ಕೊಕ್ಕಡ ಕೋರಿ ಜಾತ್ರೆ ಸಂಪನ್ನ

ಕೊಕ್ಕಡ : ಪೂರ್ವಶಿಷ್ಟ ಸಂಪ್ರದಾಯದಂತೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಿ.18 ರಂದು ಕೊಕ್ಕಡ ಕೋರಿ ಜಾತ್ರೆ, ಉತ್ಸವಾದಿಗಳು ನಡೆಯಿತು. ದೇವಳದಲ್ಲಿ ಉತ್ಸವಾದಿಗಳು ನಡೆದು ಕೋರಿಗದ್ದೆಗೆ ಮೆರವಣಿಗೆಯಲ್ಲಿ ದೇವರುಗಳು ಸಾಗಿ ಕಟ್ಟೆಯಲ್ಲಿ ವಿರಾಜಮಾನರಾಗಿ ಸಂಪ್ರದಾಯದಂತೆ ಜಾನುವಾರುಗಳನ್ನು ಇಳಿಸಿ ಗದ್ದೆಗೆ ಪೂಕರೆಯನ್ನು ಹಾಕುವ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಊರ ಪರವೂರ ಜನರು, ಮಹಿಳೆಯರು, ಮಕ್ಕಳಾದಿಯಾಗಿ ಬೆಳಗ್ಗಿನಿಂದಲೇ ತಲೆಯಲ್ಲಿ ಸೊಪ್ಪಿನ ಕಟ್ಟು ಹೊತ್ತುಕೊಂಡು ಗದ್ದೆಗೆ ಸುತ್ತು ಬಂದು ಈ ಕೋರಿ ಗದ್ದೆಗೆ ಸೊಪ್ಪನ್ನು ಹಾಕುವಂತಹ ಆರೋಗ್ಯ ಸಂಬಂದಿ ಹರಕೆಗಳನ್ನು ಸಾವಿರಾರು ಜನರು ಸಲ್ಲಿಸಿದರು. ಬ್ರಹ್ಮಶ್ರೀ ಎಡೆಡಮನೆ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ದೇವಳದಲ್ಲಿ ಗಣಹೋಮ, ಏಕಾದಶ ರುದ್ರ,ಮಹಾಪೂಜೆ ನಡೆದು ಗುತ್ತಿನ ಮನೆಯಿಂದ ಜಾನುವಾರುಗಳು ಮೆರವಣಿಗೆಯಲ್ಲಿ ದೇವಳಕ್ಕೆ ಕರೆತರಲಾಯಿತು. ದೇವಸ್ಥಾನದಲ್ಲಿ ದೇವರ ಒಪ್ಪಿಗೆ ಪಡೆದು ಮತ್ತೆ ಈ ಜಾನುವಾರುಗಳನ್ನು ಬ್ಯಾಂಡು ವಾಲಗ, ಕೊರಗ ಭೂತ ಗಳ ಮೆರವಣಿಗೆಯ ಸಮೆತ ಕೋರಿ ಗದ್ದೆಗೆ ಇಳಿಸಲಾಯಿತು. ಈ ಸಂದರ್ಭ ಹರಕೆಗಾಗಿ ಊರಪರವೂರಿನಿಂದ ಕರೆತಂದಿದ್ದ ಜಾನುವಾರುಗಳನ್ನು ಗದ್ದೆಯಲ್ಲಿ ಇಳಿಸಿ ಹರಕೆ ಸಲ್ಲಿಸಲಾಯಿತು.ಮಧ್ಯಾಹ್ನ ಸಾವಿರಾರು ಜನ ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ದೇವರು ಕೋರಿ ಗದ್ದೆಯ ಕಟ್ಟೆಗೆ ಸಾಗಿ ಪೂಜೆ ಸಲ್ಲಿಕೆಯಾದೊಡನೆ ನಾಗಬ್ರಹ್ಮರು ಮತ್ತು ಇನ್ನಿತರ ದೈವಗಳಸಮಕ್ಷಮ ಕೋರಿ ಗದ್ದೆಗೆ ಪೂಕರೆಯನ್ನು ಹಾಕಲಾಯಿತು. ದೇವಳದಲ್ಲಿ ಸಂಜೆ ವೇಳೆ ಉತ್ಸವಾದಿಗಳು ನಡೆದ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.ಅರ್ಚಕರಾದ ರಮಾನಂದ ಭಟ್ ಮತ್ತಿತರರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಕೊಕ್ಕಡ ಕೋರಿ ಜಾತ್ರೆಯ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತರಾವ್, ರೋಹಿತಾಕ್ಷ ಆಚಾರ್ಯ , ಶ್ರೀಕಾಂತ ಆಚಾರ್ಯ , ಸುಚಿತ್ರಾ ಕೊಲ್ಲಾಜೆ, ಸೇಸಪ್ಪ ಸಾಲಿಯಾನ್, ವಿಠಲ ಗೌಡ ತೆಂಕಬೈಲು, ಬಾಬು ಎಂ.ಕೆ., ಪದ್ಮಾ ಟಿ.ಎಂ., ಅರ್ಚಕ ರಮಾನಂದ ಭಟ್ ಮತ್ತು ಪವಿತ್ರ ಪಾಣಿ ರಾಧಾಕೃಷ್ಣ ಯಡಪ್ಪಾಡಿತ್ತಾಯ, ಉದ್ಯಮಿ ಉದ್ಯಮಿ ಪೂವಾಜೆ ಕುಶಾಲಪ್ಪ ಗೌಡ , ವಿಶ್ವನಾಥ ಕೊಲ್ಲಾಜೆ, ದೇವದಾಸ್ ಬಾಣಜಾಲು, ಮಹಾಬಲ ನಾಯ್ಕ್, ಕೃಷ್ಣಪ್ಪ ಗೌಡ, ರುಕ್ಮಯ್ಯ ಮಡಿವಾಳ, ಜನಾರ್ಧನ ಶಬರಾಡಿ, ಮತ್ತು ಊರಿನ ಗಣ್ಯರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.