ಬಿಸಿ ಗಂಜಿತೆಳಿಗೆ ಬಿದ್ದು ಪುಟಾಣಿ ನಿಶ್ಮಿಯಾ ದಾರುಣ ಸಾವು

ಪಿಲ್ಯ: ಅಜ್ಜ ಮೃತಪಟ್ಟ ಮರುದಿನವೇ ಮನೆಯ ಅಂಗಳದಲ್ಲಿ ಪಾತ್ರೆಯಲ್ಲಿಟ್ಟಿದ್ದ ಬಿಸಿ ಗಂಜಿ ತೆಳಿಗೆ ಅಕಸ್ಮಿಕವಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಮೊಮ್ಮಗಳು 3 ದಿನಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಹೃದಯವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ಪಿಲ್ಯ ಬದ್ರಿಯಾ ನಗರದಲ್ಲಿ ನಡೆದಿದೆ.
ಮೃತ ಬಾಲಕಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಹಮೀದ್ ಮತ್ತು ರುಕಿಯಾ ದಂಪತಿ ಏಕೈಕ ಪುತ್ರಿ ನಿಶ್ಮಿಯಾ(ವ.) ಎಂಬವರಾಗಿದ್ದಾರೆ.
ಫೆ. 13 ರಂದು ಬಾಲಕಿಯ ಅಜ್ಜ ಬಾವಾಕ ಅವರು ಮೃತಪಟ್ಟಿದ್ದು ಅವರ ಮನೆಯಲ್ಲಿ ನೆಂಟರಿಷ್ಟರು, ಕಟುಂಬಿಕರು ಇದ್ದ ಕಾರಣ ಮನೆಯ ಹೊರಗಡೆ ಅಂಗಳದಲ್ಲಿ ಅನ್ನ ಬೇಯಿಸಿ ಬಿಸಿ ತೆಳಿ ಪಾತ್ರೆಯಲ್ಲಿಡಲಾಗಿತ್ತು. ಬಾಲಕಿ ಆಕಸ್ಮಿಕವಾಗಿ ಇದಕ್ಕೆ ಬಿದ್ದು ಭಾರೀ ಸುಟ್ಟ ಗಾಯಕ್ಕೊಳಗಾಗಿದ್ದರು. ಫೆ.14 ರಂದು ನಡೆದಿದ್ದ ಈ ಘಟನೆಯಲ್ಲಿ ಬಾಲಕಿಯನ್ನು ತಕ್ಷಣ ಮಂಗಳೂರು ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಫೆ. 15 ರಂದು ಅವರು ಅಸುನೀಗಿದ್ದಾರೆ.
ಹಮೀದ್ ಅವರಿಗೆ ಬಂದಾರು ಗ್ರಾಮದ ಪುತ್ತುಮೋನು ಅವರ ಮಗಳ ಮಗಳು ರುಕಿಯಾ ಅವರಿಗೆ 6 ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದು, ನಿಶ್ಮಿಯಾ ಏಕೈಕ ಪುತ್ರಿಯಾಗಿದ್ದರು. ಅಜ್ಜಿ ಮನೆ ಪಿಲ್ಯದಲ್ಲಿದ್ದ ಬಾಲಕಿ ಇಲ್ಲಿನ ಗುಡ್‌ಫ್ಯೂಚರ್ ಚೈಲ್ಡ್ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿಯಾಗಿದ್ದರು.
ಪುತ್ರಿಯ ನಿಧನ ಸುದ್ದಿ ತಿಳಿದು ವಿದೇಶದಲ್ಲಿದ್ದ ತಂದೆ ಹಮೀದ್ ಅವರು ಫೆ. 19 ರ ತಡರಾತ್ರಿ ಊರಿಗೆ ಬಂದಿದ್ದು, ಅದಕ್ಕಾಗಿ ಬೆಳ್ತಂಗಡಿಯ ಶೀಥಲೀಕೃತ ಶವಾಗಾರದಲ್ಲಿ ಇಡಲಾಗಿದ್ದ ಬಾಲಕಿಯ ಮೃತದೇಹವನ್ನು ಫೆ. 20 ರಂದು ಪಿಲ್ಯದ ಮನೆಗೆ ತಂದು ಅಂತ್ಯಸಂಸ್ಕಾರ ವಿಧಿ ನೆರವೇರಿಸಲಾಗಿದೆ.
ಘಟನೆಯ ನಂತರ ಬಾಲಕಿಯ ತಾಯಿ ರುಕಿಯಾ ತೀವ್ರ ಅಸ್ವಸ್ಥತೆಗೊಂಡಿದ್ದಾರೆ. ಬಾಲಕಿಯ ಈ ಅಕಾಲಿಕ ಮರಣಕ್ಕೆ ಊರಿಗೆ ಊರೇ ಕಂಬನಿ ಮಿಡಿದಿದ್ದು, ಅಪಾರ ಸಂಖ್ಯೆಯಲಿ ಜನ ಭಾಗವಹಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಗುಡ್‌ಫ್ಯೂಚರ್ ಚೈಲ್ಡ್ ಶಾಲಾ ಸಂಚಾಲಕ ನಸೀರ್ ಖಾನ್ ಪಿಲ್ಯ ಮತ್ತು ಶಿಕ್ಷಕ ವೃಂದವರೂ ಭೇಟಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.