ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ: ಡಿ.ಸಿ.

ಬೆಳ್ತಂಗಡಿ: ಮುಂದಿನ ಎ.18 ರಂದು ಮಂಗಳೂರು ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಅಭ್ಯರ್ಥಿಗಳ ಪ್ರಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸಾಪ್, ಟ್ವಿಟರ್, ಫೇಸ್‌ಬುಕ್, ಗೂಗಲ್, ಶೇರ್ ಚಾಟ್ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಅಭ್ಯರ್ಥಿ ಪರ ವೈಯಕ್ತಿಕವಾಗಿ ನಡೆಸಲಾಗುವ ಪ್ರಚಾರದ ಮೇಲೂ ಚುನಾವಣಾ ಆಯೋಗ ಕಣ್ಣಿರಿಸಲಿದೆ ಎಂದು ದ. ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆಯಡಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಅನ್ವಯವಾಗುವ ಷರತ್ತು ಮತ್ತು ಕಾನೂನುಗಳು ಸಾಮಾಜಿಕ ಜಾಲತಾಣಗಳಿಗೂ ಅನ್ವಯವಾಗಲಿದೆ. ಹಾಗಾಗಿ ಅಭ್ಯರ್ಥಿ ಪರ ನಡೆಸಲಾಗುವ ಪ್ರಚಾರಕ್ಕೆ ನೇರವಾಗಿ ಅಭ್ಯರ್ಥಿ ಹೊಣೆಯಾಗುತ್ತಾರೆ. ಆ ಪ್ರಚಾರದ ಖರ್ಚು ವೆಚ್ಚವೂ ಸಂಬಂಧಪಟ್ಟ ಅಭ್ಯರ್ಥಿಯ ಖಾತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ಬಗ್ಗೆ ಗಮನಹರಿಸಬೇಕು. ಯಾವನೇ ವ್ಯಕ್ತಿ ಯಾವುದೇ ವ್ಯಕ್ತಿಯ ಪರ ಪ್ರಚಾರ ಮಾಡಿ ಸಂದೇಶಗಳನ್ನು ರವಾನಿಸಿದಾಗ ಅದು ತನಗೆ ಗೊತ್ತಿಲ್ಲ, ನನ್ನ ಅರಿವಿಗೆ ಬಾರದೆ ಪ್ರಚಾರ ಮಾಡಿದ್ದಾರೆಂಬ ಹೇಳಿಕೆಯನ್ನು ಅಭ್ಯರ್ಥಿ ನೀಡಿದ್ದಲ್ಲಿ ಪ್ರಚಾರ ಮಾಡಿದವರೇ ಕಾನೂನಿನಡಿ ಅಪರಾಧಿಗಳಾಗುತ್ತಾರೆ. ಹಾಗಾಗಿ ಅಭ್ಯರ್ಥಿಯ ಅನುಮತಿ ಇಲ್ಲದೆ ವೈಯಕ್ತಿಕವಾಗಿಯೂ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಚುನಾವಣಾ ನೀತಿ ಸಂಹಿತೆಯಡಿ ಅಪರಾಧವಾಗಲಿದೆ ಎಂದರು.
ದೂರದ ಒಳೆನಾಡು (ನಕ್ಸಲ್ ಪೀಡಿತ) ಪ್ರದೇಶಗಳಲ್ಲಿ ಕೇಂದ್ರ ಅರೆಸೇನಾ ಪಡೆ; ಎಸ್‌ಪಿ ಲಕ್ಷ್ಮೀ ಪ್ರಸಾದ್
ದ.ಕ. ಜಿಲ್ಲೆಯಲ್ಲಿ 46 ದೂರದ ಒಳನಾಡು ಪ್ರದೇಶ (ನಕ್ಸಲ್ ಪೀಡಿತ) ಬೂತ್‌ಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಚುನಾವಣಾ ಪ್ರಕ್ರಿಯೆಗಳು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದರು. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ೯,೬೨೧ ಮಂದಿ ಶಸ್ತ್ರಾಸ್ತ್ರ ಪರವಾನಿಗೆದಾರರಿದ್ದು, ಅವರು ಇದನ್ನು ಸಮೀಪದ ಠಾಣೆಗಳಲ್ಲಿ ಅವುಗಳನ್ನು ಠೇವಣಿಯಿರಿಸಬೇಕು. ಅಥವಾ ತಮ್ಮ ವೆಂಡರ್ ಬಳಿಯೂ ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಠೇವಣಿ ಇರಿಸಬಹುದು. ಜನಸಾಮಾನ್ಯರಲ್ಲಿ ಧೈರ್ಯ ತುಂಬುವ ದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆಗೆ ಧಕ್ಕೆ ತರುವವರ ಮೇಲೆ ಸ್ವಯಂ ಪ್ರೇರಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
3ಮಂದಿಯ ಗಡಿಪಾರಿಗೆ ಆದೇಶ: ಸಂದೀಪ್ ಪಾಟೀಲ್
ದ..ಕ. ಜಿಲ್ಲೆಯಲ್ಲಿ ಎ. 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪ್ರಕ್ರಿಯೆ ಮೇಲೆ ಧಕ್ಕೆ ತರಲು ಸಾಧ್ಯತೆ ಇರುವ ಮೂರು ಮಂದಿಯ ಗಡಿಪಾರಿಗೆ ಆದೇಶಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಮುಂದೆ ನೀಡುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು. ಶಾಂತಿಯುತ, ಪಾರದರ್ಶಕ ಚುನಾವಣೆಗೆ ಸಂಬಂಧಿಸಿ ಇಲಾಖೆಯು ಕೈಗೊಂಡಿರುವ ಅಗತ್ಯ ಕ್ರಮಗಳ ಭಾಗವಾಗಿ ಈ ಆದೇಶ ಮಾಡಲಾಗಿದ್ದು, ೫೦೦ಕ್ಕೂ ಅಧಿಕ ಮಂದಿಯ ಮೇಲೆ ಪ್ರಿವೆಂಟಿವ್ ಕೇಸ್ ದಾಖಲಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಕೇಂದ್ರ ಅರೆಸೇನಾ ಪಡೆಯಿಂದ ಜನರಲ್ಲಿ ವಿಶ್ವಾಸ, ಧೈರ್ಯ ತುಂಬುವ ನಿಟ್ಟಿನಲ್ಲಿ ರೂಟ್ ಮಾರ್ಚ್, ಫ್ಲಾಗ್ ಮಾರ್ಚ್ ನಡೆಸಲಾಗುವುದು ಎಂದರು.
ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯ:
ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ 24 ಗಂಟೆಯೂ ತಪಾಸಣಾ ಕಾರ್ಯ ಬಿಗಿಗೊಳಿಸಲಾಗಿದೆ. ಜಾಮೀನುರಹಿತ ವಾರೆಂಟ್‌ಗಳ ಕುರಿತಂತೆ ಬಾಕಿ ಇರುವವರ ಬಗ್ಗೆ ವಿಶೇಷ ತಂಡ ರಚಿಸಿ ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಚುನಾವಣೆಗೆ ಸಂಬಂಧಿಸಿ ಇಲಾಖೆಯ ಸಿಬ್ಬಂದಿಗೆ ತರಬೇತಿ ನಡೆಯಲಿದೆ. ರಾಜಕೀಯ ಧುರೀಣರಿಗೆ ಸೂಕ್ತವಾದ ಭದ್ರತೆ ನೀಡಲಾಗುವುದು ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.