ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಜೊತೆಯಾಗಿ ಕೆಲಸ: ಮಾಜಿ ಸಚಿವ ಅಮರನಾಥ ಶೆಟ್ಟಿ

ಜೆಡಿಎಸ್ ಪಕ್ಷದಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ರಾಜ್ಯ ಸರಕಾರದ ಮೈತ್ರಿ ಹಿನ್ನೆಲೆಯಲ್ಲಿ ದ. ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲಿದ್ದು ಹೈಕಮಾಂಡ್ ಸೂಚನೆಯಂತೆ ಇಲ್ಲಿ ಉಡುಪಿ ಮತ್ತು ದ.ಕ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಯ ಗೆಲುವಿಗೆ ಮಿತ್ರಪಕ್ಷಗಳು ಜೊತೆ ಸಮನ್ವಯತೆಯಿಂದ ಕೆಲಸ ಮಾಡಲಿದ್ದೇವೆ ಎಂದು ಮಾಜಿ ಸಚಿವ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ ಅಮರನಾಥ ಶೆಟ್ಟಿ ಹೇಳಿದರು.
ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ಮಾ. 18 ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂದು ಸಂಜೆಯೊಳಗೆ ಅಭ್ಯರ್ಥಿ ಘೋಷಣೆ ಆಗಲಿದ್ದು, ನಮ್ಮ ಕಾರ್ಯಕರ್ತರು ವೈಮನಸ್ಸು ದೂರ ಇಟ್ಟು ಕೆಲಸ ಮಾಡಲಿದ್ದಾರೆ ಎಂದರು.
ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆ ಮೈತ್ರಿ: ವಿಟ್ಲ ಮುಹಮ್ಮದ್‌ಕುಂಞಿ
ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್‌ಕುಂಞಿ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲು ಎರಡು ಅವಧಿಯಲ್ಲಿ ಜಿಲ್ಲೆಯ ಜನರ ಭಾವನೆ ಕೆರಳಿಸುವ ಕೆಲಸ ಮಾಡಿದ್ದಾರೆಯೇ ಹೊರತು ಬೇರೆ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ, ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ಜಿಲ್ಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಘೋಷಿಸುವ ಅಭ್ಯರ್ಥಿಯನ್ನು ಗೆಲ್ಲಿಸಲು ಮತ್ತು ಅವರ ಪರ ಮತಯಾಚನೆಗೆ ಮನೆ ಮನೆಗೆ ಹೋಗಲು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಜೊತೆ ನಾವು ತೊಡಗಿಸಿಕೊಳ್ಳಲಿದ್ದೇವೆ, ಬಿಜೆಪಿ ಸೋಲಿಸುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಇಡೀ ಜಿಲ್ಲೆಯಾಧ್ಯಂತ ಎಲ್ಲ ತಾಲೂಕುಗಳಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದೇವೆ ಎಂದರು.
ನಳಿನ್‌ರಿಂದ ಯಾವುದೂ ಆಗಿಲ್ಲ:
ಯಾವುದೇ ಹೆದ್ದಾರಿಗಳಾಗಲೀ, ಪಂಪ್‌ವೆಲ್ ಮೇಲ್ಸೇತುವೆಯಾಗಲಿ ನಳಿನ್‌ರಿಂದ ಪೂರ್ಣಗೊಳಿಸಲು ಆಗಿಲ್ಲ, ಸೈನಿಕರಿಗೆ ಸರಿಯಾಗಿ ಊಟ, ಬಟ್ಟೆ, ಪಿಂಚಣಿ ಸಿಗುತ್ತಿಲ್ಲ. ಆದರೆ ಯುದ್ಧದ ಮೂಲಕ ಜನರ ಭಾವನೆ ಸೆಳೆಯಲು ಪ್ರಯತ್ನ ಮಾಡಲಾಗುತ್ತಿದೆ. ಗ್ಯಾಸ್ ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ಜನತೆಗೆ ನೀಡಿದ ಯಾವುದೇ ಭರವಸೆ ಬಿಜೆಪಿ ಈಡೇರಿಸಿಲ್ಲ. ಆ ನಿಟ್ಟಿನಲ್ಲಿ ಈ ಬಾರಿ ಗೆಲುವ ನಮ್ಮದೇ ಎಂದರು.
ಗೋಷ್ಠಿಯಲ್ಲಿ ಪಕ್ಷದ ತಾ| ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಕಾರ್ಯದರ್ಶಿ ರಾಮ ಆಚಾರಿ, ಸಂ. ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಎಸ್ ಹೆಗ್ಡೆ, ತಾ| ಅಧ್ಯಕ್ಷೆ ಸಿಂಧೂದೇವಿ, ಜಿಲ್ಲಾ ಯುವ ಘಟಕದ ಪ್ರ. ಕಾರ್ಯದರ್ಶಿ ಮಧುಸೂದನ ಗೌಡ, ತಾ| ಅಧ್ಯಕ್ಷ ಸೂರಜ್ ವಳಂಬ್ರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೆರಿಂಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.