ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ; ಶಿವ ಪಂಚಾಕ್ಷರಿ ಪಠಣ, ಭಜನೆ, ಅರ್ಚನೆ, ಜಾಗರಣೆ

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶಿವರಾತ್ರಿ ಸಂದರ್ಭ ಅಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.  


ಉಜಿರೆ: ದೃಢ ಸಂಕಲ್ಪದೊಂದಿಗೆ ಏಕಾಗ್ರತೆಯಿಂದ ದೇವರ ಭಕ್ತಿ ಮಾಡಿದರೆ ನಮ್ಮ ಎಲ್ಲಾ ಸಂಕಷ್ಟಗಳ ಮುಕ್ತಿಯಾಗಿ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಮಾ .4 ರಂದು  ಶಿವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಅಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರವಣ, ಕೀರ್ತನ, ಅರ್ಚನೆ, ವಂದನೆ, ಧ್ಯಾನ, ಆತ್ಮ ನಿವೇದನೆ ಮೊದಲಾದ ನವವಿಧ ಭಕ್ತಿಯಿಂದ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಭಕ್ತಾದಿಗಳು ಪುಣ್ಯ ಸಂಚಯನಕ್ಕಾಗಿ ಧರ್ಮಸ್ಥಳಕ್ಕೆ ಬಂದಿರುವಿರಿ. ನಿಮ್ಮ ಎಲ್ಲಾ ಕಷ್ಟಗಳನ್ನು, ಸಮಸ್ಯೆಗಳನ್ನು ದೇವರ ಪಾದಕ್ಕೆ ಅರ್ಪಿಸಿ ನಿರಾಳವಾಗಿ ಹಿಂದಿರುಗಬೇಕು. ಪಾದಯಾತ್ರೆಯಿಂದ ಎಲ್ಲಾ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಅವರು ಹೇಳಿದರು.
ಯಾವುದೇ ಸಾಧನೆಗೆ ದೃಢ ಸಂಕಲ್ಪದ ಭಕ್ತಿ ಮುಖ್ಯ, ಹಿಂದೆ ವರ್ಣಾಶ್ರಮ ಧರ್ಮ ಇದ್ದಾಗ ಜಾತಿ-ಮತ ಬೇಧ, ಅಸಮಾನತೆ ಇತ್ತು. ಆದರೆ ಈಗ ಕಲಿಯುಗದಲ್ಲಿ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಅವಕಾಶವಿದೆ. ಪವಿತ್ರ ಕ್ಷೇತ್ರಕ್ಕೆ ಬಂದಾಗ ಎಲ್ಲರೂ ತಮ್ಮನ್ನು ತಾವು ಪವಿತ್ರೀಕರಣಗೊಳಿಸಬೇಕು. ಎಲ್ಲಾ ಪಾಪ ಕರ್ಮಗಳ ಕೊಳೆ ಕಳೆಯಬೇಕು, ಮನಸ್ಸನ್ನು ಪವಿತ್ರಗೊಳಿಸಬೇಕು. ಧರ್ಮಸ್ಥಳಕ್ಕೆ ಸಂಬಂಧಪಟ್ಟಂತೆ ಮಾತು ಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ ಮಾಣಿಕ್ಯ. ಆದುದರಿಂದ ದೈನಂದಿನ ವ್ಯವಹಾರದಲ್ಲಿ ಸತ್ಯ, ಧರ್ಮ ಮತ್ತು ನ್ಯಾಯದ ಪರಿಪಾಲನೆಯೊಂದಿಗೆ ಸಾತ್ವಿಕ ಹಾಗೂ ಸಾರ್ಥಕ ಜೀವನ ನಡೆಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಹೇಮಾವತಿ ವಿ, ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾದಯಾತ್ರಿಗಳ ಸಂಘದ ನೇತಾರ ಬೆಂಗಳೂರಿನ ಹನುಂತಪ್ಪ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.
ಧರ್ಮಸ್ಥಳ  ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ರಾವ್ ಸ್ವಾಗತಿಸಿ, ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.