ನಡ: ನಡ ಗ್ರಾಮದ ಕನ್ಯಾಡಿ || ಗುರಿಪಳ್ಳ ಮೂಲಕ ಬರುವಾಗ ತಾರಕೂಟೇಲು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಜೋಡಿ ಚಿರತೆಗಳು ಅಲೆದಾಡುತ್ತಿದ್ದು ಜನ ಪ್ರತ್ಯಕ್ಷ ಕಂಡವರಿದ್ದಾರೆ. ಈ ಭಾಗದಲ್ಲಿ ಎರಡ್ಮೂರು ಮಂದಿಯ ಸಾಕು ಜಾನುವಾರುಗಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಚಿರತೆಗೆ ಆಹಾರವಾಗಿರುವ ಸಾಧ್ಯತೆಗಳಿವೆ.
ಈ ಭಾಗದಲ್ಲಿ ಚಿರತೆಗಳಿರುವ ಬಗ್ಗೆ ವಾರದ ಹಿಂದೆಯೇ ಜನರಿಗೆ ಸುಳಿವು ದೊರೆತಿದ್ದು ಜ. 21 ರಂದು ಸೋಮವಾರ ನೇರ ಕಂಡವರಿದ್ದಾರೆ. ಭಾರೀ ಗಾತ್ರದ ಜೋಡಿ ಚಿರತೆಗಳು ಇದಾಗಿದ್ದು ಇದರಿಂದಾಗಿ ಜನ, ಶಾಲಾ ಕಾಲೇಜು ಮಕ್ಕಳಲ್ಲಿ ಜೀವ ಭಯ ಆವರಿಸಿದೆ. ಬೆಳಗ್ಗಿನ ಜಾವಾ ರಬ್ಬರ್ ಟ್ಯಾಪಿಂಗ್ ಮಾಡುವವರೂ ದಿನಗಳಿಂದ ವೃತ್ತಿಗಾಗಿ ಮನೆಯಿಂದ ಹೊರಹೋಗಲು ಭಯಪಡುತ್ತಿದ್ದಾರೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಹಿಂದೊಮ್ಮೆ ಆನೆ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದಾಗ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಕ್ರೀಯಿಸಿದ್ದನ್ನು ನೆನಪಿಸಿಕೊಂಡಿರುವ ನಾಗರಿಕರೊಬ್ಬರು, ಪ್ರಾಣ ಭಯದಿಂದ ಇರುವ ಜನತೆಗೆ ವ್ಯಾಪ್ತಿಯಿದೆ. ಆದರೆ ಆನೆ ಹುಲಿ ಚಿರತೆಗೆ ನಮ್ಮ ವ್ಯಾಪ್ತಿ ಯಾವುದೆಂದು ಹೇಗೆ ತಿಳಿಯೊತ್ತೆ ಎಂದು ಭಯಮಿಶ್ರಿತ ಹಾಸ್ಯದಿಂದ ಪ್ರತಿಕ್ರಿಯಿಸಿದ್ದಾರೆ.