ಕೂಕ್ರಬೆಟ್ಟು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಉದ್ಘಾಟನೆ

ಸರಕಾರಿ ಶಾಲೆ ಉಳಿಸುವುದು ಎಲ್ಲರ ಕರ್ತವ್ಯ: ಹರೀಶ್ ಪೂಂಜ

ಮರೋಡಿ : ಕೇವಲ ಸರಕಾರಿ ಅನುದಾನಗಳನ್ನು ಮಾತ್ರ ನೆಚ್ಚಿಕೊಳ್ಳದೆ ಊರ ದಾನಿಗಳ ಸಹಕಾರವನ್ನು ಪಡೆದು ಸರಕಾರಿ ಶಾಲೆಗಳನ್ನು ಆಕರ್ಷಕವಾಗಿ ಮಾಡಬಹುದಾಗಿದೆ. ಹಿರಿಯರು ಕಟ್ಟಿದ ಶಾಲೆಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಬೇಕಾಗಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.

 ಅವರು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಸಹಭಾಗಿತ್ವದಲ್ಲಿ ಮರೋಡಿ ಗ್ರಾಮದ ಕೂಕ್ರಬೆಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೇ ವಿದ್ಯಾರ್ಥಿ ಸಂಘವು ಆರಂಭಿಸಿರುವ ಆಂಗ್ಲ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ., ಯು.ಕೆ.ಜಿ.)ತರಗತಿಯನ್ನು ಮಾ .7 ರಂದು ಉದ್ಘಾಟಿಸಿಮಾತನಾಡಿದರು.

ಊರಿನ ಹಿರಿಯರು ಮಕ್ಕಳಿಗೆ ಶಿಕ್ಷಣ ಬೇಕು ಎಂದು ಯಾರನ್ನೋ ಕಾಡಿ, ಬೇಡಿ ಗ್ರಾಮ ಗ್ರಾಮಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಅಂತಹ ಶಾಲೆಯಲ್ಲಿ ಕಲಿತ ನಾವು ಮಾತ್ರ ನಮ್ಮ ಮಕ್ಕಳನ್ನು ಬೇರೆಲ್ಲೋ ಶಾಲೆಗೆ ಕಳುಹಿಸುತ್ತಿದ್ದೇವೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಚ್ಚಿ ಹೋಗುವ ಹಂತಕ್ಕೆ ಬಂದು ತಲುಪಿವೆ. ನಾಲ್ಕೂನೂರು ಸಂಖ್ಯೆ ಇದ್ದ ಹೈಸ್ಕೂಲುಗಳಲ್ಲಿ ಇಂದು ನೂರೈವತ್ರು ಮಕ್ಕಳು ಇವೆ. ಹೀಗಾಗಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯು ಶಾಲೆಗಳ ಪುನರುಜ್ಜೀವನಕ್ಕೆ ಪಣ ತೊಟ್ಟಿದೆ. ಇದಕ್ಕೆ ಊರವರೂ ಸ್ಪಂದಿಸಬೇಕು. ಕೂಕ್ರಬೆಟ್ಟು ಪರಿಸರದ ಪೋಷಕರು ಧೈರ್ಯ ಮಾಡಿ ಎಂಭತ್ತು ಮಕ್ಕಳನ್ನು ಇದೇ ಶಾಲೆಗೆ ಸೇರಿಸಿ ಧೈರ್ಯ ತೋರಿರುವುದು ರಾಜ್ಯಕ್ಕೇ ಮಾದರಿಯಾಗಿದೆ ಎಂದರು.

ಶಾಲೆಗಳ ಸೌಂದರ್ಯೀಕರಣದ ಬಗ್ಗೆ ತಿಳಿಸಿದ ಶಾಸಕರು, ಸರಕಾರದ ಅನುದಾನ ಬಂದಾಗ ಕಟ್ಟಡಗಳನ್ನು ಅಲ್ಲಲ್ಲಿ ಕೋಳಿ ಗೂಡಿನಂತೆ ಕಟ್ಟುವುದು ತರವಲ್ಲ. ದೂರದೃಷ್ಟಿಯಿಂದ ಕಟ್ಟಡಗಳ ರಚನೆ ಆಗಬೇಕು. ಬೇಕಾಬಿಟ್ಟಿ ಕಟ್ಟುವ ಮಾನಸಿಕತೆಯಿಂದ ನಾವು ಹೊರಬರಬೇಕು. ಪ್ರಸ್ತುತ ತಾಲೂಕಿನಲ್ಲಿ ಶಾಲೆಗಳ ಹಳೆ ಕಟ್ಟಡಗಳ ಮೇಲೆ ಇನ್ನೊಂದು ಅಂತಸ್ತನ್ನು ಕಟ್ಟುವ ಅವಕಾಶ ಇಲ್ಲದಿರುವುದು ವಿಪರ್ಯಾಸ ಎಂದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅವರು, ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ತೋರಬೇಡಿ. ಸರಕಾರಿ ಶಾಲೆಗಳಲ್ಲಿ ಇರುವಷ್ಟು ಚುರುಕಿನ ಮಕ್ಕಳೂ ಖಾಸಗಿ ಶಾಲೆಗಳಲ್ಲಿ ಕಾಣಲಾರೆವು. ಸಾಮಾನ್ಯ ಮಕ್ಕಳಿಗೇ ಯೋಗ್ಯ ಶಿಕ್ಷಣ ನೀಡಿದರೆ ದೇಶ ಒಳ್ಳೆಯದಾಗುತ್ತದೆ. ಸರಕಾರಿ ಶಾಲೆಗಳು ಉಳಿಯಬೇಕು ಎಂಬುದೇ ನನ್ನ ಆಸೆಯಾಗಿದೆ. ನಾವು ವೇದಿಕೆಗೆ ಅಂಟಿಕೊಳ್ಳುವ ಸ್ವಭಾವದಿಂದ ಹೊರ ಬರಬೇಕು. ಶಾಲೆಯನ್ನು ದೇವಸ್ಥಾನವೆಂದು ತಿಳಿದುಕೊಳ್ಳೋಣ. ತಾಲೂಕಿನಲ್ಲಿ ಐದು ಶಾಲೆಗಳನ್ನು ಮಾದರಿ ಶಾಲೆಗಳಾಗಿ ತಲೆ ಎತ್ತಲಿವೆ. ಅದರಲ್ಲಿ ಕೂಕ್ರಬೆಟ್ಟು ಶಾಲೆಯೂ ಒಂದು ಎಂದರು.

ಅಧ್ಯಕ್ಷತೆಯನ್ನು ಸಮಿತಿ ಸ್ಥಾನೀಯ ಅಧ್ಯಕ್ಷ ಜಯಂತ ಕೋಟ್ಯಾನ್ ವಹಿಸಿ, 16 ಮಕ್ಕಳಿಂದ ಈ ಶಾಲೆಯಲ್ಲಿ ಈಗ 80 ವಿದ್ಯಾರ್ಥಿಗಳ ನೋಂದಣಿಯಾಗಿರುವುದು ಆಶಾದಾಯಕ ಬೆಳವಣಿಗೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮತ್ತು ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಗುಣಮಟ್ಟದ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಮರೋಡಿ ಗ್ರಾ.ಪಂ ಅಧ್ಯಕ್ಷ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ವನಿತಾ, ಪ್ರಾ.ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಸಿಆರ್‍ಪಿ ಸಂತೋಷ್ ಕುಮಾರ್, ಕೊಕ್ರಾಡಿ ಸ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಭಟ್, ಪತ್ರಕರ್ತ ಪ್ರದೀಶ್ ಹಾರೊದ್ದು ಉಪಸ್ಥಿತರಿದ್ದರು.

ಶಾಲೆಯ ಅಭಿವೃದ್ಧಿಗಾಗಿ ಎಂ.ಎಸ್‌.ಪೂಜಾರಿ ಮತ್ತು ಸತೀಶ್‌ ಪೂಜಾರಿ ತಲಾ ₹ 1 ಲಕ್ಷ ನೀಡಿದ್ದು, ಈ ಪ್ರಯುಕ್ತ ಅವರ ತಂದೆ ಗೋಪುಪೂಜಾರಿ ಉಚ್ಚೂರು ಅವರನ್ನು ಸನ್ಮಾನಿಸಲಾಯಿತು. ವಿವಿಧ ರೀತಿಯ ಸಹಕಾರದ ನೀಡಿದವರನ್ನು ಗೌರವಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಸುಫಲಾ ಸ್ವಾಗತಿಸಿ, ಪ್ರಸ್ತಾವಿಸಿದರು. ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಸದಸ್ಯ ಯಶೋಧರ ಬಂಗೇರ ವಂದಿಸಿದರು. ಶಿಕ್ಷಕಿಯರಾದ ನುಸ್ರತ್ ಹಾಗೂ ಹರ್ಷಲಾ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ಉಚ್ಚೂರು ಹಾಗೂ ಇತರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.