ಧರ್ಮಸ್ಥಳ: ಪಂಚಮಹಾವೈಭವ ಮಂಟಪದಲ್ಲಿ ಫೆ.14 ರಂದು ಬಾಹುಬಲಿ ಆಸ್ಥಾನ ವೈಭವದ ವಿಶ್ವರೂಪ ದರ್ಶನ ನಡೆಯಿತು.




ಧರ್ಮಸ್ಥಳ: ಪಂಚಮಹಾವೈಭವ ಮಂಟಪದಲ್ಲಿ ಫೆ.14 ರಂದು ಬಾಹುಬಲಿ ಆಸ್ಥಾನ ವೈಭವದ ವಿಶ್ವರೂಪ ದರ್ಶನ ನಡೆಯಿತು.
ಭರತ ಚಕ್ರವರ್ತಿಯ ಆದೇಶದಂತೆ ದಕ್ಷಿಣಾಂಕ ಆತನ ಓಲೆಯನ್ನು ತೆಗೆದುಕೊಂಡು ಪೌದನಾಪುರಕ್ಕೆ ಬರುತ್ತಾನೆ. ಬರುವಾಗ ಪೌದನಾಪುರದಲ್ಲಿ ಹತ್ತು ವೇದಿಕೆಗಳಲ್ಲಿ ಆಯೋಜಿಸಿದ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಜಾನಪದ ಕಲೆಗಳನ್ನು ವೀಕ್ಷಿಸಿ ಸಂತೋಷ ಪಡುತ್ತಾನೆ.
ಬಳಿಕ ಪೌದನಾಪುರದ ಅರಮನೆಗೆ ಬಂದು ಬಾಹುಬಲಿಯನ್ನು ಭೇಟಿಯಾಗಿ ಲೋಕಾಭಿರಾಮವಾಗಿ ಯೋಗಕ್ಷೇಮ ವಿಚಾರಿಸಿ ಬಳಿಕ ತಾನು ಬಂದ ಉದ್ದೇಶವನ್ನು ತಿಳಿಸಿ ಭರತ ಕೊಟ್ಟ ಓಲೆಯನ್ನು ಕೊಡುತ್ತಾನೆ.
ಆದರೆ ಬಾಹುಬಲಿ ತಂದೆ ಕೊಟ್ಟ ರಾಜ್ಯವನ್ನು ಭರತನಿಗೆ ಒಪ್ಪಿಸಿ ಶರಣಾಗತನಾಗಲು ಒಪ್ಪುವುದಿಲ್ಲ. ಯುದ್ಧಕ್ಕೆ ಇಬ್ಬರೂ ಸನ್ನದ್ದರಾಗುತ್ತಾರೆ. ಆದರೆ ಯುದ್ಧ ನಡೆದಲ್ಲಿ ಉಭಯ ಕಡೆಗಳ ಸೈನಿಕರಿಗೆ ಸಾವು-ನೋವು ಉಂಟಾಗಬಹುದು. ಆದುದರಿಂದ ಅಹಿಂಸಾತ್ಮಕವಾಗಿ ತಾವು ಇಬ್ಬರು ಮಾತ್ರ ಯುದ್ಧ ಮಾಡುವುದಾಗಿ ನಿರ್ಧರಿಸುತ್ತಾರೆ.
ದೃಷ್ಠಿ ಯುದ್ಧ, ಜಲಯುದ್ಧ ಮತ್ತು ಮಲ್ಲ ಯುದ್ಧದ ಮೂಲಕ ಸೋಲು-ಗೆಲುವು ನಿರ್ಧರಿಸುವುದಾಗಿ ಹೇಳಿದರು.
ಆದರೂ ಮೂರೂ ರೀತಿಯ ಯುದ್ಧದಲ್ಲಿ ಬಾಹುಬಲಿಯೇ ಗೆಲ್ಲುತ್ತಾನೆ. ಕೊನೆಯ ಮಲ್ಲಯುದ್ಧದಲ್ಲಿ ಗೆದ್ದರೂ ಮೇಲೆತ್ತಿ ಭರತನನ್ನು ಕೆಳಗೆ ಹಾಕಬೇಕು ಎನ್ನುವಷ್ಟರಲ್ಲಿ ಮನದಲ್ಲಿ ಅಣ್ಣನೆಂಬ ಮಮತೆ ಮೂಡಿ ಬರುತ್ತದೆ. ಭೂಮಿಗಾಗಿ, ಪ್ರತಿಷ್ಠೆಗಾಗಿ ಅಣ್ಣನನ್ನು ಸೋಲಿಸುವುದು ಉಚಿತವಲ್ಲ ಎಂದು ಹೇಳಿ ಬಾಹುಬಲಿ ಯುದ್ಧ ನಿಲ್ಲಿಸುತ್ತಾನೆ. ವೈರಾಗ್ಯ ಭಾವನೆ ಬಂದು ಕಾಡಿಗೆ ತೆರಳಿ ತಪಸ್ಸು ಮಾಡುತ್ತಾನೆ.