17ನೇ ಲೋಕಸಭಾ ಚುನಾವಣೆ: ದ.ಕ. ಕ್ಷೇತ್ರದಿಂದ ಸಂಸತ್ ಪ್ರವೇಶಿಸುವವರು ಯಾರು..?

ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಬಹುತೇಕ ಫೈನಲ್
ಕಾಂಗ್ರೆಸ್‌ನಲ್ಲಿ ರೈ, ಸೊರಕೆ ಸಹಿತ ಹಲವರ ಹೆಸರು ರೇಸ್‌ನಲ್ಲಿ: ಹೈಕಮಾಂಡ್‌ನಲ್ಲಿ ಚರ್ಚೆ

ಬೆಳ್ತಂಗಡಿ: ಕುತೂಹಲದಿಂದ ಕಾಯಲಾಗುತ್ತಿರುವ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿ ದ್ದಂತೆಯೇ ಮಂಗಳೂರು ಕ್ಷೇತ್ರದಿಂದ ಸಂಸತ್ ಪ್ರವೇಶಿಸುವವರು ಯಾರು ಎಂಬ ಚರ್ಚೆ ತೀವ್ರಗೊಂಡಿದೆ. 17ನೇ ಲೋಕಸಭಾ ಚುನಾವಣೆಗೆ ದ.ಕ. ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಕಣಕ್ಕಿಳಿಯುವುದು ಬಹುತೇಕ ಫೈನಲ್ ಆಗಿದೆ.
2014ರ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಸಂಸದರು ಬಿಜೆಪಿಯಿಂದ ಗೆದ್ದು ಬಂದಿದ್ದರು. ಬಳ್ಳಾರಿಯ ಉಪಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ಬಿಜೆಪಿಯ ಸಂಸದರ ಸಂಖ್ಯೆ 16 ಕ್ಕಿಳಿದಿತ್ತು. ಇದೀಗ ೨೦೧೯ರ ಚುನಾವಣೆಯಲ್ಲಿ22 ಸಂಸದರನ್ನು ರಾಜ್ಯದಿಂದ ಸಂಸತ್‌ಗೆ ಕಳುಹಿಸಿಕೊಡುವ ಹೊಣೆಗಾರಿಕೆ ಹೊಂದಿರುವ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಲಿ ಸಂಸದರ ಪೈಕಿ ಬಹುತೇಕ ಮಂದಿಗೆ ಮತ್ತೆ ಅವಕಾಶ ನೀಡುವುದು ಪಕ್ಕಾ ಎಂದು ಈಗಾಗಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ನಾಯಕರು ನಳಿನ್ ಕುಮಾರ್ ಅವರು3 ನೇ ಬಾರಿ ಕಣಕ್ಕಿಳಿಯುವುದು ಖಚಿತ ಎಂದು ಹೇಳುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರೂ ಕೂಡ ನಮ್ಮ ಕ್ಷೇತ್ರದಿಂದ ಮತ್ತೆ ನಳಿನ್ ಅವರೇ ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಗೊಂದಲಕ್ಕೆ ಒಂದು ಹಂತದಲ್ಲಿ ತೆರೆ ಎಳೆದಿದ್ದಾರೆ. ಆದರೆ ಅಭ್ಯರ್ಥಿಯ ಹೆಸರನ್ನು ಅಧಿಕೃತ ಘೋಷಣೆ ಮಾಡುವುದು ಮಾತ್ರ ಇನ್ನೂ ಬಾಕಿ ಇದೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ನಳಿನ್ ಕುಮಾರ್‌ಗೆ ಪೈಪೋಟಿ ಕೊಡುವ ಕಾಂಗ್ರೆಸ್‌ನ ಸಮರ್ಥ ಅಭ್ಯರ್ಥಿ ಯಾರಾಗಬಹುದು ಎಂಬ ಲೆಕ್ಕಾಚಾರ ಈಗ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವರುಗಳದ ವಿನಯ ಕುಮಾರ್ ಸೊರಕೆ, ಬೆಳ್ಳಿಪ್ಪಾಡಿ ರಮಾನಾಥ ರೈ, ಎಐಸಿಸಿ ಪ್ರ. ಕಾರ್ಯದರ್ಶಿಯೂ ಆಗಿರುವ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿರುವ ಐವನ್ ಡಿಸೋಜಾ, ಅಲ್ಪಸಂಖ್ಯಾತ ಘಟಕದ ಮುಂದಾಳು ಕಣಚೂರು ಮೋನು ಹಾಜಿ ಸೇರಿದಂತೆ ಹಲವರ ಹೆಸರು ರೇಸ್‌ನಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇರುವ ಹಿನ್ನೆಲೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಅಂತಿಮ ಆಯ್ಕೆಗಾಗಿ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಚರ್ಚೆ ನಡೆಸುತ್ತಿದೆ. ಇನ್ನು ಎಸ್‌ಡಿಪಿಐ ಸೇರಿದಂತೆ ಇತರ ರಾಜಕೀಯ ಪಕ್ಷಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ತುದಿಗಾಲಲ್ಲಿ ನಿಂತಿದೆ. ಮುಂದಿನ ರವಿವಾರ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ತಿಳಿಸಿದ್ದಾರೆ.
ಹ್ಯಾಟ್ರಿಕ್ ಸಾಧನೆಯತ್ತ ಕಟೀಲ್ ಚಿತ್ತ: ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಕಟ್ಟಡ ಗುತ್ತಿಗೆದಾರ ರಾಗಿದ್ದವರು. ಆರ್‌ಎಸ್‌ಎಸ್ ಪ್ರಚಾರಕ ರಾಗಿ ಜಿಲ್ಲೆಯಾದಂತ ಗುರುತಿಸಿ ಕೊಂಡಿದ್ದವರು. ಬಳಿಕ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ, ಜಿಲ್ಲಾ ಬಿಜೆಪಿಯ ಪ್ರ. ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು. ಗ್ರಾಮ ಪಂಚಾಯತ್ ಮಟ್ಟದ ಜನಪ್ರತಿನಿಧಿಯೂ ಆಗಿರದ ನಳಿನ್ ಅವರು ಅಚ್ಚರಿ ಎಂಬಂತೆ ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ಧುರೀಣ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ವಿರುದ್ಧ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು. ಅಷ್ಟೂ ಮಾತ್ರವಲ್ಲದೆ ತನ್ನ ರಾಜಕೀಯ ಮೊದಲ ಎಂಟ್ರಿಯಲ್ಲೇ ಪೂಜಾರಿ ಅವರನ್ನು ಭರ್ಜರಿಯಾಗಿ ಸೋಲಿಸಿ ಎಲ್ಲರ ಹುಬ್ಬೇರಿಸಿದ್ದರು. ಬಳಿಕ ೨೦೧೪ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಪರ ಅಲೆಯೊಂದಿಗೆ ನಳಿನ್ ಮತ್ತೊಮ್ಮೆ ಜನಾರ್ದನ ಪೂಜಾರಿ ಅವರನ್ನು ಮಣಿಸಿದ್ದರು.
ಸಂಘಟನೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ಕೇರಳ ಬಿಜೆಪಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ ಕಟೀಲ್ ಬಿಜೆಪಿಯ ಅಧ್ಯಕ್ಷರಾಗಲಿದ್ದಾರೆ ಮತ್ತು ಕೇಂದ್ರದಲ್ಲಿ ಸಚಿವರಾಗಲಿದ್ದಾರೆ ಎನ್ನುವಷ್ಟರ ಮಟ್ಟಿಗೆ ಪಕ್ಷದಲ್ಲಿ ವರ್ಚಸ್ಸು ಬೆಳೆಸಿಕೊಂಡರಲ್ಲದೆ ರಾಜ್ಯದ ನಂಬರ್ ಒನ್ ಸಂಸದ ಎಂದೂ ಕರೆಸಿಕೊಂಡರು. ಮಾತ್ರವಲ್ಲದೆ ಪಕ್ಷದ ವರಿಷ್ಠರ ಆಪ್ತರಾಗಿಯೂ ಬೆಳೆದರು. ೨೦೧೮ರ ವಿಧಾನಸಭಾ ಚುನಾವಣೆಯ ವೇಳೆ ಜಿಲ್ಲೆಯ ೮ ಕ್ಷೇತ್ರಗಳ ಪೈಕಿ ೭ ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗುವ ಮೂಲಕ ತನ್ನ ಪ್ಲಾಟ್‌ಫಾರಂ ಸಿದ್ಧ ಮಾಡಿಕೊಂಡಿದ್ದ ನಳಿನ್ ಅವರು ಇದೀಗ ಹ್ಯಾಟ್ರಿಕ್ ಸಾಧನೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವರ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ನಡೆದ ಬಿಜೆಪಿಯ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಯೂ ನಳಿನ್‌ರಿಗಿದೆ. ಇದೇ ಮಾನದಂಡ ಅವರ ಮರು ಆಯ್ಕೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ರಾಜಕೀಯ ಸಮರಕ್ಕೆ ಧುಮುಕಿದ ಸಂಘ ಪರಿವಾರ ನಾಯಕರು:

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಪರಿವಾರ ಸಂಘಟನೆಗಳ ನಾಯಕರು ನೇರವಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಭಾರತೀಯ ಜನತಾ ಪಾರ್ಟಿಯನ್ನು ಅಧಿಕೃತವಾಗಿ ಸಂಘ ಪರಿವಾರದಡಿಯ ಸಂಘಟನೆ ಎಂದು ಹೇಳಲಾಗುವುದಿಲ್ಲ. ಆದರೆ, ರಾಷ್ಟ್ರೀಯತೆ ಮತ್ತು ಹಿಂದುತ್ವಕ್ಕಾಗಿ ಬಿಜೆಪಿಯನ್ನು ಸಂಘ ಪರಿವಾರ ಬೆಂಬಲಿಸುತ್ತದೆ. ಬಿಜೆಪಿಗೆ ಬೇಕಾದ ಸಲಹೆ ಸೂಚನೆಗಳನ್ನು ಮಾತ್ರ ಆರ್‌ಎಸ್‌ಎಸ್ ನೀಡುತ್ತದೆ. ಬಿಜೆಪಿಯ ಕಾರ್ಯಕ್ರಮದಲ್ಲಾಗಲೀ, ಬಿಜೆಪಿಯ ವೇದಿಕೆಯಲ್ಲಾಗಲೀ ಸಂಘ ಪರಿವಾರದ ಪ್ರಮುಖರು ಕಾಣಿಸಿಕೊಳ್ಳುವುದಿಲ್ಲ. ಆದರೆ, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಧುಮುಕಲು ಆರ್‌ಎಸ್‌ಎಸ್ ಬಹಿರಂಗವಾಗಿ ನಿರ್ಧರಿಸಿತ್ತು. ದೇಶಾದ್ಯಂತ ಆರ್‌ಎಸ್‌ಎಸ್ ಮತ್ತು ಅದರ ೪೦ಕ್ಕೂ ಅಧಿಕ ಪರಿವಾರ ಸಂಘಟನೆಗಳು ಬಿಜೆಪಿ ಗೆಲುವಿಗೆ ಅಹರ್ನಿಶಿಯಾಗಿ ದುಡಿದಿತ್ತು.
ಇದರ ಫಲ ಎಂಬಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಪರಿವಾರ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ನಿರೀಕ್ಷೆಯಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿದ್ದರು. ೨೦೧೮ರ ವಿಧಾನಸಭಾ ಚುನಾವಣೆಯ ವೇಳೆಯೂ ಸಂಘ ಪರಿವಾರ ಬಿಜೆಪಿ ಪರ ಪ್ರಚಾರಕ್ಕೆ ಕೈ ಜೋಡಿಸಿತ್ತು. ಪಕ್ಷದ ಕಾರ್ಯಕರ್ತರ ಜತೆ ಸಂಘದವರೂ ಉಸ್ತುವಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ದ.ಕ. ಜಿಲ್ಲೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಲು ಇದೂ ಕಾರಣವಾಗಿತ್ತು. ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿಯೂ ನಮಗೆ ಅಭ್ಯರ್ಥಿ ಮುಖ್ಯ ಅಲ್ಲ, ಚಿಹ್ನೆ, ದೇಶ ಮುಖ್ಯ ಎಂಬ ಸ್ಲೋಗನ್ ಹೇಳಲಾಗುತ್ತಿದೆ. ಬಿಜೆಪಿಯ ಕಾರ್ಯ ಚಟುವಟಿಕೆಗಳಲ್ಲಿ ಆರ್‌ಎಸ್‌ಎಸ್ ಪ್ರಮುಖರು ಉಸ್ತುವಾರಿಗಳಾಗಿ ಕಾರ್ಯತಂತ್ರ ನಡೆಸುತ್ತಿದ್ದಾರೆ. ವಿಶೇಷ ಎಂದರೆ ಕರ್ನಾಟಕದ ಕರಾವಳಿ ಭಾಗದ ಗ್ರಾಮ ಪಂಚಾಯತ್‌ಗಳಿಂದ ಹಿಡಿದು ಲೋಕಸಭೆವರೆಗಿನ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಮತ್ತು ನಳಿನ್ ಕುಮಾರ್ ಪ್ರಥಮ ಬಾರಿ ಸಂಸದರಾಗಲು ಪ್ರಮುಖ ಕಾರಣಕರ್ತರಾಗಿದ್ದ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು ಇತ್ತೀಚೆಗಿನ ಚುನಾವಣೆಯ ವೇಳೆ ಬಹುತೇಕ ಮೌನಕ್ಕೆ ಶರಣಾಗಿದ್ದಾರೆ.

ನಳಿನ್‌ರಿಗೆ ಪಕ್ಷದೊಳಗೆ ವಿರೋಧವೂ ಇದೆ!

2 ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಅವರು ೩ನೇ ಬಾರಿ ಸ್ಪರ್ಧಿಸುವುದಕ್ಕೆ ಬಿಜೆಪಿಯೊಳಗೇ ವಿರೋಧ ಇದೆ. ಅದರಲ್ಲೂ ಹಿಂದೂ ಸಂಘಟನೆಗಳ ಕೆಲವರು ನಳಿನ್‌ರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪಕ್ಷದ ಪ್ರಮುಖರು ನಳಿನ್ ಕುಮಾರ್ ಮರು ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರೊಂದಿಗೆ ನಳಿನ್‌ಗೆ ವಿರೋಧಿಗಳೂ ಕಾಣಿಸಿಕೊಂಡಿದ್ದಾರೆ. ಬುದ್ಧಿವಂತರ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ನಳಿನ್ ಕುಮಾರ್‌ಗೆ ಹಿಂದಿ, ಇಂಗ್ಲೀಷ್ ಭಾಷಾ ಜ್ಞಾನ ಇಲ್ಲ, ಇದರಿಂದಾಗಿ ಅವರು ಲೋಕಸಭೆಯಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ, ಇದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಸ್ವತಃ ಪಕ್ಷದೊಳಗೆ ಆಕ್ಷೇಪದ ಮಾತುಗಳು ಕೇಳಿ ಬಂದಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹೋರಾಟ, ಬಲಿದಾನದಿಂದ ಬಿಜೆಪಿ ಗೆಲುವು ಸಾಧಿಸುತ್ತಿದೆ, ಆದರೆ, ಹಿಂದೂ ಸಂಘಟಕರಿಗೆ ತೊಂದರೆಯಾದಾಗ ನಳಿನ್ ಕುಮಾರ್ ಸ್ಪಂದಿಸುವುದಿಲ್ಲ ಎಂದು ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಳಿನ್‌ರವರನ್ನು ಬದಲಾಯಿಸಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರೂ ಆಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರನ್ನು ಕಣಕ್ಕಿಳಿಸಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ. ಹಿಂದೂ ಸಂಘಟನೆಗಳ ಫೈರ್‌ಬ್ರಾಂಡ್
ಎಂದೇ ಕರೆಸಿಕೊಳ್ಳುವ ಸತ್ಯಜಿತ್ ಸುರತ್ಕಲ್ ಪರ ಜಿಲ್ಲೆಯ ವಿವಿಧೆಡೆ ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಇತ್ತೀಚಿಗೆ ಪಕ್ಷದೊಳಗೆ ನಡೆದ ಬೆಳವಣಿಗೆಯೊಂದರ ಬಳಿಕ ಸದ್ರಿ ಬ್ಯಾನರ್‌ಗಳನ್ನು ತೆರವುಗೊಳಿಸಲಾದ ವಿದ್ಯಮಾನವೂ ನಡೆದಿದೆ.
ಇದರೊಂದಿಗೆ ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ, ಮಾಜಿ ಸೈನಿಕರೂ ಆಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಳ್ಳುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರೂ ಜನರ ಬಾಯಲ್ಲಿ ಕೇಳಿ ಬರುತ್ತಿವೆ. ಮಂಗಳೂರಿನ ಪಂಪ್‌ವೆಲ್ ಫ್ಲೈವೋವರ್ ಇನ್ನೂ ಪೂರ್ಣಗೊಳ್ಳದ ಬಗ್ಗೆ ನಳಿನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಅವರದೇ ಪಕ್ಷದವರೂ ಇದ್ದಾರೆ ಎಂಬುದು ಗಮನಾರ್ಹವಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಹೇಗೆ ಪರಿಹರಿಸಿಕೊಂಡು ನಳಿನ್ ಮುನ್ನುಗ್ಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.