ಪಟ್ರಮೆ: ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಮಂಗಳೂರಿನ ನೆಹರು ಯುವ ಕೇಂದ್ರ ಮತ್ತು ಪಟ್ರಮೆ ಭಗತ್ ಸಿಂಗ್ ಯುವ ಕೇಂದ್ರ ದ ಸಂಯುಕ್ತ ಆಶ್ರಯದಲ್ಲಿ ಪಟ್ರಮೆ ಗ್ರಾಮದಲ್ಲಿ ಯುವ ಆದರ್ಶ ಗ್ರಾಮ ವಿಕಾಸ ಕಾರ್ಯಕ್ರಮವು ಮಾ.7 ರಂದು ಪಟ್ರಮೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ , ಸರಕಾರದ ಪ್ರತೀ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರಿಗೆ ತಲುಪುವಲ್ಲಿ ಸ್ಥಳೀಯ ಸಂಘಟನೆಗಳು ಈ ಮೂಲಕ ತೊಡಗಿಕೊಂಡಿರುವುದು ಅವಶ್ಯವಾದ ಕಾರ್ಯವಾಗಿದೆ. ಪಟ್ರಮೆಯ ಭಗತ್ ಸಿಂಗ್ ಯುವ ಸಂಘಟನೆಯ ಈ ಕಾರ್ಯಗಳು ಯಶಸ್ಸನ್ನು ಕಾಣಲಿ ಎಂದರು.
ಪಟ್ರಮೆ ಭಗತ್ ಸಿಂಗ್ ಯುವ ಕೇಂದ್ರದ ಅಧ್ಯಕ್ಷ ಧನಂಜಯ ಗೌಡ ಪಟ್ರಮೆ ಅಧ್ಯಕ್ಷತೆ ವಹಿಸಿ ಮಾತನಾಡಿ , ಜಿಲ್ಲಾ ಸಮನ್ವಯಾಧಿಕಾರಿಗಳ ಸಹಕಾರದಲ್ಲಿ , ಸ್ಥಳೀಯ ನಮ್ಮ ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಸರಕಾರದ ಸೌಲಭ್ಯಗಳ ಮಾಹಿತಿಗಳ ವಿನಿಮಯವನ್ನು ಯಶಸ್ವೀಯಾಗಿ ಮಾಡಲಾಗುವುದು ಎಂದರು.
ಮಂಗಳೂರು ನೆಹರು ಯುವ ಕೇಂದ್ರ ದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಮಾತನಾಡಿ ಇಲಾಖಾವಾರು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಸಮಾಜಸೇವಕ ವಿಲ್ಫ್ರೆಡ್ ಡಿ ಸೋಜ, ರಾಮಚಂದ್ರ, ನ್ಯಾಯವಾದಿ ಬಿ.ಎಂ.ಭಟ್, ಸ್ಥಳೀಯ ಸಂಘಟನೆಯ ಉಪಾಧ್ಯಕ್ಷೆ ವನಿತಾ, ಪಟ್ರಮೆ ಗ್ರಾ.ಪಂ. ಸದಸ್ಯ ಶ್ಯಾಮರಾಜ್ ಪಟ್ರಮೆ ಉಪಸ್ಥಿತರಿದ್ದರು. ಶ್ಯಾಮರಾಜ್ ಸ್ವಾಗತಿಸಿ ನಿರೂಪಿಸಿದರು.ವನಿತಾ ವಂದಿಸಿದರು.