ಜನಸ್ನೇಹಿ ಪೊಲೀಸ್ : ಸಾರ್ವಜನಿಕರ ಅಭಿಪ್ರಾಯ

ರಾಜಕೀಯ ರಹಿತವಾಗಿ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಬೇಕು

ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಸಂಬಂಧಗಳಿರಬೇಕು. ಪೊಲೀಸ್ ಇಲಾಖೆ ಎಂದರೆ ಜನರು ಭಯಪಡಬಾರದು. ಪೊಲೀಸರು ನಮ್ಮ ರಕ್ಷಕರು ಎಂಬ ಭಾವನೆಯನ್ನು ಸ್ವಷ್ಟವಾಗಿ ತಿಳಿದುಕೊಳ್ಳಬೇಕು. ಅದೇ ರೀತಿ ಪೊಲೀಸರು ಜನತೆ ಜೊತೆ ಉತ್ತಮ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಯಾವುದೇ ಸಮಸ್ಯೆಗಳು ಬಂದಾಗ ಪೊಲೀಸರು ರಾಜಕೀಯ ರಹಿತವಾಗಿ ಕಾನೂನು ರೀತಿಂiiಲ್ಲಿ ಸಮಸ್ಯೆಯನ್ನು ಪರಿಹರಿಸಬೇಕು. ಬೀಟ್ ಪೊಲೀಸ್ ವ್ಯವಸ್ಥೆ ಉತ್ತಮವಾಗಿದ್ದು, ಇದರಿಂದ ಪೊಲೀಸರು ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಸ್ಥಾಪನೆಯಾಗಲು ಸಹಕಾರಿಯಾಗಿದೆ. – ಗೋಪಿನಾಥ ನಾಯಕ್, ತಾ.ಪಂ ಸದಸ್ಯರು


ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯುವಂತಾಗಬೇಕು

ಜನಸ್ನೇಹಿ ಪೊಲೀಸ್ ಎಂದರೆ ಎಲ್ಲರಿಗೂ ಸಮಾನ ನ್ಯಾಯ ಸಿಗುವ ವ್ಯವಸ್ಥೆ ಆಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಠಾಣೆಗೆ ಹೋದಾಗ ಅವನಿಗೆ ನ್ಯಾಯ ದೊರಕಿಸುವ ಕೆಲಸಗಳಾಬೇಕು. ಪೊಲೀಸರು ಯಾವುದೇ ಭ್ರಷ್ಟಾಚಾರ ಮಾಡದೆ ಯಾವುದೇ ಒತ್ತಡಗಳಿಗೆ ಮಣಿಯದೆ ಕಾನೂನು ದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಅಪರಾಧ ಮುಕ್ತ ತಾಲೂಕು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪೊಲೀಸರು ಮಾತ್ರ ಜನಸ್ನೇಹಿ ಆದರೆ ಸಾಲದು ಜನರು ಕೂಡಾ ಕಾನೂನು ಸ್ನೇಹಿಗಳಾಗಬೇಕು. ಬೀಟ್ ಪೊಲೀಸರ್ ವ್ಯವಸ್ಥೆ ಉತ್ತಮವಾಗಿದ್ದು, ನಮ್ಮ ಗ್ರಾ.ಪಂ ವ್ಯಾಪ್ತಿಯ ಬೀಟ್ ಪೊಲೀಸ್ ಉತ್ತಮ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಜನತೆ ಕಾನೂನು ಜ್ಞಾನ ಹೊಂದುವುದು ಮತ್ತು ಪೊಲೀಸರು ಜನಸ್ನೇಹಿಗಳಾಗಿರುವುದು ಒಂದು ಆದರ್ಶ ಸಮಾಜದ ಅವಶ್ಯಕತೆಯಾಗಿದೆ.
ಅಶೋಕ್ ಕೋಟ್ಯಾನ್, ಗ್ರಾ.ಪಂ ಅಧ್ಯಕ್ಷರು ಕುವೆಟ್ಟು


ರಾಜಕೀಯ ಹಸ್ತಕ್ಷೇಪ ಇರಬಾರದು

ಬೆಳ್ತಂಗಡಿ: ಜನಸ್ನೇಹಿ ಪೊಲೀಸ್ ಅಭಿಯಾನ ಒಂದು ಒಳ್ಳೆಯ ಕಾರ್ಯಕ್ರಮ. ಪ್ರಜಾಪ್ರಭುತ್ವ ಅರ್ಥಪೂರ್ಣವಾಗಿ ಜಾರಿಯಾದಾಗ ಮಾತ್ರ ಜನಸ್ನೇಹಿ ಪೊಲೀಸ್ ಯಶಸ್ವಿಯಾಗುತ್ತದೆ. ಸಂವಿಧಾನ, ಕಾನೂನುಗಳು ಜನಪರವಾಗಿರಬೇಕಾದರೆ, ರಾಜಕೀಯ ಹಸ್ತಕ್ಷೇಪ ಇರಬಾರದು. ಪೊಲೀಸ್ ಇಲಾಖೆ ಎಲ್ಲಾ ವರ್ಗದ ಜನರ ವಿಶ್ವಾಸವನ್ನು ಗಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅಪರಾಧಿಗಳು ರಾಜಕೀಯ ಅಸಮಾನತೆ, ಬಡತನ, ನಿರುದ್ಯೋಗ, ಸ್ವಾರ್ಥ ನಾಯಕರ ದೆಸೆಯಿಂದ ಬಲಿಪಶುಗಳಾದವರೇ ಆಗಿರುತ್ತಾರೆ. ಇದನ್ನೆಲ್ಲಾ ಅರ್ಥ ಮಾಡಿಕೊಂಡು ಜನರೆಲ್ಲ ಒಂದಾಗಿ ಸಂಘಟಿತರಾದರೆ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಜನಸ್ನೇಹಿ ಪೊಲೀಸ್ ಅಭಿಯಾನ ಇದಕ್ಕೆ ನಾಂದಿಯಾಗಲಿ. ಡಾ. ಯು.ಪಿ ಶಿವಾನಂದರ ದೂರದೃಷ್ಟಿಗೆ ಜಯಸಿಗಲಿ.
-ಬಿ.ಎಂ ಭಟ್ ನ್ಯಾಯವಾದಿ


ಜನಸ್ನೇಹಿ ಮಾಡಲು ಪೋಲೀಸ್ ಗ್ರಾಮಸಭೆ ನಡೆಸಬೇಕು

ಪೋಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಜನಸ್ನೇಹಿಯಾಗಬೇಕಾಗಿದೆ ಆದರೆ ಪೋಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡಲು ಪೋಲೀಸ್ ಗ್ರಾಮ ಸಭೆ ನಡೆಸಬೇಕು ಆದರೆ ಅದು 100% ಸಾಧ್ಯವಾಗದು ಕಾರಣ ಪೋಲೀಸ್ ಇಲಾಖೆ ಈಗ ಭ್ರಷ್ಟಾಚಾರದಿಂದಲೂ, ಲಂಚವತಾರದಿಂದಲೂ ಕೂಡಿದೆ. ಕಂದಾಯ ಇಲಾಖೆಯನ್ನಾಗಲಿ/ಪೋಲೀಸ್ ಇಲಾಖೆ/ಅಬಕಾರಿ ಇಲಾಖೆಗಳನ್ನು ಜನಸ್ನೇಹಿ ಮಾಡಬೇಕಾಗಿದೆಯಾದರೂ ಜನಸ್ನೇಹಿ ಮಾಡಲು ತುಂಬಾ ಕಷ್ಟವಾಗಿದೆ. ಪೋಲೀಸ್ ಇಲಾಖೆಯಲ್ಲಾದ ಕಹಿ ಅನುಭವಗಳಿಂದಾಗಿ ಹಾಗೂ ಅವರು ಹೊರಗೆ ಕೊಡುವ ಗೌರವ ಹಾಗೂ ಠಾಣೆಯೊಳಗೆ ಹೋದಾಗ ಕೊಡುವ ಅಗೌರವಗಳನ್ನು ತುಲನೆ ಮಾಡಿದಾಗ ಶೇ 50% ಸಿಬ್ಬಂದಿಗಳನ್ನು ಜನಸ್ನೇಹಿ ಮಾಡಲು ಪ್ರಯತ್ನಿಸಬಹುದು. ರಾಜಕೀಯ ರಹಿತವಾಗಬೇಕು ಅವ್ಯಾಚ್ಯ ಶಬ್ದಗಳಿಂದ ಮಾತನಾಡುವುದನ್ನು ನಿಲ್ಲಿಸಬೇಕು. ಮಹಿಳೆಯರಿಗೆ, ಮಕ್ಕಳಿಗೆ ಗೌರವ ಕೊಡಬೇಕು. ಗ್ರಾಮ ಸಭೆಗಳನ್ನು ನಡೆಸಬೇಕು. ಅಲ್ಲಿನ ಸಮಸ್ಯೆಗಳನ್ನು ಆಲಿಸಬೇಕು. ಧಾರ್ಮಿಕ ಮುಖಂಡರ ಸಭೆ ನಡೆಸಬೇಕು. ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಿ ತರಬೇತಿ ಕೊಡಬೇಕು. ವಾಹನ ಚಾಲಕರಿಗೆ ಕಿರುಕುಳ ಕೊಡಬಾರದು. ಸ್ವಲ್ಪ ಮಾನವೀಯತೆ ತೋರಬೇಕು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ನೋಡಬಾರದು. ಪ್ರತೀ ದಿನ ಗ್ರಾಮದ ಜನರನ್ನು ಠಾಣೆಗೆ ಕರೆಸಿ ಸೌಹಾರ್ದ ಸಭೆ ನಡೆಸಬೇಕು. ಮಹಿಳಾ ಸಭೆಗಳನ್ನು ನಡೆಸಬೇಕು, ಗ್ರಾಮ ಪೋಲೀಸ್ ಸಮಿತಿಗಳಲ್ಲಿ ಅರ್ಹ100 ಮಂದಿ ಅರ್ಹ ಸದಸ್ಯರನ್ನು ಆಯ್ಕೆ ಮಾಡಿ ಪ್ರತಿ ತಿಂಗಳು ಗ್ರಾಮದಲ್ಲಿ ಸಭೆ ನಡೆಸಿ ಸಮಸ್ಯೆ ಆಲಿಸಬೇಕು.
-ಕೆ. ರಾಮಣ್ಣ ಪೂಜಾರಿ, ದಸ್ತಾವೇಜು ಬರಹಗಾರರು


ಜಾಲತಾಣ ದುರುಪಯೋಗ ಬಗ್ಗೆ ಜಾಗೃತಿ ಅಗತ್ಯ
ಸಾಮಾಜಿಕ ಜಾಲ ತಾಣಗಳ ದುರುಪಯೋಗ ಈಗ ಅನೇಕ ಅವಾಂತರಗಳಿಗೆ ಕಾರಣವಾಗುತ್ತಿದೆ. ಇದನ್ನು ತಡಯಲು ಪೊಲೀಸ್ ಇಲಾಖೆಯೊಳಗೆ ಸೈಬರ್ ವಿಭಾಗ ಇದ್ದರೂ ಇನ್ನೂ ಕೂಡ ದುರುಪಯೋಗ ಮಾಡುವವರಲ್ಲಿ ಭಯ ಹುಟ್ಟುವಂತಹಾ ಕಠಿಣ ಕ್ರಮಗಳು ಜರುಗುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಜನರ ಮಾನಹರಾಜು ಹಾಕುವ ಕೆಲಸಗಳು ಜಾಲತಾಣಗಳಲ್ಲಿ ನಡೆಯುತ್ತಿದೆ. ಈ ಬಗ್ಗೆ ಜನಸ್ನೇಹಿ ಪೊಲೀಸ್ ಸಭೆಗಳಲ್ಲಿ ಜಾಗೃತಿ ಮೂಡಿಸಬೇಕು. ಸುದ್ದಿ ಬಿಡುಗಡೆ ಜನಸ್ನೇಹಿ ಪೊಲೀಸ್ ಮಾಹಿತಿ ಮತ್ತು ಅಪರಾಧ ಮುಕ್ತ ತಾಲೂಕು ಕಾರ್ಯಕ್ರಮ ಯಶಸ್ವಿಯಾಗಲಿ.
-ನಾಮದೇವ ರಾವ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.


ಇಲಾಖೆ ಎಚ್ಚರದಿಂದಲೂ ಇರಬೇಕಾಗುತ್ತದೆ

ಹಿಂದೆ ಪೊಲೀಸ್ ಇಲಾಖೆ ಮತ್ತು ಜನರ ಮಧ್ಯೆ ಭಾರೀ ಅಂತರ ಇತ್ತು. ಆ ಬಳಿಕ ಮಾಧ್ಯಮಗಳ ಬೆಳವಣಿಗೆ, ಸರಕಾರದ ನಿಯಮಾವಳಿಗಳಂತೆ ಜನಸ್ನೇಹಿ ಕ್ರಮ ಜಾರಿಗೆ ಬಂದು ಪೊಲೀಸ್ ಮತ್ತು ಜನರ ಸಂಬಂಧ ತುಂಬಾ ಹತ್ತಿರವಾಯಿತು.
ಸರಕಾರದ ಅನೇಕ ಇಲಾಖೆಗಳು ಇದ್ದರೂ ಜನ ಮಾತ್ರ ತಮ್ಮ ರಕ್ಷಣೆಗೆ, ಅನ್ಯಾಯವಾದಾಗ ಓಡಿ ಬರುವುದು ಪೊಲೀಸ್ ಇಲಾಖೆಯ ಬಳಿ. ಈ ವೇಳೆ ಅವರು ಸ್ಪಂದಿಸುವ ಸಂದರ್ಭ ಎಡವಟ್ಟುಗಳು ಆಗದಂತೆ, ನಿರಪರಾಧಿಗಳ ಮೇಲೆ ಅನ್ಯಾಯವಾಗಿ ಕ್ರಮ ಆಗದಂತೆ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಪೊಲೀಸರೂ ಕೂಡ ಯಾವುದೇ ಒತ್ತಡ, ಪ್ರಭಾವಗಳಿಗೆ ಒಳಗಾಗದೆ ನೈಜತೆಯನ್ನು ಕಂಡುಕೊಳ್ಳುವ ಒಳಮನಸ್ಸು ಬೇಕಾಗುತ್ತದೆ. ದುಡುಕುತನ ಇನ್ನೊಬ್ಬರ ಮಾನ ಹರಾಜು ಹಾಕಬಹುದು. ಸುದ್ದಿ ಬಿಡುಗಡೆ ಅನೇಕ ಜನಪರ ಚಳವಳಿಯೊಂದಿಗೆ ಜನಸ್ನೇಹಿ ಮತ್ತು ಅಪರಾಧ ಮುಕ್ತ ಚಳವಳಿಗೆ ಕೈ ಹಾಕಿದ್ದು ಮೆಚ್ಚುಗೆಯ ವಿಚಾರ. –ಅಲ್ಫೋನ್ಸ್ ಫ್ರಾಂಕೋ ಹಿರಿಯ ಉದ್ಯಮಿಗಳು ಬೆಳ್ತಂಗಡಿ.


ವ್ಯಾಜ್ಯಮುಕ್ತ ಸಮಾಜ ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ

ವ್ಯಾಜ್ಯಮುಕ್ತ ತಾಲೂಕು ಪರಿಕಲ್ಪನೆಗೆ ಜನರು, ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಯವರ ಸಹಕಾರ ಹೆಚ್ಚು ಬೇಕಾಗುತ್ತದೆ. ಹೆಚ್ಚಿನ ಅಪರಾಧಗಳು, ಘರ್ಷಣೆಗಳು ನಡೆಯುವುದು ಸಂಘ ಸಂಘಗಳ ನಡುವೆ, ರಾಜಕೀಯ ಪಕ್ಷಗಳ ನಡುವೆ. ಇನ್ನೂ ಕೆಲವು ಕೌಟುಂಬಿಕ ವಿಚಾರವಾಗಿಯೂ ಉದ್ಭವವಾಗುತ್ತದೆ. ಪರಸ್ಪರ ಸ್ನೇಹ ಭಾವನೆ ಮೂಡುವಂತೆ ಮಾಡುವುದು ಬಹುಮುಖ್ಯವೆನಿಸುತ್ತದೆ. ಇಂತಹಾ ವಾತಾವರಣ ನಿರ್ಮಿಸುವುದು ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಲ್ಲ ಎಂಬ ಅರಿವೂ ನಮ್ಮಲ್ಲಿರಬೇಕಾಗುತ್ತದೆ.

-ಉಮೇಶ್ ಗೌಡ, ಸದಸ್ಯರು ಗ್ರಾ.ಪಂ ಚಾರ್ಮಾಡಿ


 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.