ಆದಾಯಕ್ಕಾಗಿ ಕೃಷಿ.. ಹವ್ಯಾಸಕ್ಕಾಗಿ ಕಸಿ.. ಮಿಶ್ರ ಕೃಷಿಕ ನಿಡ್ಲೆ ಆಲ್ತಿಮಾರ್ ವಿಶ್ವನಾಥ ಗೌಡ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮನೆಯ ಸುತ್ತೆಲ್ಲಾ ಪೂರ್ತಿ ಕೃಷಿ. ಮನೆಯಂಗಳ ಮತ್ತು ಉಳಿಕೆ ಜಾಗದಲ್ಲಿ ನಾನಾ ತರದ ಮಿಶ್ರಬೆಳೆಗಳ ಪ್ರಾಯೋಗಿಕ ಕೃಷಿ. ಇದ್ದ ಕೃಷಿಗಳಲ್ಲಿ, ಹೊವಿನ ಗಿಡಗಳಲ್ಲಿ ನಾನಾ ತರಹದ ಕಸಿ. ಒಟ್ಟು ಅವರ ಮನೆಯ ವಾತಾವರಣ ಕೃಷಿ, ಕೃಷಿಯಲ್ಲಿ ಸಂಶೋಧನೆ, ಕಸಿ ಯಲ್ಲಿ ಆವಿಷ್ಕಾರ. ಇದು ನಿಡ್ಲೆ ಗ್ರಾಮದ ಅಲ್ತಿಮಾರ್ ನಿವಾಸಿ, ಎಲ್‌ಐಸಿ ಏಜೆಂಟ್ ವಿಶ್ವನಾಥ ಗೌಡ ಕೆ ಅವರ ಮನೆಯ ವಾತಾವರಣ.
ಮೂಲತಃ ಮೊಗ್ರು ಗ್ರಾಮದ ಕಡಮ್ಮಾಜೆ ಈಶ್ವರ ಗೌಡ ಮತ್ತು ರಾಮಕ್ಕ ದಂಪತಿ ಪುತ್ರರಾಗಿರುವ ವಿಶ್ವನಾಥ ಕೆ. ಕಿರಿಯ ಪ್ರಾಯದಿಂದಲೇ ಕೃಷಿಯಲ್ಲಿ ಆಸಕ್ತರು. ಶಾಲಾ ದಿನಗಳಲ್ಲೇ ಜೇನು ಸಾಕಾಣೆ, ಮನೆಯ ಸುತ್ತ ಇದ್ದ ಸಾಂಪ್ರದಾಯಿಕ ಕೃಷಿ ಪದ್ಧತಿ, ತಂದೆ ತಾಯಿ ಸಹೋದರರು ಕೃಷಿಯಲ್ಲಿ ತೊಗಡಿಕೊಂಡಿರುವುದರಿಂದ ಪ್ರೇರಣೆ ಪಡೆದು ಅವರೂ ತನ್ನನ್ನು ಕೃಷಿಯತ್ತ ಒಳವು ಬೆಳೆಸಿಕೊಂಡವರು. ತಂದೆಯ ಕಾಲದಲ್ಲೇ ನಿಡ್ಲೆಯಲ್ಲಿ ಖರೀದಿಸಿದ ಜಾಗದಲ್ಲಿ ನೆಲೆಸಿದ ಅವರು ಮೂಲಕೃಷಿಯಾಗಿ ಅಡಿಕೆ, ತೆಂಗು, ರಬ್ಬರ್, ಬಾಳೆ ಕೃಷಿ ಹೊಂದಿದ್ದಾರೆ.

ವಿಶ್ವನಾಥ ಗೌಡರ ಇತರ ಉಪಕೃಷಿಯ ಪ್ರಾಕಾರಗಳು:
ರಾಮಫಲ, ಲಕ್ಷ್ಮಣ ಫಲ, ಸೀತಾಫಲ, ಫಿಲೋಶಯನ್, ಕಟ್‌ಫ್ರುಟ್, ಪ್ರತೀ ಹಣ್ಣು ಕೆ.ಜಿ ತೂಗುವ ಪೇರಳೆ ಹಣ್ಣಿನ ಗಿಡ, ರಂಬುಟಾನ್, ಮುಸುಂಬಿ, ಕಿತ್ತಳೆ, ಬಟರ್‌ಫ್ರುಟ್, ಅಪರೂಪದ ಕೃಷಿ ಅಂಜೂರ ಸಣ್ಣ ಮತ್ತು ದೊಡ್ಡದು, ಮಲೇಶಿಯನ್ ಆಪಲ್, ದೊಡ್ಡ ಗಾತ್ರದ ಕಸಿ ಅಂಬಟೆ, ಮಿರಾಕಲ್ ಫ್ರುಟ್, ದಾಳಿಂಬೆ, ಚೆರ್ರಿ, ಲಿಂಬೆ, ಸಣ್ಣ ಗಾತ್ರದಲ್ಲಿ ಮರಪೂರ್ತಿ ತುಂಬಿಕೊಂಡಂತೆ ಬೆಳೆಯುವ ಏಲಕ್ಕಿ ಪೇರಳೆ, ಲಂಗ್‌ಸೆಟ್ ಫ್ರುಟ್, ಬುಗರಿ ಫ್ರುಟ್, ಡೆಲ್‌ಫ್ರುಟ್, ಎಗ್ಗ್‌ಫ್ರುಟ್, ಡ್ರಾಗನ್ ಫ್ರುಟ್, ಲಿಂಬೆಹುಳಿ, ದಾರೆಹುಳಿ, ಬಿಲ್ವಪತ್ರೆ, ಮ್ಯಾಂಗ್‌ಸ್ಟಿನ್, ಮಕತಾದೇವ, ಬಗೆಬಗೆಯ ಪನಿನೇರಳೆ, ವರ್ಷಪೂರ್ತಿ ನಿರಂತರ ಫಲಕೊಡುವ ಮಾವು
(ಆಲ್‌ಸೀಸನ್ ಮ್ಯಾಂಗೋ), ದ್ರಾಕ್ಷಿ, ಏಲಕ್ಕಿ, ಜಾಯಿಕಾಯಿ, ಪುನರ್‌ಪುಳಿಯಲ್ಲಿ ಕೆಂಪು ಮತ್ತು ಹಳದಿ ಎರಡು ತಳಿಗಳು, ಇನ್ನಿತರ ಮಾಮೂಲಿ ಗಿಡಿಗಳನ್ನು ಅವರು ಬೆಳೆದಿದ್ದಾರೆ.

ಕಸಿಯಲ್ಲಿ ಖುಷಿ…!
ಇಷ್ಟೆಲ್ಲಾ ಕೃಷಿ ಅವರು ಮಾಡಿದ್ದರೂ ಕಸಿ ಕಟ್ಟುವ ವಿಷಯದಲ್ಲಿ ಖುಷಿ ಕಂಡುಕೊಂಡಿದ್ದಾರೆ. ಒಂದೇ ಗಿಡದಲ್ಲಿ ಹತ್ತು ಬಣ್ಣದ ಕೇಪುಳ ಹೂವುಗಳು, ಒಂದೇ ಗಿಡದಲ್ಲಿ ನಾಲ್ಕು ಬಣ್ಣದ ಮೊಝಾಂಡಾ ಹೂವುಗಳು, ಒಂದೇ ಗಿಡದಲ್ಲಿ ದೊಡ್ಡಮೆಣಸು, ಕುಮುಟೆ, ಉಪ್ಪಿನಕಾಯಿ ಮೆಣಸು ಮತ್ತು ಹಸಿರು ಬಣ್ಣದ ಮೆಣಸು ಕಸಿ ಕಟ್ಟಿದ್ದಾರೆ. 15 ಬಗೆಯ ಕಸಿ ದಾಸವಾಳ,5 ಬಗೆಯ ಬಳ್ಳಿ ಹೂವುಗಳು, 6-7 ಬಗೆಯ ವಿಶೇಷ ಹೂವುಗಳನ್ನು ಅವರು ಕಸಿಯಲ್ಲಿ ಆವಿಷ್ಕರಿಸಿದ್ದಾರೆ. ಒಂದೇ ಬುಡದಲ್ಲಿ 5 ಬಗೆಯ ಮಾವುಗಳಾದ ಮಲ್ಲಿಕಾ, ನೀಲಮ್, ತೋತಪುರಿ, ಊರಿನ 2 ಸಿಹಿಯಾದ ಮಾವುಗಳನ್ನು ಅವರು ಕಸಿ ಕಟ್ಟಿದ್ದಾರೆ.

ಬೊಳ್ಳೆಸೊಪ್ಪು ಗಿಡಕ್ಕೆ ಮೊಝಾಂಡಾ ಕಸಿ..
ಕಾಡು ಜಾತಿಯ ಅಧಿಕ ನೀರುಇಲ್ಲದೆ ಬೆಳೆಯುವ ಬೊಳ್ಳೆಸೊಪ್ಪು ಗಿಡಕ್ಕೆ ಮೊಝಾಂಡಾ ಹೂವಿನ ಗಿಡವನ್ನು ಕಸಿ ಕಟ್ಟಿದ್ದಾರೆ. ಕಾಡು ಜಾತಿಯ ಕೇಪುಳು ಗಿಡಕ್ಕೆ ಬಣ್ಣದ ಬೇರೆ ಕೇಪುಳು ಗಿಡಗಳನ್ನು ಕಸಿಮಾಡಿದ್ದಾರೆ. ಕಲ್ಯಟೆ ಎನ್ನುವ ನಿಷ್ಪ್ರಯೋಜವಾಗಿರುವ ಗಿಡಕ್ಕೆ 2-3ಬಗೆಯ ಬದನೆ ಗಿಡಗಳನ್ನು ಕಸಿ ಮಾಡಿದ್ದಾರೆ. ಕಾಟು ಮತ್ತು ನೆಕ್ಕರೆ ಮಾವಿನ ಗಿಡಗಳು ಒಮ್ಮೆ ಭೂಮಿಯಲ್ಲಿ ಜೀವ ಪಡೆದುಕೊಂಡರೆ ಅದು ಹೊರಗಿನಿಂದ ನೀರಾಶ್ರಯವಿಲ್ಲದೆ ಬೆಳೆಯುವ ಸಾಮರ್ಥ್ಯ ಹೊಂದಿದ್ದು, ಅಂತಹ ಗಿಡಕ್ಕೆ ಅವರು ಜಾಸ್ತಿ ಹಣ್ಣು ಕೊಡುವ ಇತರ ಮಾವಿನ ತಳಿಯ ಗಿಡವನ್ನು ಕಶಿ ಮಾಡಿದ್ದಾರೆ.
ಸಾವಯವ ಗೊಬ್ಬರ ಮಾತ್ರ ಬಳಕೆ:
ವಿಶ್ವನಾಥ ಗೌಡರ ಈ ಮಿಶ್ರಕೃಷಿಯಲ್ಲಿ ಅವರು ಶೀಘ್ರ ಫಲಕ್ಕೆ ಆಶಿಸಿ ರಾಸಾಯ ನಿಕ ಗೊಬ್ಬರದ ಬೆನ್ನುಬೀಳದೆ ಅಪ್ಪಟ ಸಾವಯವ ಗೊಬ್ಬರ ಮಾತ್ರ ಬಳಸುತ್ತಾರೆ. ಹಟ್ಟಿಗೊಬ್ಬರಕ್ಕಾಗಿ ಜಾನುವಾರು ಸಾಕುತ್ತಿದ್ದು ಹಾಲು ಉತ್ಪಾದನೆ ಕೂಡ ಮಾಡುತ್ತಾರೆ. ಇದರಿಂದ ಗೊಬ್ಬರ, ಸ್ಲರಿ ಜೊತೆಗೆ ಮನೆ ಬಳಕೆಗೆ ಉಪಯೋಗಿಸಿ ಹೆಚ್ಚುವರಿ ೧೦ ಲೀಟರ್ ಹಾಲನ್ನು ಮಿಲ್ಕ್ ಸೊಸೈಟಿಗೂ ನೀಡುತ್ತಾ ಹೈನುಗಾರರೂ ಆಗಿದ್ದಾರೆ.
ಕುರಿಗೊಬ್ಬರ, ಕೋಳಿ ಗೊಬ್ಬರ, ಹುರುಳಿಂಡಿ, ಕೈಬೇವಿನ ಹಿಂಡಿ ಇವರ ಪ್ರಮುಖ ಸಾವಯವ ಬಳಕೆಯ ಗೊಬ್ಬರಗಳು. ಗಿಡಗಳ ತುದಿ ಮುರುಟುಕಟ್ಟಿದರೆ ಅದಕ್ಕಾಗಿ ಮಾತ್ರ ಸ್ವಲ್ಪ ಪ್ರಮಾಣದ ಮಿಟ್ಟ್, ಬಾವಸ್ಟಿನ್ ಎನ್ನುವ ರಾಸಾಯನಿಕವನ್ನು ಲೀಟರ್‌ಗೆ ೧ ಮಿಲಿ ಮಾತ್ರ ಬೆರೆಸಿ ಉಪಯೋಗಿಸುತ್ತಾರೆ. ತೆಂಗು ಮತ್ತು ಅಡಿಕೆ ಮರಕ್ಕೆ ಈ ರೋಗ ಬಂದರೆ ಬೋರ್ಡೋ ದ್ರಾವಣ ನೇರ ಹುಯ್ಯುವ ವಿಧಾನ ಅನುಸರಿಸಿ ಯಶಸ್ಸು ಕಂಡಿದ್ದಾರೆ. ಕುರುವಯಿ(ತುಳು ಭಾಷೆಯಲ್ಲಿ) ಕಾಟ ಜೋರಾಗಿದ್ದರೆ ಅರ್ಧ ಎಕರೆ ತೋಟದಲ್ಲಿ ೨ ಕಡೆಯಂತೆ ಬಕೆಟ್‌ನಲ್ಲಿ ಹುರುಳಿಂಡಿ ಬೆರೆಸಿ ಮುಕ್ಕಾಲು ಬಕೆಟ್‌ನಷ್ಟು ಇಟ್ಟರೆ ಅದರ ವಾಸನೆಗೆ ಎಲ್ಲವೂ ಆಕರ್ಷಿಸಲ್ಪಟ್ಟು ಅದಕ್ಕೆ ಬಂದು ಬೀಳುತ್ತದೆ.3-4 ತಿಂಗಳಿಗೊಮ್ಮೆ ನೀರು ಬದಲಾಯಿಸಿದರೆ ಸಾಕು ಎನ್ನುತ್ತಾರೆ ಅವರು.
ಜೇನುಕೃಷಿ ಬಗ್ಗೆ ಆಸಕ್ತಿ, ತರಬೇತಿ ನೀಡುವ ಬಗ್ಗೆ ಒಲವು:
ಎಸ್ಸೆಸ್ಸೆಲ್ಸಿ ಶಿಕ್ಷಣ ಮುಗಿಸಿದ ಬಳಿಕ ಪುತ್ತೂರು ಕ್ಯಾಶ್ಯೂ ರೀಸರ್ಚ್ ಸೆಂಟರ್‌ನಲ್ಲಿ ಪೂರಕ ಕೃಷಿ ತರಬೇತಿ ಪಡೆದುಕೊಂಡಿರುವ ಅವರು ಜೇನುಕೃಷಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು, ಮುಂದಕ್ಕೆ ಇದನ್ನು ಇನ್ನೂ ವಿಸ್ತರಿಸಿ ಮಾಡುವ ಯೋಚನೆ ಹೊಂದಿದ್ದಾರೆ. ಕರಿಮೆಣಸು ಕೃಷಿಯನ್ನು ಕಂಬದ ಮೇಲೆ ಬೆಳೆದು ಹೆಚ್ಚು ಇಳುವರಿ ಪಡೆಯುವ ಮಾರ್ಗೋಪಾಯ ಹೊಂದಿದ್ದಾರೆ. ಒಂದು ಎಗ್ಗೆಯಲ್ಲಿ ನಾಲ್ಕೈದು ಕವಲು ಒಡೆದು ಕರಿಮೆಣಸು ಫಸಲು ಕೊಡುವ ಗಿಡವನ್ನು ಅವರು ತಂದಿದ್ದು ಅದನ್ನು ತೋಟದಲ್ಲಿ ವ್ಯಾಪಕ ಬೆಳೆಯುವ ಯೋಚನೆ ಹೊಂದಿದ್ದಾರೆ. ಈಗಾಗಲೇ ಮಿಶ್ರ ಕೃಷಿ ಮತ್ತು ಕಸಿ ಬಗ್ಗೆ ಕೃಷಿ ಇಲಾಖೆ ಮತ್ತು ಆಸಕ್ತ ಕೃಷಿಕರಿಗೆ ಅವರು ಮಾಹಿತಿ ನೀಡುತ್ತಿದ್ದಾರೆ. ಶಾಲಾ ಕಾಲೇಜು ಮಕ್ಕಳಿಗೆ ತೋಟ ವೀಕ್ಷಣೆಗೆ ಅವಕಾಶ ನೀಡುತ್ತಿದ್ದು, ಆ ಮೂಲಕ ಮಕ್ಕಳಿಗೆ ಕೃಷಿ ಪಾಠ ಏರ್ಪಡಿಸಿ ಅವರಲ್ಲಿ ಆಸಕ್ತಿ ಮೂಡುವಂತೆ ಮಾಡಿದ್ದಾರೆ. ಇದನ್ನು ಇನ್ನೂ ಮುಂದುವರಿಸಿಕೊಂಡು ಹೋಗಲು ಇರಾದೆ ಹೊಂದಿದ್ದಾರೆ. ಮಿಶ್ರ ಬೆಳೆಗಳ ಪೈಕಿ ಆದಾಯ ಬರುವ ಬೆಳೆಯನ್ನು ಹೆಚ್ಚು ಬೆಳೆದು ಆವಿಷ್ಕಾರ, ತರಬೇತಿಯೊಂದಿಗೆ ಗಳಿಕೆಯ ಉದ್ಧೇಶವನ್ನು ಅವರು ಹೊಂದಿದ್ದಾರೆ.
ನೀರು, ಮಣ್ಣು ಹರಿದುಹೋಗದಂತೆ ಕ್ರಮ:
ಇವರ ತೋಟದಲ್ಲಿ ಮತ್ತು ಮನೆಯಿಂದ ಎತ್ತರದ ಗುಡ್ಡದಲ್ಲಿ ಮಳೆಗಾಲದಲ್ಲಿ ಬಿದ್ದ ನೀರು ಹರಿದುಹೋಗದಂತೆ ಅಲ್ಲಲ್ಲಿ ತಟ್ಟುಗಳನ್ನು ನಿರ್ಮಿಸಿ ಇಂಗಿಸುವ ಕೆಲಸ ಮಾಡಿದ್ದಾರೆ. ಇದರ ಪರಿಣಾಮ ಮನೆಯಿಂದ ಕೆಳಭಾಗದ ತೋಟದಲ್ಲಿ, ಕೆರೆಯಲ್ಲಿ ನೀರಿನ ಒರತೆ ಅಧಿಕವಾಗುವಂತೆ ಮಾಡಿದ್ದಾರೆ. ತೋಟದೊಳಗೆ ನೀರಿನ ತೋಡಿಗೆ ಅಲ್ಲಲ್ಲಿ ಅಡ್ಡಕಟ್ಟಿ ನೀರು ನಿಲ್ಲುವಂತೆ ಮಾಡಿಕೊಳ್ಳುತ್ತಾರೆ. ಮಣ್ಣು ಕೊಚ್ಚಿಹೋಗದಂತೆ ಅಪಾರ ಶ್ರದ್ಧೆವಹಿಸಿ ಫಲವತ್ತದೆ ಸೋರಿಕೆಯಾಗದಂತೆ ಗಮನಹರಿಸಿದ್ದಾರೆ. ಇವರ ಈ ಆಸಕ್ತಿಗೆ ಪತ್ನಿ ಹೇಮಾವತಿ ಸಾಥ್ ನೀಡುತ್ತಾರೆ. ಉನ್ನತ ವ್ಯಾಸಂಗ ಮಾಡುತ್ತಿರುವ ಪುತ್ರಿಯರಾದ ಸುರಕ್ಷಾ ಮತ್ತು ಸೌಜನ್ಯಾ, 10ನೇ ತರಗತಿಯಲ್ಲಿರುವ ಪುತ್ರ ದೇವಿಪ್ರಸಾದ್ ನೆರವಾಗುತ್ತಿದ್ದಾರೆ. ಪಧವೀಧರರಾಗಿರುವ ವಿಶ್ವನಾಥ ಗೌಡರು ಮಕ್ಕಳನ್ನೂ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಎಲ್‌ಐಸಿ ಏಜೆಂಟ್ ಆಗಿರುವ ಅವರು ಕೊಕ್ಕಡದಲ್ಲಿ ಸೇವಾ ಕಚೇರಿಯನ್ನೂ ತೆರೆದು ಜನರಿಗೆ ಸೇವೆ ನೀಡುತ್ತಿದ್ದಾರೆ.

ವಿಶ್ವನಾಥ ಗೌಡರ ಸಂಪರ್ಕಕ್ಕೆ: 9964087679

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.