ ಇಬ್ಬರೂ ಬೊಬ್ಬೆ ಹೊಡೆದಾಗ ಜಾಗದ ಧಣಿ ಜಯವರ್ಮ ಮತ್ತು ಮನೆಯವರು ಆಗಮಿಸುತ್ತಲೇ ಆರೋಪಿಗಳು ಓಡಿ ಪರಾರಿಯಾಗಿದ್ದರು. ಬಳಿಕ ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಆರೋಪಿತರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 324, 326, 307, 504, 506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.