ಫೆ.9-18: ಧರ್ಮಸ್ಥಳದ ಬಾಹುಬಲಿಗೆ ವೈಭವದ ಮಹಾಮಸ್ತಕಾಭಿಷೇಕ

ಮಹೋತ್ಸವದ ಚಾಲನೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಧರ್ಮಸ್ಥಳಕ್ಕೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ೪ನೇ ಮಹಾಮಸ್ತಕಾಭಿಷೇಕ ಮಹೋತ್ಸವವು2019 ರ ಫೆ.9 ರಿಂದ ಫೆ.18 ರವರೆಗೆ ಶ್ರೀ 108 ಆಚಾರ್ಯ ಶ್ರೀ ವರ್ಧಮಾನ ಸಾಗರ್ ಜೀ ಮಹಾರಾಜ್ ಮತ್ತು 108 ಶ್ರೀ ಆಚಾರ್ಯ ಶ್ರೀ ಪುಷ್ಪದಂತ ಸಾಗರ್ ಜೀ ಮಹಾರಾಜ್, ಶ್ರವಣಬೆಳಗೊಳದ ಪರಮಪೂಜ್ಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನ, ಕಾರ್ಕಳ ದಾನಶಾಲಾ ಮಠದ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕರ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಲಿದೆ. ಕಾರ್ಯಕ್ರಮಗಳ ನಿಮಿತ್ತ ಫೆಬ್ರವರಿ ಮೊದಲ ವಾರದಲ್ಲೇ ಮಹೋತ್ಸವದ ಚಾಲನೆಗಾಗಿ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರು ಮಹೋತ್ಸವದ ಚಾಲನೆಗಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸುಮಾರು ೨೦೦ ಅಧಿಕ ದಿಗಂಬರ ಮುನಿಗಳು, ಸಾದ್ವಿಗಳು, ಭಟ್ಟಾರಕರು, ತ್ಯಾಗಿಗಳು ಸಾನಿಧ್ಯ ನೀಡಲಿದ್ದಾರೆ. ಸಮಾರಂಭದ ದಿನಗಳಲ್ಲಿ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳ ಸಹಿತ ಕೇಂದ್ರ ಮತ್ತು ರಾಜ್ಯದ ಸಚಿವರುಗಳು ಹಾಗೂ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು
ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ಜ.2 ರಂದು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ವಿವರ ನೀಡಿದರು.
ತ್ಯಾಗ ತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಜೈನ ಧರ್ಮದ ಸಮಸ್ಥ ಮೌಲ್ಯಗಳ ಪ್ರತಿರೂಪ. ರಾಜಭೋಗ ಜೀವನ ತ್ಯಜಿಸಿ ಮೋಕ್ಷದ ಋಜು ಮಾರ್ಗವನ್ನು ಆರಿಸಿಕೊಂಡು ಆಧ್ಯಾತ್ಮಿಕ ಉತ್ತುಂಗಕ್ಕೇರಿದ ಬಾಹುಬಲಿಯ ಜೀವನ ಇಂದಿಗೂ ಎಲ್ಲಾ ಜೈನ ಧರ್ಮೀಯರಿಗೆ ಆದರ್ಶಪ್ರಾಯವಾದದ್ದು. ರಾಜ್ಯದೊಂದಿಗೆ ಉಟ್ಟಬಟ್ಟೆಯನ್ನೂ ತ್ಯಜಿಸಿದ ಬಾಹುಬಲಿ ಆಡಂಬರ, ಅಭಿಷೇಕ ಇವೆಲ್ಲವುಗಳ ಪರಿಧಿಯನ್ನು ಮೀರಿ ನಿಂತವರು. ಆದರೂ ಅವರ ಪರಮೋಚ್ಛ ತ್ಯಾಗ- ತಪಸ್ಸಿನ ಗುಣಗಳನ್ನು ಆರಾಧಿಸುವ ಭಕ್ತರು ೧೨ ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಗಗನ ಸದೃಶ ಮೂರ್ತಿಯ ತಲೆಯಿಂದ ಕಾಲಿನೆಡೆಗೆ ಹರಿದು ಬರುವ ಅಭಿಷೇಕ ದ್ರವ್ಯಗಳು ಮನುಷ್ಯನೊಳಗೆ ಹುದುಗಿರುವ ಅಹಂ ತಲೆಯಿಂದಿಳಿದು ಕಾಲಿನಿಂದಾಚೆಗೆ ಹರಿದುಹೋಗಬೇಕು, ಮನಸ್ಸು ನಿರ್ಮಲವಾಗಬೇಕು ಎಂಬ ಸಂದೇಶವನ್ನು ಭಕ್ತಾದಿಗಳಿಗೆ ನೀಡುತ್ತದೆ. ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ಕಲ್ಲಿನಲ್ಲಿ ಮೂಡಿಸಿದ ವಿಗ್ರಹದ ರಕ್ಷಣೆಗಾಗಿ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಬೇಕೆನ್ನುವ ವೈಜ್ಞಾನಿಕ ಕಾರಣವೂ ಮಹಾಮಸ್ತಕಾಭಿಷೇಕದ ಹಿಂದಿದೆ ಎಂದರು.
ಇದೇ ಮೊದಲ ಬಾರಿಗೆ ಪಂಚಮಹಾವೈಭವ:
ಫೆ. 9ರಿಂದ ಧರ್ಮಸ್ಥಳದಲ್ಲಿ ಮಹಾವೈಭವ ನಡೆಯಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಧರ್ಮಸ್ಥಳ ಸಾಕ್ಷಿಯಾಗಲಿದೆ. ಈ ಹಿಂದೆ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನೆರವೇರಿಸಿ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿತ್ತು. ಈ ಬಾರಿ ಆಚಾರ್ಯ ಶ್ರೀಗಳ ಮತ್ತು ಭಟ್ಟಾರಕರ ಅನುಮತಿ ಪಡೆದು ಇದೇ ಮೊದಲ ಬಾರಿಗೆ ಶ್ರೀ ಭಗವಾನ್ ಬಾಹುಬಲಿ ಪಂಚ ಮಹಾವೈಭವದ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಣಯಿಸಲಾಗಿದೆ.
1982 ರಲ್ಲಿ ಪ್ರಥಮ ಮಹಾಮಸ್ತಕಾಭಿಷೇಕ:
ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಪ್ರತಿಷ್ಠಾಪಿತನಾಗಿರುವ ಭಗವಾನ್ ಶ್ರೀ ಬಾಹುಬಲಿಯ 39 ಅಡಿ ಎತ್ತರದ ವಿರಾಟ್ ಮೂರ್ತಿ ಹೆಗ್ಗಡೆ ಕುಟುಂಬದ ಸಂಕಲ್ಪ ಶಕ್ತಿಯ ಪ್ರತೀಕವಾಗಿ ಪ್ರತಿಷ್ಠಾಪಿತವಾಗಿದೆ. ದಿ. ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಸಂಕಲ್ಪದಿಂದ ಪ್ರಾರಂಭವಾದ ಬಾಹುಬಲಿ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಳಿಸುವ ಅವಕಾಶ ಸಿಕ್ಕಿತು. ಈ ವಿಗ್ರಹವನ್ನು ಕೆತ್ತಿದ್ದು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರು. 1967ರಲ್ಲಿ ಕಾರ್ಕಳದ ಮಂಗಳ ಪಾದೆಯಲ್ಲಿ ವಿಗ್ರಹ ಕೆತ್ತನೆ ಕಾರ್ಯ ಆರಂಭಿಸಿ, 1973ರಲ್ಲಿ ಕಾರ್ಕಳದಿಂದ ಧರ್ಮಸ್ಥಳಕ್ಕೆ ವಿಗ್ರಹ ಸಾಗಿಸಿದ್ದು, ೧೯೭೫ರಲ್ಲಿ ಪ್ರತಿಷ್ಠಾಪನಾ ಕಾರ್ಯ ಆ ಹಾಗೂ 1982ರಲ್ಲಿ ನಡೆದ ಪ್ರಥಮ ಮಹಾಮಸ್ತಕಾಭಿಷೇಕ ನಡೆದ ಪವಾಡಸದೃಶ ಕಾರ್ಯ ಇಂದಿಗೂ ಅವಿಸ್ಮರಣೀಯ ಎಂದರು.
ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕಗಳು:
1982ರ ಫೆ.4ರಂದು 108ನೇ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜ್ ಮತ್ತು ೧೦೮ನೇ ಆಚಾರ್ಯ ಶ್ರೀ ವಿಮಲ ಸಾಗರ ಮಹಾರಾಜರ ನೇತೃತ್ವದಲ್ಲಿ ಪ್ರಥಮ ಮಹಾಮಸ್ತಕಾಭಿಷೇಕ ನಡೆದಿತ್ತು. ೧೯೯೫ರ ಫೆಬ್ರವರಿ ೫ರಿಂದ ೧೦ರವರೆಗೆ ೧೦೮ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್ ಜೀ ಮಹಾರಾಜರ ನೇತೃತ್ವದಲ್ಲಿ ದ್ವಿತೀಯ ಮಹಾಮಸ್ತಕಾಭಿಷೇಕ ನಡೆದಿತ್ತು. ೨೦೦೭ರ ಜನವರಿ ೨೮ರಿಂದ ಫೆ.೨ರವರೆಗೆ ೧೦೮ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್ ಜೀ ಮಹಾರಾಜರ ನೇತೃತ್ವದಲ್ಲಿ ತೃತೀಯ ಮಹಾಮಸ್ತಕಾಭಿಷೇಕ ನಡೆದಿತ್ತು.
ಹೇಮಾವತಿ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಡಿ.ಹರ್ಷೇಂದ್ರ ಕುಮಾರ್ ಸಂಯೋಜನೆಯಲ್ಲಿ ಕಾರ್ಯಕ್ರಮಗಳು ಸುವ್ಯವಸ್ಥಿತವಾಗಿ ನಡೆಯಲು ೨೬ ಸಮಿತಿಗಳನ್ನು ರಚಿಸಲಾಗಿದ್ದು, ಸಂಚಾಲಕರು ಮತ್ತು ಸಂಯೋಜಕರನ್ನು ನೇಮಿಸಲಾಗಿದೆ. ರಾಜ್ಯಮಟ್ಟದ ಸಂಪರ್ಕ ಸಮಿತಿ, ಅಟ್ಟಳಿಗೆ ನಿರ್ಮಾಣ ಸಮಿತಿ, ಆರ್ಥಿಕ ಸಮಿತಿ, ಅಭಿಷೇಕ, ಪೂಜಾ ಸಮಿತಿ, ಪಂಚಕಲ್ಯಾಣ ಸಮಿತಿ, ಸಾಂಸ್ಕೃತಿಕ ಸಮಿತಿ, ತ್ಯಾಗಿ ಸೇವಾ ಸಮಿತಿ, ಚಪ್ಪರ ಸಮಿತಿ, ಆಹಾರ ಸಮಿತಿ ಮೊದಲಾದ ಸಮಿತಿಗಳನ್ನು ರಚಿಸಲಾಗಿದ್ದು ಶ್ರೀ ಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಸರಕಾರಕ್ಕೆ ಅಭಿನಂದನೆ:
ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಮಂಗಳ ಕಾರ್ಯಗಳ ಜೊತೆಗೆ ರಾಜ್ಯ ಸರಕಾರದಿಂದ ಸಚಿವ ರೇವಣ್ಣ ಅವರು ಪರ್ಯಾಯ ರಿಂಗ್ ರೋಡ್, ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೂ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಧರ್ಮಸ್ಥಳದಲ್ಲೇ ಅಧಿಕಾರಿಗಳ ಸಭೆ ಕರೆದು ವೇಗ ಸಿಗುವಂತೆ ಮಾಡಿದ್ದಾರೆ. ಅದಕ್ಕಾಗಿ ನಾನು ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಸ್ತೆ ಅಗಲೀಕರಣ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಅದು ಶಾಶ್ವತ ಕಾಮಗಾರಿಗಳಾಗಿರುವುದರಿಂದ ಕ್ಷೇತ್ರಕ್ಕೆ ಅನುಕೂಲವಾಗಿದೆ. ಸಂಭ್ರಮದ ವೇಳೆಗಾಗುವಾಗ ಕೆಲಸ ಬಹುತೇಕ ಹಂತಕ್ಕೆ ತಲುಪುವ ವಿಶ್ವಾಸವಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.