ತಾಲೂಕಿನ ನವನಿರ್ಮಾಣಕ್ಕೆ ಗ್ರಾ.ಪಂ. ಶಕ್ತಿ: ಶಾಸಕ ಪೂಂಜ

ಅಂಡಿಂಜೆ: ವಿವಿಧ ಸೌಲಭ್ಯ   ಕಾಮಗಾರಿಗಳ ಉದ್ಘಾಟನೆ

ವೇಣೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರುವ ಯೋಜನೆಗಳನ್ನು ಗ್ರಾಮದ ಪ್ರತೀ ಜನತೆಗೆ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಗ್ರಾ.ಪಂ.ಗಳು ಮಾಡಬೇಕು. ಈ ನಿಟ್ಟಿನಲ್ಲಿ ಅಂಡಿಂಜೆ ಗ್ರಾ.ಪಂ.ನ ಕಾರ್ಯ ಶ್ಲಾಘನೀಯ. ತಾ|ನ 81  ಗ್ರಾಮಗಳ ಅಭಿವೃದ್ಧಿಯ ಇರಾದೆ ಇದೆ. ಈ ಮೂಲಕ ತಾಲೂಕನ್ನು ನರ್ವನಿರ್ಮಾಣ ಮಾಡಬೇಕಿದೆ. ಇದಕ್ಕೆ ಗ್ರಾ.ಪಂ.ಗಳು ನನಗೆ ಶಕ್ತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ದ.ಕ. ಜಿಲ್ಲಾ ಪಂಚಾಯತು ಮಂಗಳೂರು, ತಾ.ಪಂ. ಬೆಳ್ತಂಗಡಿ ಇದರ ಆಶ್ರಯದಲ್ಲಿ ಬುಧವಾರ ಅಂಡಿಂಜೆಯ ಶ್ರೀ ವಿನಾಯಕ ಶ್ರೀರಾಮ ಭಜನಾ ಮಂದಿರದಲ್ಲಿ ಜರಗಿದ ಅಂಡಿಂಜೆ ಗ್ರಾ.ಪಂ.ನ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ, ಸಹಾಯಧನ ವಿತರಣೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ ವಹಿಸಿದ್ದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಅಂಡಿಂಜೆ ತಾ.ಪಂ. ಸದಸ್ಯ ಸುಧೀರ್ ಆರ್. ಸುವರ್ಣ, ಅಂಡಿಂಜೆ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್, ಶ್ರೀ ಪಾರ್ಶ್ವನಾಥ ಭಾರತ್ ಗ್ಯಾಸ್ ಏಜೆನ್ಸಿಯ ಮೆನೇಜರ್ ಎಚ್. ಮಹಮ್ಮದ್ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಇತ್ತೀಚೆಗೆ ಉಗ್ರರ ದಾಳಿಗೆ ಹುತಾತ್ಮರಾದ ವೀರಯೋಧರಿಗೆ ಮೌನಪ್ರಾರ್ಥನೆ ಮೂಲಕ ಸಂತಾಪ ಸೂಚಿಸಲಾಯಿತು.
ಸನ್ಮಾನ: ಅಂಡಿಂಜೆ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ಉದ್ಯೋಗ ಖಾತರಿಯ ತೋಟಗಾರಿಕೆ ವಿಭಾಗದ ತಾಂತ್ರಿಕ ಸಹಾಯಕಿ ಪೂರ್ಣಿಮಾ ಹಾಗೂ ಉದ್ಯೋಗ ಖಾತರಿ ಯೋಜನೆಯ ಸಹಾಯಕ ಎಂಜಿನಿಯರ್ ನಿತಿನ್ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ. ಸದಸ್ಯ ವಿಠಲ ಪೂಜಾರಿ ಸಾವ್ಯ ಸ್ವಾಗತಿಸಿ, ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. ಪ್ರಾಸ್ತಾವಿಸಿದರು. ಯಶೋಧರ ಬಂಗೇರ ನಿರೂಪಿಸಿ, ಗ್ರಾ.ಪಂ. ಸದಸ್ಯ ನಿತಿನ್ ಮುಂಡೇವು ವಂದಿಸಿದರು. ಕಾರ್ಯದರ್ಶಿ ನಿರ್ಮಲ್ ಕುಮಾರ್ ಹಾಗೂ ಸಿಬ್ಬಂದಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.