ಜನಸ್ನೇಹಿ ಪೊಲೀಸ್, ಜನತೆ-ಕಾನೂನು ಸ್ನೇಹಿ ಆದರೆ ಜಾಲತಾಣಗಳ ದುರ್ಬಳಕೆ ನಿಯಂತ್ರಣ-ಅಪರಾಧ ಮುಕ್ತ ತಾಲೂಕು ಆಗುವುದಿಲ್ಲವೇ?

ಪೊಲೀಸ್ ಅಂದರೆ ಜನತೆಯ ಸಹಾಯಕ್ಕೆ ಇರುವವರು, ಕಾನೂನನ್ನು ಎತ್ತಿ ಹಿಡಿಯಲಿಕ್ಕೆ, ಕ್ರೈಂಗಳನ್ನು ತಡೆಯಲಿಕ್ಕೆ, ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿ ಪಡಿಸಲಿಕ್ಕೆ ಮತ್ತು ಇಡೀ ಸಮಾಜವನ್ನು ರಕ್ಷಿಸಲಿಕ್ಕೆ ಇರುವವರು ಮಾತ್ರವಲ್ಲ, ಕಷ್ಟದ ಸಂದರ್ಭಗಳಲ್ಲಿ ಜನತೆಗೆ ಭರವಸೆ, ವಿಶ್ವಾಸ ನೀಡುವವರೂ ಆಗಿದ್ದಾರೆ ಎಂದು ತಿಳಿದರೆ ನಾವು ಪೊಲೀಸರಿಗೆ ಹೆದರಬೇಕಾಗಿಲ್ಲ. ಹಾಗೆಯೇ ಜನರು ಕಾನೂನು ಪಾಲನೆ ಮಾಡಲು ಬಯಸುತ್ತಾರೆ. ಶಾಂತಿ, ಸೌಹಾರ್ದತೆ ಕಾಪಾಡುತ್ತಾರೆ. ಅಪರಾಧ ಗಳನ್ನು ತಡೆಯಲು ಪೊಲೀಸರಿಗೆ ಸಹಾಯ ಮಾಡುತ್ತಾರೆ ಎಂದು ಪೊಲೀಸರು ತಿಳಿದರೆ ಜನ ಸ್ನೇಹಿಗಳಾಗುತ್ತಾರೆ. ಕಾನೂನು ಸ್ನೇಹಿಗಳಾದರೆ ನಮಗೆಯೇ ಒಳಿತು ಎಂದು ಜನತೆ ತಿಳಿದರೆ ಪೊಲೀಸ್-ಸ್ನೇಹಿಗಳೂ ಆಗುತ್ತೇವೆ. ತಾಲೂಕು ಅಪರಾಧ ಮುಕ್ತ ತಾಲೂಕು ಆಗುವುದರಲ್ಲಿ ಸಂಶಯವಿಲ್ಲ ಎಂಬ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮತ್ತು ಜನತೆಯ ನಡುವಿನ ಕಂದಕವನ್ನು ಕಡಿಮೆ ಮಾಡಿ, ಪರಸ್ಪರ ವಿಶ್ವಾಸವನ್ನು ವೃದ್ಧಿ ಮಾಡಿಸುವ ಪ್ರಯತ್ನಕ್ಕೆ ಸುದ್ದಿ ಮಾಹಿತಿ ಟ್ರಸ್ಟ್ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆ ಕೈ ಹಾಕಿದೆ. 1/02/2019 ರಂದು ಪುತ್ತೂರಿನಲ್ಲಿ ನಡೆಯಲಿರುವ ಆ ಬಗೆಗಿನ ಕಾರ್‍ಯಾಗಾರಕ್ಕೆ ಜಿಲ್ಲೆಯ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕೂಡ ಬೆಂಬಲ ನೀಡಿದೆ. ಶಾಸಕರೂ ಬೆಂಬಲ ಸೂಚಿಸಿದ್ದಾರೆ. ಗ್ರಾಮ ಗ್ರಾಮಗಳಲ್ಲಿ ಆ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಕಾರ್‍ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಪರಾಧ ಮುಕ್ತ ತಾಲೂಕನ್ನಾಗಿ ಮಾಡಲು ಪುತ್ತೂರು ತಾಲೂಕಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2011ನೇ ಇಸವಿಯಲ್ಲಿ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಅಪರಾಧ ಮುಕ್ತ ಗ್ರಾಮವನ್ನಾಗಿ ಮಾಡುವ ಕಾರ್‍ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದು ಪೂರ್ಣ ಯಶಸ್ವಿ ಆಗದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಅಪರಾಧಗಳನ್ನು ಕಡಿಮೆ ಮಾಡಿದೆ. ಆಡಳಿತದ ಮತ್ತು ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ ಹಾಗೂ ಜನತೆಯ ಸಹಕಾರವಿದ್ದರೆ ಆ ಪ್ರಯೋಗವನ್ನು ಉತ್ತಮ ಪಡಿಸಿ ಪುತ್ತೂರು ತಾಲೂಕನ್ನು ಹಾಗೆಯೇ ಜಿಲ್ಲೆಯನ್ನು ಅಪರಾಧ ಮುಕ್ತ ಮಾಡಬಹುದೆಂದು ನಂಬಿzವೆ.
ಪಾಶ್ಚಾತ್ಯ ದೇಶಗಳಲ್ಲಿ ಪೊಲೀಸರು ಜನಸ್ನೇಹಿಗಳಾಗಿದ್ದಾರೆ ಯಾಕೆ?:
ನಮ್ಮ ಪೊಲೀಸ್ ಇಲಾಖೆಯ ಕಾನೂನು ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಬದಲಾಗದೆ ಇದ್ದು ಬ್ರಿಟಿಷರ ಆಡಳಿತದ ಕಾನೂನಿನ (ಇಂಡಿಯನ್ ಪೀನಲ್ ಕೋಡ್ ೧೮೬೦, ಇಂಡಿಯನ್ ಪೊಲೀಸ್ ಆಕ್ಟ್ 1861, ಎವಿಡೆನ್ಸ್ ಆಕ್ಟ್ 1872, ಸೆಡಿಷನ್ ಆಕ್ಟ್ 1870 ಇನ್ನಿತರ) ಜನರನ್ನು ಹತ್ತಿಕ್ಕುವ ವ್ಯವಸ್ಥೆಯ ಮುಂದುವರಿಕೆಯೇ ಆಗಿದೆ. ಆದುದರಿಂದ ಅದು ಆಡಳಿತ ಸ್ನೇಹಿ ಆಗಿದ್ದು ಜನಸ್ನೇಹಿ ಆಗಿಲ್ಲ ಎಂಬ ವಿಷಯದ ಬಗ್ಗೆ ಗಂಭೀರ ಚರ್ಚೆ ಇದ್ದರೂ ಅದನ್ನು ಇಂದಿನ ವಿಷಯವಾಗಿ ತೆಗೆದುಕೊಳ್ಳದೆ ಪೊಲೀಸರು ಜನಸ್ನೇಹಿ ಗಳಾಗಿರುವ ವಿಷಯವನ್ನು ಮಾತ್ರ ತೆಗೆದು ಕೊಳ್ಳಲಿವೆ. ಇಂಗ್ಲೆಂಡ್, ಅಮೇರಿಕ ಮತ್ತು ಇತರ ಪಾಶ್ಚಾತ್ಯ ದೇಶಗಳಲ್ಲಿ ಯಾವುದೇ ವ್ಯಕ್ತಿಗೆ ತೊಂದರೆಯಾದಾಗ ಸಹಾಯಕ್ಕಾಗಿ ಮತ್ತು ರಕ್ಷಣೆಗಾಗಿ ಪೊಲೀಸರನ್ನು ಸಂಪರ್ಕಿಸುತ್ತಾರೆ. ಉದಾಹರಣೆ: ಗರ್ಭಿಣಿ ಏಕಾಂಗಿಯಾಗಿ ಮನೆಯಲ್ಲಿದ್ದು ಹೆರಿಗೆ ನೋವು ಬಂದರೆ ಪ್ರಥಮವಾಗಿ ಪೊಲೀಸರಿಗೆ ಫೋನ್ ಮಾಡುತ್ತಾಳೆ. ಅವರು ಅಗತ್ಯವಿದ್ದ ವೈದ್ಯಕೀಯ ಸೇವೆಯನ್ನು ಒದಗಿಸುತ್ತಾರೆ. ಆಸ್ಪತ್ರೆಗೂ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಹಾಗೆಯೇ ಬೆಂಕಿ, ನೀರು ಅಪಘಾತ ಅಥವಾ ಯಾವುದೇ ತೊಂದರೆ ಬಂದರೂ ಅಲ್ಲಿಯ ಜನತೆ ಸಹಾಯಕ್ಕಾಗಿ ಮೊದಲು ಪೊಲೀಸರಿಗೆ ಫೋನ್ ಮಾಡುತ್ತಾರೆ. ಹಾಗೆ ಮಾಡುವುದನ್ನು ಮಕ್ಕಳಿಗೂ ಕಲಿಸಿ ಕೊಡುತ್ತಾರೆ. ಇದರ ಪರಿಣಾಮವಾಗಿ ಅಮೇರಿಕ ದೇಶದ ಕೊಲೆರೊಡ ರಾಜ್ಯದಲ್ಲಿ ೧೦ ವರ್ಷದ ಬಾಲಕನೊಬ್ಬ ತನಗೆ ಗಣಿತದಲ್ಲಿ ಸಮಸ್ಯೆ ಬಂದಾಗ ಪರಿಹಾರಕ್ಕಾಗಿ ಅಭ್ಯಾಸ ಬಲದಿಂದ ಪೊಲೀಸರಿಗೆಯೇ ಫೋನ್ ಮಾಡುತ್ತಾನೆ. ಅಲ್ಲಿಯ ಪೊಲೀಸ್ ಅಚ್ಚರಿಗೊಂಡರೂ ಅದನ್ನು ಕಡೆಗಣಿಸದೆ ಆ ಬಾಲಕನಿಗೆ ಗಣಿತದ ಸಮಸ್ಯೆಗೆ ಪರಿಹಾರವನ್ನು ನೀಡುತ್ತಾರೆ. ಆ ವಿಡೀಯೋ ವ್ಯಾಪಕ ಪ್ರಚಾರ ಪಡೆದಿದೆ. ಅಲ್ಲಿಯ ಪೊಲೀಸರು ಎಷ್ಟೊಂದು ಜನಸ್ನೇಹಿಯಾಗಿದ್ದಾರೆ ಎಂದು ತಿಳಿದರೆ ಇಲ್ಲಿಯೂ ಆ ಬದಲಾವಣೆ ಉಂಟಾಗಬಹುದು. ಅಷ್ಟರ ಮಟ್ಟಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇಲ್ಲಿಯ ಪೊಲೀಸ್ ವ್ಯವಸ್ಥೆಗೆ ಸಾಧ್ಯವಿಲ್ಲದಿದ್ದರೂ ಆ ದಿಕ್ಕಿನಲ್ಲಿ ಪ್ರಯತ್ನ ನಡೆಸಿದರೆ ಜನಸ್ನೇಹಿಗಳಾಗುವುದು ಖಂಡಿತ. ಅದಕ್ಕೆ ಉತ್ತಮ ಉದಾಹರಣೆ ಪುತ್ತೂರಿನಲ್ಲಿ ಈ ಹಿಂದೆ ಸಿ.ಐ. ಆಗಿ ಕೆಲಸ ಮಾಡಿದ್ದ ಈಗ ಕಾಪುವಿನಲ್ಲಿ ಕಾರ್‍ಯ ನಿರ್ವಹಿಸುತ್ತಿರುವ ಮಹೇಶ್ ಪ್ರಸಾದ್ ಹಾಗೂ ಪುತ್ತೂರಿನ ನರಿಮೊಗರಿನ ಬೀಟ್ ಪೊಲೀಸ್ ಆಗಿ ಕೆಲಸ ಮಾಡುತ್ತಿರುವ ಹರೀಶ್ ಆಗಿರುತ್ತಾರೆ. ಅವರ ಜನಸ್ನೇಹಿ ಕೆಲಸಗಳು ಮುಂದುವರಿಯಲಿ ಹಾಗೂ ಇತರರಿಗೆ ಮಾದರಿಯಾಗಲಿ ಎಂಬ ಉದ್ದೇ ಶದಿಂದ ಪುತ್ತೂರಿನಲ್ಲಿ ಇದೇ ಶುಕ್ರವಾರ ನಡೆಯಲಿರುವ ಜನಸ್ನೇಹಿ ಪೊಲೀಸರು, ಕಾನೂನು ಸ್ನೇಹಿ ಜನರು, ಅಪರಾಧ ಮುಕ್ತ ತಾಲೂಕು ಘೋಷಣೆ ಕಾರ್‍ಯಕ್ರಮದಲ್ಲಿ ಅವರ ಕೆಲಸಗಳನ್ನು ಗುರುತಿಸಿ, ಗೌರವಾರ್ಪಣೆ ಮಾಡಲಿವೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯದಿದ್ದರೆ ಏನಾಗಬಹುದು? ನಿಯಂತ್ರಣ ಹೇಗೆ?:
ಪೊಲೀಸರು ಜನಸ್ನೇಹಿಗಳಾಗಿದ್ದರೆ ಸಾಲದು. ಜನರು ಕಾನೂನು ಸ್ನೇಹಿಗಳಾಗಿದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಜನರಿಗೆ ಬೇಕಾದ ಮಾಹಿತಿ, ಎಚ್ಚರಿಕೆ ಹಾಗೂ ಕಾನೂನಿನ ಪರಿಣಾಮವನ್ನು ತಿಳಿಸಿ ಜನರನ್ನು ತೊಡಗಿಸಿಕೊಳ್ಳುವ ವ್ಯವಸ್ಥೆ ಮಾಡಲಿವೆ. ಉದಾ: ಟ್ರಾಫಿಕ್ ರೂಲ್ಸ್‌ಗಳನ್ನು ಆಚರಣೆಗೆ ತರಲು ಬೆಂಬಲ ನೀಡಲಿzವೆ. ಇಂದಿನ ಕಾಲದಲ್ಲಿ ಅಣು ಶಕ್ತಿಯಂತೆ ಅತ್ಯಂತ ಪ್ರಯೋಜನಕಾರಿಯೂ, ಅಪಾಯ ಕಾರಿಯೂ ಆಗಿರುವ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮತ್ತು ದುರ್ಬಳಕೆಯ ನಿಯಂತ್ರಣದ ಬಗ್ಗೆ ಜನರು ಹಾಗೂ ಪೊಲೀಸ್ ಇಲಾಖೆ ಜಾಗೃತೆ ವಹಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಅಪಪ್ರಚಾರ ಅವಹೇಳನಕ್ಕೆ ನಿಯಂತ್ರಣ ಒಡ್ಡದಿದ್ದರೆ (ಬಾಂಬ್ ಸ್ಪೋಟದಂತೆ) ಎಷ್ಟೋ ದೊಂಬಿಗಳು, ಹಲ್ಲೆ, ಹತ್ಯೆಗಳು, ಬ್ಲಾಕ್‌ಮೇಲ್, ಆತ್ಮಹತ್ಯೆಗಳು ನಡೆಯಬಹುದು ಎಂಬುದನ್ನು ಮನಗಂಡು ಆ ಬಗ್ಗೆ ಪೊಲೀಸ್ ಇಲಾಖೆ ಮತ್ತು ಜನತೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಅದರಿಂದ ಆಗಬಹುದಾದ ತೊಂದರೆ ಗಳಿಗೆ ಜವಾಬ್ದಾರಿ ಯಾರು, ಪರಿಹಾರ ವೇನು ಎಂದು ಚಿಂತಿಸಬೇಕಾಗಿದೆ. ಫೇಸ್‌ಬುಕ್, ವ್ಯಾಟ್ಸಪ್ ಮೊದಲಾದ ಜಾಲತಾಣ ದವರು ತಮ್ಮ ತಾಣವನ್ನು ದುರು ಪಯೋಗ ಮಾಡದಂತೆ ಮನವಿ ಮಾಡಿವೆ. ಹೀಗಿದ್ದರೂ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸುವವರು ಇದ್ದಾರೆ. ಅವರು ಕಾನೂನಿನ ರಕ್ಷಣೆಯಿದೆ, ತಮ್ಮ ಮೇಲೆ ಕೇಸ್ ಮಾಡಲು ಕಷ್ಟವಿದೆ ಎಂದು ತಿಳಿದು (ಮಾಫಿಯಾದವರಂತೆ) ಅಪಪ್ರಚಾರ, ಮಾನಹಾನಿ, ಅವಹೇಳನದಲ್ಲಿ ತೊಡಗಿದ್ದಾರೆ. ಆದುದರಿಂದ ಅಂತವರಿಂದ ಆಗುತ್ತಿರುವ ಮತ್ತು ಆಗಬಹುದಾದ ಹಾನಿಗಳನ್ನು ಪರಿಗಣಿಸಿ ಪೊಲೀಸ್ ಇಲಾಖೆ ಅವರ ಮೇಲೆ ಶಾಂತಿಭಂಗ, ನಿಯಂತ್ರಣದಂತಹ ಕಾನೂನುಗಳನ್ನು ತಂದು ಜನತೆಯ ಬೆಂಬಲದಿಂದ ಅವರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಿ ಅದಕ್ಕೆ ತಡೆಯೊಡ್ಡಬೇಕು. ಅಮಾಯಕ ಯುವಕರು ಅಂತವರ ಜಾಲದಲ್ಲಿ ಸಿಲುಕಿ ಬಲಿಯಾಗದಂತೆ ಅವರಿಗೆ ಎಚ್ಚರಿಕೆ ನೀಡಬೇಕು. ಅಂತಹ ವ್ಯಕ್ತಿಗಳ ಮನೆಯವರಿಗೂ, ಊರಿನವರಿಗೂ ಅವರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸುವ ಮೂಲಕ ಅದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ, ಅವಹೇಳನ ಗಳು ಹೆಚ್ಚುವುದರಿಂದ ಶೀಘ್ರದಲ್ಲೇ ಚುನಾವಣೆ ಇರುವುದರಿಂದ ಅದಕ್ಕೆ ಈಗಲೇ ಕಡಿವಾಣ ಹಾಕುವುದು ಅಗತ್ಯವೆಂದು ಜನತೆ ನಂಬಿದ್ದಾರೆ. ಪುತ್ತೂರಿನ ಕಾರ್‍ಯಕ್ರಮದಲ್ಲಿ ಈ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿ ಪುತ್ತೂರು ತಾಲೂಕು ಅಪರಾಧ ಮುಕ್ತ ತಾಲೂಕು ಆಗುವತ್ತ ಸಾಗಲಿ ಎಂದು ಆಶಿಸುತ್ತೇವೆ. ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಿಗೂ ಅದನ್ನು ವಿಸ್ತರಿಸ ಬೇಕೆಂದಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.