ಅಡಿಕೆ ಕೊಳೆರೋಗ: ದ.ಕ ಜಿಲ್ಲೆಗೆ ರೂ.60ಕೋಟಿ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ 2018-19ನೇ ಸಾಲಿನ ಅತಿವೃಷ್ಠಿಯಿಂದ ಸುಮಾರು 33595 ಹೆಕ್ಟೇರ್ ಪ್ರದೇಶದ ಅಡಿಕೆ ಬೆಳೆಯು ಕೊಳೆರೋಗಕ್ಕೆ ತುತ್ತಾಗಿದ್ದು, ಒಟ್ಟು ರೂ.252 ಕೋಟಿ ನಷ್ಟವೆಂದು ಅಂದಾಜಿಸಲಾಗಿದೆ. ದ.ಕ ಜಿಲ್ಲೆಗೆ ಎನ್‌ಡಿಆರ್‌ಎಫ್ ನಿಯಮಾನುಸಾರ ರೂ.60 ಕೋಟಿ ಪರಿಹಾರ ಒದಗಿಸುವಂತೆ ತೋಟಗಾರಿಕಾ ಇಲಾಖೆ ಸಲ್ಲಿಸಿದ ವರದಿಯ ಅನ್ವಯ ಕೇಂದ್ರವು ಪರಿಹಾರ ಪ್ಯಾಕೇಜ್ ಪ್ರಕಟಿಸಿದೆ ಎಂದು ರಾಜ್ಯ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕ ಹರೀಶ್ ಪೂಂಜ ಅವರು ದ.ಕ ಜಿಲ್ಲೆಯಲ್ಲಿ ಕೊಳೆರೋಗದಿಂದ ಆದ ನಷ್ಟವೆಸ್ಟು, ಕೊಳೆ ರೋಗ ನಿಯಂತ್ರಣಕ್ಕೆ ಸರಕಾರ ಕೈಗೊಂಡ ಕ್ರಮಗಳೇನು, ಪರಿಹಾರ ವಿಳಂಬಕ್ಕೆ ಕಾರಣಗಳೇನು ಎಂದು ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರವನ್ನು ನೀಡಿದರು.
ದ.ಕ ಜಿಲ್ಲೆಗೆ ರೂ.60.47.54 ಲಕ್ಷ:
ಅತಿವೃಷ್ಟಿಯಿಂದ ಹಾನಿಯಾದ ಅಡಕೆ ಬೆಳೆ ಒಳಗೊಂಡಂತೆ ಎಲ್ಲಾ ತೋಟಗಾರಿಕಾ ಬೆಳೆಗಳಿಗೆ ಪರಿಹಾರಕ್ಕಾಗಿ ದ.ಕ ಜಿಲ್ಲೆಗೆ ರೂ.6047.54 ಲಕ್ಷ ಸೇರಿದಂತೆ ರಾಜ್ಯಕ್ಕೆ ರೂ.17527 ಲಕ್ಷ ರೂಗಳನ್ನು ನೀಡುವಂತೆ ಕಂದಾಯ ಇಲಾಖೆಯ ಮೂಲಕ ಕೇಂದ್ರಕ್ಕೆ ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಕೇಂದ್ರದಿಂದ ರೂ.175.27 ಕೋಟಿ ಅನುದಾನ ಬಂದಿರುತ್ತದೆ. ಬೆಳ್ತಂಗಡಿ ತಾಲೂಕಿನಲ್ಲಿ ಅತಿವೃಷ್ಠಿಯಿಂದ ಅಂದಾಜು 17102.50 ಎಕ್ರೆ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ಕೊಳೆ ರೋಗ ಬಂದಿದೆ. ಇದರ ಅಂದಾಜು ಮೌಲ್ಯ ರೂ.12.30 ಕೋಟಿಗಳು. ಕಾಳು ಮೆಣಸು ತೋಟಗಳಿಗೆ ಶೇ 33ಕ್ಕಿಂತ ಹೆಚ್ಚಿನ ಹಾನಿ ಉಂಟಾಗಿರುವುದು ವರದಿಯಾಗಿಲ್ಲ ಎಂದು ತಿಳಿಸಿದರು.
ಕೊಳೆರೋಗ ನಿಯಂತ್ರಣ ಕುರಿತು ಬೆಳೆಗಾರರಿಗೆ ಮಾಹಿತಿ ತರಬೇತಿ, ಪ್ರಾತ್ಯಕ್ಷಿಕೆ, ಮಾಧ್ಯಮ ಪ್ರಚಾರ, ಕರಪತ್ರ ಹಂಚಿಕೆ ಮಾಡಲಾಗುತ್ತಿದೆ. ಮೈಲುತುತ್ತು ಹಾಗೂ ಇತರ ಜೌಷಧಗಳ ಖರೀದಿಗೆ ಶೇ 30ರಂತೆ ಪ್ರತಿ ಹೆಕ್ಟೇರ್‌ಗೆ ರೂ.1200 ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್‌ಗಳಿಗೆ ನೀಡಲಾಗುತ್ತಿದೆ. ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟ ನಿಯಂತ್ರಣ ಯೋಜನೆಯಡಿ ಶೇ ೭೫ ರಂತೆ ಪ್ರತಿ ಹೆಕ್ಟೇರ್‌ಗೆ ಸಾಮಾನ್ಯ ವರ್ಗದ ಬೆಳೆಗಾರರಿಗೆ ರೂ.7500 ಸಹಾಯಧನವನ್ನು ನೀಡಲಾಗುತ್ತದೆ, ಶೇ 90ರಂತೆ ಪ್ರತಿ ಹೆಕ್ಟೇರ್‌ಗೆ ರೂ.9000 ಗಳ ಸಹಾಯಧನವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ರೈತರಿಗೆ 2 ಹೆಕ್ಟೇರ್‌ಗೆ ನೀಡಲಾಗುತ್ತದೆ ಎಂದು ಸಚಿವರು ಈ ಸಂದರ್ಭ ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.