HomePage_Banner_
HomePage_Banner_

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡರೆ ಮಾತ್ರ ಎಲ್ಲಾ ಗೌರವ ಪಡೆದುಕೊಳ್ಳಬಹುದು: ಉದಯ ಧರ್ಮಸ್ಥಳ

ಬೆಳ್ತಂಗಡಿ: ತುಳು ಕೇವಲ ಭಾಷೆ ಮಾತ್ರ ಅಲ್ಲ ಅದೊಂದು ಸುಂದರ ಬದುಕು ಮತ್ತು ಸಂಸ್ಕೃತಿ. ತುಳುವರೆಂದರೆ ತನ್ನತನವನ್ನು ಎಲ್ಲೂ ಬಿಡದೆ ಇನ್ನೊಬ್ಬರಿಗೆ ನೆರವಾಗುತ್ತಾ ಅವರ ಸಂಸ್ಕೃತಿ ಸಂಸ್ಕಾರಗಳನ್ನು ಗೌರವಿಸಿ ಅವರ ಮನಗೆಲ್ಲುವ ಮತ್ತು ಅಂತಹದ್ದೇ ಸುಂದರ ಬದುಕು ಕಟ್ಟಿಕೊಟ್ಟ ಅಭಿಮಾನದ ವ್ಯವಸ್ಥೆಯೇ ತುಳು. ಪುರಾತನ ಇತಿಹಾಸ, ಸುಂದರ ಲಿಪಿ ಇರುವ ಈ ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿದಲ್ಲಿ ಮಾತ್ರ ಕೇಂದ್ರದ ಮುಂದೆ ನಮ್ಮ ಹಕ್ಕನ್ನು ಪ್ರತಿಪಾದಿಸಿ ಎಲ್ಲಾ ಗೌರವಗಳನ್ನು ಪಡೆಯ ಬಹುದಾಗಿದೆ ಎಂದು ಖ್ಯಾತ ತುಳು ಸಾಹಿತಿ, ಬರಹಗಾರ ಹಾಗೂ ವಿಮರ್ಷಕ ಬೆಂಗಳೂರಿನ ಉದಯ ಧರ್ಮಸ್ಥಳ ಹೇಳಿದರು.
ತುಳುನಾಡು ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ನಗರ ಮತ್ತು ವಿವಿಧ ಘಟಕಗಳು ಹಾಗೂ ಸ್ವಯಂ ಆಸಕ್ತಿಯಿಂದ ಬೆಂಬಲ ನೀಡಿದ ಸಂಘ ಸಂಸ್ಥೆಗಳ ನೆರವಿನೊಂದಿಗೆ ಡಿ. 12 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಆಗ್ರಹಿಸಿ ನಡೆದ ಏಕದಿನ ಧರಣಿ ಸತ್ಯಾಗ್ರಹದಲ್ಲಿ ಅವರು ಪ್ರಮುಖ ಭಾಷಣಗೈದರು.
ಜನಪ್ರತಿನಿಧಿಗಳಿಗೆ ತಮ್ಮ ಜವಾಬ್ಧಾರಿ ಅರ್ಥಮಾಡಿಕೊಡುವ ಕೆಲಸ ಆಗಬೇಕು. ತುಳು ಭಾಷೆ ನಮ್ಮ ಅನ್ನದ ಭಾಷೆಯಾಗಬೇಕು. ತುಳು ಇಲ್ಲದೆ ಬದುಕು ಅನಿವಾರ್ಯ ಎಂಬ ವಾತಾವರಣ ನಿರ್ಮಾಣಮಾಡಬೇಕು. ಸರಕಾರಿ ಕಚೇರಿಗಳಲ್ಲಿ ಅನ್ಯ ಭಾಷಿಗರಿಗೆ ಉದ್ಯೋಗ ದೊರೆಯುವ ಬದಲು ನಮ್ಮವರು ಅಲ್ಲಿರಬೇಕು. ತುಳುವರೆಂದರೆ ನಾಯಕತ್ವದ ಪ್ರತೀಕ. ಅವರಿಗೆ ಕೊಟ್ಟ ಕೆಲಸವನ್ನು ಗುರಿಮುಟ್ಟಿಸುವ ಸಾಮಾರ್ಥ್ಯ, ಕೌಶಲ್ಯ ಉಳ್ಳವರು ತುಳುವರು. ತುಳು ಭಾಷೆ 8 ನೇ ಪರಿಚ್ಛೇದಕ್ಕೆ ಸೇರ್ಪಡೆಯಾದರೆ ತುಳು ಅಧ್ಯಯನ ಸಂಸ್ಥೆ ಕಟ್ಟಬಹುದು, ತುಳು ಪುಸ್ತಕ ಸಾಹಿತ್ಯಕ್ಕೆ ಕೇಂದ್ರ ಸರಕಾರದ ಅಕಾಡಮಿ ಪ್ರಶಸ್ತಿ ಸಹಿತ ಮಾನ್ಯತೆ ಪಡೆದುಕೊಳ್ಳಬಹುದು ಎಂದರು.
ಹೋರಾಟದ ನೇತೃತ್ವ ವಹಿಸಿದ್ದ ತುಳುನಾಡು ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಶೈಲೇಶ್ ಆರ್.ಜೆ ಸ್ವಾಗತಿಸಿ ಮಾತನಾಡಿ, ಭಾಷೆಯ ಉಳಿವಿಗಾಗಿ ತುಳುನಾಡು ಒಕ್ಕೂಟ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಎಂಟನೇ ಪರಿಚ್ಚೇದ ಮತ್ತು ಇತರ ವಿಚಾರವಾಗಿ ಬಹುದೊಡ್ಡ ಹೋರಾಟದ ಕಿಚ್ಚು ಹತ್ತಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಧರಣಿಗೆ ಹಲವರ ಬೆಂಬಲ:
ಧರಣಿಯಲ್ಲಿ ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆ, ಆಮಂತ್ರಣ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಅರ್ವ, ವಕೀಲರ ಸಂಘದ ಅಧ್ಯಕ್ಷ ಕ್ಷೇವಿಯರ್ ಪಾಲೇಲಿ, ಕಾರ್ಯದರ್ಶಿ ಮನೋಹರ ಕುಮಾರ್ ಇಳಂತಿಲ, ವಿವಿಧ ಘಟಕಗಳ ಅಧ್ಯಕ್ಷರುಗಳಾದ ನವೀನ್ ಗೌಡ, ಬಿ.ಎಚ್ ರಾಜು, ಹರೀಶ್ ಜಿ.ವಿ ಸವಣಾಲು, ಜನಾರ್ದನ ಬಂಗೇರ ಮೂಡಾಯಿಗುತ್ತು, ಜನಾರ್ದನ ಸುದೆಮುಗೇರು, ವಿನ್ಸೆಂಟ್ ಲೋಬೋ, ರೇಖಾ ಲೋಬೋ, ತುಳು ಸಾಹಿತಿ ಉಗ್ಗಪ್ಪ ಪೂಜಾರಿ ಬಂಟ್ವಾಳ, ಹರೀಶ್ ಆಳ್ವ ಮುಡಿಪ್ಪು, ಬಿ.ಕೆ ಧನಂಜಯ ರಾವ್, ಬದ್ರಿನಾಥ ಸಂಪಿಗೆತ್ತಾಯ, ಮುಖಿವಲ್ ಖಾನ್ ಪಿಲ್ಯ, ಅನಿಲ್ ಕುಮಾರ್ ಉಪ್ಪಿನಂಗಡಿ, ಶೇಖರ್ ಪೂಜಾರಿ ಉಪ್ಪಿನಂಗಡಿ, ಶಶಿಕಿರಣ್ ಜೈನ್, ಪ್ರಶಾಂತ್ ಎಂ, ಪ್ರವೀಣ್ ಕುಮಾರ್, ರಾಜೇಶ್ ಕುಲಾಲ್, ಲ| ರಘುರಾಮ ಗಾಂಭೀರ, ಚಂದು ಎಲ್, ವಸಂತರಾಣಿ, ಅಜಯ ಎ.ಜೆ, ದಿನೇಶ್ ಶೆಟ್ಟಿ ಲಾಲ, ಸುರೇಶ್ ಬೆಳ್ತಂಗಡಿ, ರವಿ ಬಂಗೇರ ಬಂಟ್ವಾಳ, ಅರವಿಂದ ಪಂಡಿತ್ ಮಂಗಳೂರು, ಪ್ರಸಾದ್ ಶೆಟ್ಟಿ ಏಣಿಂಜ, ಅಶೋಕ್ ಇಳಂತಿಲ ಮೊದಲಾದವರು ಮಾತನಾಡಿದರು.

ನಾನು ಶಾಸಕನಾದಾಗ ವಿಧಾನ ಸೌಧದಲ್ಲಿ ತುಳು ಭಾಷೆಯಲ್ಲೇ ಪ್ರಮಾಣವಚನ ಸ್ವೀಕರಿಸಿದವನು. ಈ ವೇಳೆ ಸ್ಪೀಕರ್ ಇದಕ್ಕೆ ಆಕ್ಷೇಪಿಸಿದರು. ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ನಾನು ಇದು ನನ್ನ ಪ್ರಾದೇಶಿಕ ತುಳು ಭಾಷೆ. ಜನರ ಭಾವನೆ ಆ ರೀತಿ ಇರುವುದರಿಂದ ನನಗೆ ಜನರ ಭಾವನೆಯೇ ಮುಖ್ಯ. ನನ್ನ ಮೇಲೆ ಯಾವ ಕ್ರಮ ಆದರೂ ಚಿಂತೆಇಲ್ಲ ಎಂದು ಹೇಳಿದ್ದೆ ಎಂದು ಧರಣಿಗೆ ಬೆಂಬಲ ನೀಡಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ತಿಳಿಸಿದರು. ವಿದೇಶ ಪ್ರವಾಸಕ್ಕೆ ಹೋಗಿದ್ದ ಸಂದರ್ಭ ಅಲ್ಲಿದ್ದ ಉನ್ನತ ಅಧಿಕಾರಿಯೊಬ್ಬರು ತುಳುವಿನಲ್ಲೇ ನಮ್ಮ ಜೊತೆ ಮಾತನಾಡಿ ಸೌಜನ್ಯತೆ ತೋರಿದ್ದೂ ಕೂಡ ತುಳುವಿಗೆ ಇರುವ ಆತ್ಮೀಯ ಶಕ್ತಿ ಎಂದು ನೆನಪಿಸಿಕೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.