HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಾ.16 : ವೇಣೂರು-ಪೆರ್ಮುಡ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳ

ಬೆಳ್ತಂಗಡಿ: ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ  ವೇಣೂರು-ಪೆರ್ಮುಡ ಹೊನಲು ಬೆಳಕಿನ 26 ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳ ಮಾ.16 ರಂದು ಜರುಗಲಿದೆ ಎಂದು ಮಾಜಿ ಶಾಸಕರು ಹಾಗೂ ಕಂಬಳ ಸಮಿತಿ ಗೌರವಾಧ್ಯಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮಾ.9 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 1992ರಲ್ಲಿ ಪ್ರಭಾಕರ ಹೆಗ್ಡೆ ಸ್ಥಾಪಕ ಅಧ್ಯಕ್ಷ ಹಾಗೂ ಜೆಪ್ರಿ ಫೆರ್ನಾಂಡೀಸ್ ಸ್ಥಾಪಕ ಕಾರ್ಯದರ್ಶಿಯಾಗಿ ಕಂಬಳ ಆರಂಭಗೊಂಡು 19 ವರ್ಷಗಳ ಕಾಲ ಜೀವಂಧರ ಜೈನ್ ಅಧ್ಯಕ್ಷರಾಗಿ ಕಂಬಳವನ್ನು ಮುನ್ನಡೆಸಿದ್ದರು. ಒಂದು ವರ್ಷ ಶ್ರೀನಿವಾಸ ಶೆಟ್ಟಿ ಅಂಕರ್ಜಾಲು ಹಾಗೂ ಇನ್ನೊಂದು ವರ್ಷ ವಲೇರಿಯನ್ ಲೋಬೊ ಅಧ್ಯಕ್ಷರಾಗಿದ್ದರು. ಕಳೆದ ವರ್ಷ ಬೆಳ್ಳಿ ಹಬ್ಬದ ಕಂಬಳವನ್ನು ನಿತೀಶ್ ಹೆಚ್. ಇವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಸಲಾಗಿತ್ತು. ಈ ಸಮಯ 24  ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗಿತ್ತು. ಅಲ್ಲದೆ 111  ಓಟದ ಕೋಣಗಳು ಇದರಲ್ಲಿ ಭಾಗವಹಿಸಿರುವುದು ಹೊಸ ದಾಖಲೆಯಾಗಿತ್ತು. ಪ್ರಾರಂಭದ ವರ್ಷ ಮತ್ತು 25 ನೇ ವರ್ಷದಲ್ಲಿ ಒಂದು ಪವನ್ ಹಾಗೂ ೨ ಪವನ್ ಬಹುಮಾನವನ್ನು ನೀಡಲಾಗಿತ್ತು ಎಂದು ತಿಳಿಸಿದರು.
ಮಾ.16 ರಂದು ಜಿಲ್ಲೆಯಲ್ಲಿ ಈ ವರ್ಷದ ಕೊನೆಯ ಕಂಬಳವಾಗಿ ಸೂರ್ಯ-ಚಂದ್ರ ಜೋಡುಕರೆ ಕಂಬಳ ನಡೆಯಲಿದೆ. ಈ ವರ್ಷ 1 ಪವನ್ ಮತ್ತು ಅರ್ಧ ಪವನ್ ಬಹುಮಾನವನ್ನು ಇಟ್ಟುಕೊಳ್ಳಲಾಗಿದೆ. ಸುಮಾರು ನೂರಕ್ಕೂ ಮಿಕ್ಕಿ ಓಟದ ಕೋಣಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹಿಂದೆ ಜಿಲ್ಲೆಯ ಪ್ರಸಿದ್ಧ ಕಂಬಳವಾಗಿ ಅಳದಂಗಡಿ ಇತ್ತು. ಈಗ ಬಂಗಾಡಿ ಕೊಲ್ಲಿ ಮತ್ತು ವೇಣೂರು-ಪೆರ್ಮುಡ ಮಾತ್ರ ಉಳಿದುಕೊಂಡಿದೆ. ಕಂಬಳದಲ್ಲಿ ಪ್ರಾಣಿ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಂಘದವರು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಕಂಬಳ ರೈತರ ಕ್ರೀಡೆ, ಜಲ್ಲಿಕಟ್ಟುನಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ. ಆದರೆ ಕಂಬಳದಲ್ಲಿ ಆ ರೀತಿ ಹಿಂಸೆಯಾಗುವುದಿಲ್ಲ. ಇಲ್ಲಿ ಕಂಬಳದ ಕೋಣಗಳನ್ನು ಮಕ್ಕಳನ್ನು ಸಾಕಿದಾಗೆ ಸಾಕುತ್ತಾರೆ. ಕೈಯಲ್ಲಿ ಬೆತ್ತ ಇದ್ದರೂ ಈಗ ಹೊಡೆಯುವುದಿಲ್ಲ. ಇದರ ಬಗ್ಗೆ ಕೋರ್ಟಿಗೆ ಸರಿಯಾದ ಮಾಹಿತಿ ನೀಡಬೇಕು. ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಇದರ ಬಗ್ಗೆ ಕಳುಹಿಸಿದೆ. ಆದರೆ ಕೇಂದ್ರ ಸರಕಾರ ಇದನ್ನು ಮನವರಿಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಕಂಬಳಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು. ಸರಕಾರವೇ ಕಂಬಳವನ್ನು ನಡೆಸಬೇಕು. ಒಂದು ಬಾರಿ ಮಾತ್ರ ಸರಕಾರ ರೂ.1 ಲಕ್ಷ ಕೊಟ್ಟಿದೆ. ಇದರ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರು ಸರಕಾರವನ್ನು ಈ ಹಿಂದೆಯೇ ಒತ್ತಾಯಿಸಿದ್ದೇವೆ. ಒಂದು ಕಂಬಳಕ್ಕೆ ರೂ.10  ಲಕ್ಷ ಸರಕಾರಕ್ಕೆ ದೊಡ್ಡ ವಿಷಯವಲ್ಲ. ಕಂಬಳ ಕ್ರೀಡೆ ಉಳಿಯಲಿ, ಬೆಳೆಯಲಿ, ಆತಂಕ ದೂರವಾಗಲಿ ಎಂದು ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಲ| ನಿತೀಶ್ ಎಚ್, ಉಪಾಧ್ಯಕ್ಷ ಕರುಣಾಕರ ಸಾಲ್ಯಾನ್, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಲ| ಭರತ್‌ರಾಜ್ ಪಾಪುದಡ್ಕ, ಗೌರವ ಸಲಹೆಗಾರ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಪದ್ಮನಾಭ ಬರಮೇಲು, ಪೋಷಕ ಉಮೇಶ್ ಪಾಣೂರು, ಸ್ವೀವನ್ ಮೋನಿಸ್ ನೆಕ್ಕರ್ಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.