ವಿಶ್ವಕರ್ಮ ಯುವ ಮಿಲನ್ ಬೆಳ್ತಂಗಡಿ ತಾಲೂಕು ಘಟಕದ ವಾರ್ಷಿಕೋತ್ಸವ ಸಮಾರಂಭ ಮತ್ತು ಸಮುದಾಯ ಬಂಧುಗಳಿಗೆ ವಿವಿಧ ಸೌಲಭ್ಯಗಳ ವಿತರಣೆ, ಜಾಗೃತಿ ಕಾರ್ಯಕ್ರಮ ಜ. 13 ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಆಚಾರ್ಯ ಅಳದಂಗಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಭೆಯಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮೂಲಕ ಪಂಚ ಕಸುಬುದಾರ 1 ಸಾವಿರ ಮಂದಿ ಸಮುದಾಯ ಬಂಧುಗಳಿಗೆ ಪ್ರಮಾಣಪತ್ರ ವಿತರಣೆ, ತರಬೇತಿ ಪಡೆದ 200 ಮಂದಿಗೆ ಪ್ರಮಾಣ ಪತ್ರ ಹಸ್ತಾಂತರ, ಕಟ್ಟಡ ಮತ್ತು ಇತರೇ ಕಾರ್ಮಿಕರಾಗಿರುವ 30 ಮಂದಿಗೆ ಕಾರ್ಮಿಕ ಗುರುತಿನ ಚೀಟಿ ವಿತರಣೆ, ಸಮಾಜ ಬಾಂಧವರ ಪೈಕಿ ವಿಕಲಾಂಗರಾಗಿರುವ 10 ಮಂದಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯ ನಡೆಯಲಿದೆ. ಸಂಘಟನೆ ಸಮುದಾಯ ಬಾಂಧವರಿಗೆ ಸರಕಾರಿ ಸೌಲಭ್ಯಗಳ ಮಾಹಿತಿಯನ್ನು ತರಬೇತಿಗಳ ಮೂಲಕ ನೀಡಿ ಅವರನ್ನು ಫಲಾನುಭವಿಗಳಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಹಾಸನ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ವಿಶ್ವಕರ್ಮ ಜಗದ್ಗುರುಗಳಾದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಹಿತ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ವಿವೇಕ್ ಆಚಾರ್ಯ ಮಂಗಳೂರು, ಕರಕುಶಲ ಮಾರುಕಟ್ಟೆ ಸಹ ನಿರ್ದೇಶಕ ಸಾಜಿ ಎಂ.ಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪದಾಧಿಕಾರಿ ಗಳಾದ ರಾಮಪ್ರಸಾದ್ ಎನ್. ಎಸ್ ನಾರಾವಿ, ಸುಧಾಕರ ಆಚಾರ್ಯ ವೇಣೂರು, ಜಿಲ್ಲಾ ಪದಾಧಿಕಾರಿಣಿ ಪ್ರಶಾಂತಿ ಆಚಾರ್ಯ ಮತ್ತು ಮಾಧ್ಯಮ ಪ್ರತಿನಿಧಿ ಗೀತಾ ಅಚ್ಚುತ ಆಚಾರ್ಯ ದೊಂಡೋಲೆ ಉಪಸ್ಥಿತರಿದ್ದರು