ಬೆಳ್ತಂಗಡಿಯಲ್ಲಿ ಸಾಧಕರಿಗೆ ಅಭಿನಂದನಾ ಸಮಾರಂಭ

ಬೆಳ್ತಂಗಡಿ : ಈ ದೇಶವನ್ನು ಬಲಿಷ್ಠಗೊಳಿಸಲು ಶಾಸಕರು, ಮಂತ್ರಿಗಳು, ಸಂಸದರುಗಳಿಂದ ಸಾಧ್ಯವಿಲ್ಲ. ತರಗತಿಯೊಳಗಿರುವ ಪ್ರತಿ ವಿದ್ಯಾರ್ಥಿಯಲ್ಲೂ ಸತ್‌ಚಿಂತನೆ ಮೂಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಕಿರಿಯರು ಹಿರಿಯರಿಂದ ಪಡೆಯಬೇಕಾದ್ದು ಆಸ್ತಿ ಮತ್ತು ಸಂಪತ್ತಲ್ಲ ಅವರ ಅನುಭವ ಅತ್ಯಂತ ಶ್ರೇಷ್ಠವಾದುದಾಗಿದ್ದು ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.
ಸತತ 7 ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿರುವ ರಾಜ್ಯದ ಏಕಕ ಸರಕಾರಿ ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆ, ಮತ್ತು 8 ಬಾರಿ ಶೇ. 100 ಫಲಿತಾಂಶ ದಾಖಲಿಸಿದ ರಾಜ್ಯದ ಏಕೈಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಇಲ್ಲಿನ ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದಕ್ಕೆ ಬೆಳ್ತಂಗಡಿ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಜ.13 ರಂದು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸನ್ಮಾನ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಕ್ಕೂ ಮುನ್ನ ಗುರುವಾಯನಕೆರೆ ಪ್ರೌಢಶಾಲೆ ಮಂಜೂರಾತಿಗೆ ಕಾರಣರಾಗಿದ್ದ ಆಗಿನ ಶಾಸಕರಾಗಿದ್ದ ಮಾಜಿ ಸಚಿವ ಕೆ.ಗಂಗಾಧರ ಗೌಡರಿಗೆ, ಶಾಲೆಯ ಸ್ಥಾಪನೆಯ ಸಂದರ್ಭ ಕೊಠಡಿಗಳ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ್ದ ರಂಜನ್‌ರಾವ್ ಯರ್ಡೂರು ಪರವಾಗಿ ಭಾಗವಹಿಸಿದ್ದ ಎನ್‌ಎಸ್‌ಟಿ ಕಾರ್ಯದರ್ಶಿ ಜಯಪ್ರಕಾಶ್ ಭಟ್‌ರಿಗೆ, ಶಾಲೆಗಾಗಿ ೫ ಎಕ್ರೆ ಸ್ಥಳದಾನಕ್ಕೆ ಮನಃ ಮಾಡಿದ್ದ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ ಮತ್ತು ವಿದ್ಯಾ ಎಸ್.ನಾಯಕ್ ದಂಪತಿಗೆ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಥಾಪನೆಯ ಸಂದರ್ಭ ಮೂರೂವರೆ ಎಕ್ರೆ ಕುಮ್ಕಿ ಜಮೀನು ಬಿಟ್ಟುಕೊಟ್ಟಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟುರಿಗೆ, ಶೇ.100 ಫಲಿತಾಂಶಕ್ಕೆ ಕಾರಣಕರ್ತರಾದ ಎಲ್ಲ ವಿದ್ಯಾರ್ಥಿಗಳಿಗೆ, ಪ್ರೇರಣೆಯಾದ ಎರಡೂ ಶಾಲೆಗಳ ಶಿಕ್ಷಕ ವರ್ಗದವರಿಗೆ, ಗುರುವಾಯನ ಕೆರೆಯಲ್ಲಿ 5 ವರ್ಷ ಫಲಿತಾಂಶಕ್ಕೆ ಬುನಾದಿ ಹಾಕಿಕೊಟ್ಟಿದ್ದ ನಿರ್ಗಮಿತ ಶಿಕ್ಷಕ ಪ್ರಶಾಂತ್ ಜೈನ್‌ರಿಗೆ, ಶಾಲೆಯ ಅಡುಗೆ ಸಿಬ್ಬಂದಿಗಳಿಗೆ ಸಚಿವರು ಮತ್ತು ಗಣ್ಯರು ವಿಶೇಷ ರೀತಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಗೇರುಕಟ್ಟೆ ಶಾಲಾ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ವಿ.ಕಿಣಿ, ಜಿ.ಪಂ ಸದಸ್ಯರಾದ ಕೆ.ಕೆ.ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ವಿ.ಧರಣೇಂದ್ರ ಕುಮಾರ್ ಮತ್ತು ನಮಿತಾ.ಕೆ.ಪೂಜಾರಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರವೀಣ್ಚಂದ್ರ, ಮಾಜಿ ಶಾಸಕರ ಪತ್ನಿ, ಕಾರ್ಯಕ್ರಮ ಸಂಘಟಕರೂ ಆಗಿದ್ದ ಸುಜಿತಾ ವಿ.ಬಂಗೇರ ಉಪಸ್ಥಿತರಿದ್ದರು. ತಾ.ಪಂ ಸಂಯೋಜಕ ದಯಾನಂದ ಲಾಲ ನಿರೂಪಿಸಿದರು. ಪತ್ರಕರ್ತ ದೇವಿಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಸಮಾರಂಭದಲ್ಲಿ ಎರಡೂ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು, ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರುಗಳು ಭಾಗಿಯಾಗಿದುದು ವಿಶೇಷವಾಗಿತ್ತು. ರವಿವಾರವಾಗಿದ್ದರೂ ಆಶಾ ಸಾಲಿಯಾನ್ ಸಭಾಂಗಣ ಭರ್ತಿಯಾಗಿತ್ತು. ಆಗಮಿಸಿದ ಎಲ್ಲರಿಗೂ ಸ್ಥಳದಲ್ಲೇ ತಯಾರಿಸಿದ ಬಿಸಿಬಿಸಿ ಮಸಾಲೆ ದೋಸೆ, ಕಾಶಿ ಹಲ್ವ, ಸಹಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.