ಮತ್ತೆ ಗರಿಗೆದರಿದ ಮಾಲಾಡಿ ಶಾಲಾ ಆಟದ ಮೈದಾನ ಭೂ ವಿವಾದ

ಮಾಲಾಡಿ: ಮಾಲಾಡಿ ಸರಕಾರಿ ಹಿ. ಪ್ರಾ ಶಾಲೆಯ ಕ್ರೀಡಾಂಗಣ ಜಾಗದ ವಿವಾದ ಮತ್ತೆ ಗರಿಗೆದರಿದೆ. ಡಿ. 6 ರಂದು ಶಾಲಾಭಿವೃದ್ಧಿ ಸಮಿತಿಯಿಂದ ಶಾಲೆಯ ಹೆಸರಿನಲ್ಲಿ ದಾಖಲೆ ಹೊಂದಿರುವ ಈ ಜಾಗದಲ್ಲಿ ಅಗಳು ತೋಡಿದ ಬೆನ್ನಿಗೇ ಮತ್ತೊಮ್ಮೆ ವಿವಾದ ಸ್ಪೋಟಗೊಂಡಿದೆ.
ಸದ್ರಿ ಜಾಗ ಡಿಸಿ ಮನ್ನಾ ಭೂಮಿ, ಇದು ನಮಗೆ ಸೇರಬೇಕಾದದ್ದು ಎಂದು ಡಿಎಸ್‌ಎಸ್ ಸಂಘಟನೆ ಕೂಡ ಮತ್ತೊಮ್ಮೆ ಮೈ ಕೊಡವಿ ನಿಂತಿದ್ದು, ಎಸ್‌ಡಿಎಂಸಿ ತೆರೆದಿರುವ ಅಗಳನ್ನು ಡಿ. 11 ರಂದು ಮುಚ್ಚುವ ಮೂಲಕ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ವೇಳೆ ನಡೆದ ಗೊಂದಲ, ಆಕ್ರೋಶ ವಿಕೋಪಕ್ಕೆ ತೆರಳುವ ಮುನ್ನವೇ ಸ್ಥಳಕ್ಕೆ ಧಾವಿಸಿದ ತಹಶಿಲ್ದಾರ್, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಸಮಾಜ ಕಲ್ಯಾಣ ಅಧಿಕಾರಿ ಸಹಿತ ಎಲ್ಲಾ ಅಧಿಕಾರಿಗಳು ಒಮ್ಮೆಗೆ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದು, ಇಡೀ ಸಮಸ್ಯೆಗೆ ಡಿ.31 ರೊಳಗಾಗಿ ಶಾಶ್ವತ ಪರಿಹಾರ ನೀಡಿ 2019 ಜನವರಿಯಲ್ಲಿ ಅಚ್ಚೇದಿನ್ ತರುವುದಾಗಿ
ಭರವಸೆ ನೀಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಡಿಎಸ್‌ಎಸ್ ಕಡೆಯಿಂದ ಶಾಲಾ ಆಟದ ಮೈದಾನಕ್ಕೆ ತಂತಿ ಬೇಲಿ ಹಾಕಿದಾಗ ಈ ವಿವಾದ ಹುಟ್ಟಿಕೊಂಡಿತ್ತು. ಆ ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಬಳಿಕ ಬೇಲಿ ತೆರವುಗೊಳಿಸಿ ಸದ್ರಿ ವಿಚಾರ ತಾ.ಪಂ ಸಾಮಾನ್ಯ ಸಭೆ ಸೇರಿದಂತೆ ರಾಜಕೀಯ ವೇದಿಕೆಗಳಲ್ಲೂ ಪ್ರಸ್ತಾಪವಾಗಿತ್ತು.
ಶಾಲೆಯ ಜಾಗದ ವಿಚಾರದ ಬಗ್ಗೆ ಶಾಲೆ ಕಡೆಯವರು ಏನೆನ್ನುತ್ತಾರೆ ?
ಜಾಗದ ಗೊಂದಲ ಆರಂಭವಾದ ಬೆನ್ನಿಗೇ ಶಾಲಾ ಸಮಿತಿ ಕಡೆಯಿಂದ ಮಾಹಿತಿ ಹಕ್ಕು ಅಧಿನಿಯಮದಡಿ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, 1925 ರಲ್ಲಿ ಶಾಲೆ ಪ್ರಾರಂಭವಾದರೆ1930ರಲ್ಲಿ ಈ ಜಾಗ ಶಾಲಾ ಹೆಸರಿಗೆ ದಾಖಲೀಕರಣಗೊಂಡು ಪಹಣಿಯಲ್ಲಿ ದಾಖಲಾಗಿದೆ. ಅಡೆಂಗಲ್ಲು ಸಹಿತ ಎಲ್ಲಾ ದಾಖಲೆಗಳು ಶಾಲಾ ಆಡಳಿತ ಮಂಡಳಿ ಕಡೆಯವರಲ್ಲಿದೆ. ಶಾಲೆಗೆ ಒಟ್ಟು ಸರ್ವೆ ನಂಬ್ರ 207/1 ಬಿ ಯಲ್ಲಿ1.50ಎಕ್ರೆ, ಇನ್ನೂ 3 ಸರ್ವೆ ನಂಬರ್‌ಗಳಲ್ಲಿ 0.20ಎಕ್ರೆ, 0.54 ಎಕ್ರೆ ಮತ್ತು 0.10 ಎಕ್ರೆ ಜಾಗಗಳು ಇವೆ. ಇದರಲ್ಲಿ ದಾನಶಾಸನದಲ್ಲಿ ಬಂದಿರುವ ಜಾಗವೂ ಒಳಗೊಂಡಿದೆ. ಇದೀಗ ವಿವಾದಕ್ಕೆ ಕಾರಣವಾಗಿರುವ ಜಾಗ 1.50 ಎಕ್ರೆಗೆ ಸಂಬಂಧಿಸಿದ್ದು, ಈ ಜಾಗ ಹಿಂದಿನಿಂ ದಲೂ ಆಟದ ಮೈದಾನವಾಗಿ ಉಪಯೋಗವಾಗುತ್ತಿತ್ತು. ಇದಕ್ಕೆ ಆವರಣಗೋಡೆ ಇಲ್ಲ.
ಇದೇ ಕಾರಣದಿಂದ ಈ ಜಾಗ ಈಗ ಬಹುತೇಕ ಭಾಗ ಅತಿಕ್ರಮಣಕ್ಕೊಳಗಾಗಿ 75 ರಿಂದ 80ಸೆಂಟ್ಸ್ ಜಾಗದಷ್ಟು ಮಾತ್ರ ಉಳಿದುಕೊಂಡಿದೆ. ಇದನ್ನು ಈಗಲಾದರೂ ರಕ್ಷಿಸಿಕೊಳ್ಳದಿದ್ದರೆ ಎಲ್ಲವೂ ಅನ್ಯರ ಪಾಲಾಗಲಿದೆ ಎಂಬ ಕಾರಣಕ್ಕೆ ಈಗಿನ ಎಸ್‌ಡಿಎಂಸಿ ಸಮಿತಿ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಮಂಡಳಿ ತೀರ್ಮಾನಕ್ಕೆ ಬಂದು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೆಜ್ಜೆ ಇಡಲು ತೀರ್ಮಾನಿಸಿದೆ.
ಡಿಸಿ ಮನ್ನಾ ಭೂಮಿಗೆ ಹೋರಾಟದ ಹಾದಿ ಹಿಡಿದಿರುವ ಡಿಎಸ್‌ಎಸ್ ಕಡೆಯವರು ಏನೆನ್ನುತ್ತಾರೆ?
ಮಾಲಾಡಿ ಗ್ರಾಮದಲ್ಲಿ 49 ಎಕ್ರೆ ಡಿಸಿ ಮನ್ನಾ ಭೂಮಿ ಇದೆ. ವಿವಾದಿತ ಜಾಗದ ಸುತ್ತೆಲ್ಲಾ ಡಿಸಿ ಮನ್ನಾ ಭೂಮಿ ಇರುವಾಗ ಮಧ್ಯದಲ್ಲಿರುವ ಜಾಗ ಆಟದ ಮೈದಾನವಾಗಲು ಹೇಗೆ ಸಾಧ್ಯ. ಆದುದರಿಂದ ಕಂದಾಯ ಇಲಾಖೆ ಗ್ರಾಮದಲ್ಲಿರುವ ಡಿಸಿ ಮನ್ನಾ ಭೂಮಿ ಎಲ್ಲಿದೆ ಎಂದು ತೋರಿಸಿಕೊಡಬೇಕು. ಒಂದು ವೇಳೆ ಈ ಜಾಗ ಕೂಡ ಡಿಸಿ ಮನ್ನಾ ಭೂಮಿಯೇ ಆಗಿದ್ದರೆ ಅದನ್ನು ಆಟದ ಮೈದಾನವಾಗಿಯೇ ಶಾಲೆಗೆ ಬಿಟ್ಟುಕೊಡುತ್ತೇವೆ. ಆದರೆ ಇಷ್ಟು ವರ್ಷ ಹೇಗೆ ಈ ಜಾಗ ಸಾರ್ವಜನಿಕ ಉಪಯೋಗಕ್ಕೆ ಶಾಲೆ ಬಳಿ ಇತ್ತೋ ಅದೇ ರೀತಿ ಮುಕ್ತವಾಗಿರಬೇಕು. ಹಿಂದೊಮ್ಮೆ ವಿವಾದ ಆದಾಗ ಅಗಳು ಮುಚ್ಚಲು ಸ್ವತಃ ಪುತ್ತೂರು ಎ.ಸಿ ಯವರು ಕ್ರಮ ಕೈಗೊಂಡಿದ್ದು, ಇದೀಗ ಏಕಾಏಕಿ ಶಾಲೆಯ ಕಡೆಯವರು ಭಾರೀ ಆಳದ ಅಗಳು ತೋಡಿದ್ದು, ಇದು ಎಸಿ ತೀರ್ಮಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಪಾದಿಸುತ್ತಾರೆ.
ಡಿ. 11 ರಂದು ಏನು ನಡೆಯಿತು?
ಎಸ್‌ಡಿಎಂಸಿ ಕಡೆಯಿಂದ ಪೊಲೀಸ್ ಸಂರಕ್ಷಣೆಯೊಂದಿಗೆ ತಹಶಿಲ್ದಾರರ ನಿರಾಕ್ಷೇಪಣೆ ಪತ್ರದ ಆಧಾರದಲ್ಲಿ ಡಿ.6 ರಂದು ಶಾಲೆಯ ಆಟದ ಮೈದಾನದ ಸುತ್ತ ಜೆಸಿಬಿ ಮೂಲಕ ಅಗಳು ತೋಡುವ ಕಾರ್ಯ ಮಾಡಲಾಗಿತ್ತು.
ಡಿ.11 ರಂದು ಡಿಎಸ್‌ಎಸ್ ಕಡೆಯಿಂದ ಸೇರಿದ ಕಾರ್ಯಕರ್ತರು, ಈ ಜಾಗ ಡಿಸಿ ಮನ್ನಾ ಭೂಮಿ ಎಂದು ಪ್ರತಿವಾದಿಸಿ ತೋಡಲಾಗಿದ್ದ ಅಗಳನ್ನು ತಮ್ಮ ಕಾರ್ಯಕರ್ತರ ಮೂಲಕ ಮುಚ್ಚುವ ಕಾರ್ಯ ನಡೆಸಿದರು.
ಈ ವೇಳೆ ಎಸ್‌ಡಿಎಂಸಿ ಕಡೆಯಿಂದ ತಡೆಯುವ ಪ್ರಯತ್ನ ಮಾಡಿದಾಗ ಪರಸ್ಪರರ ನಡುವೆ ಘರ್ಷಣೆಗೆ ಹೇತುವಾಯಿತು. ಈ ವೇಳೆ ವಿವಾದ ಉಲ್ಬಣಿಸಿ ಸ್ಥಳಕ್ಕೆ ತಹಶಿಲ್ದಾರ್ ಮದನ್‌ಮೋಹನ್, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಸಮಾಜ ಕಲ್ಯಾಣಾಧಿಕಾರಿ ಎಚ್.ಎಮ್ ಪಾಟೀಲ್, ಪುಂಜಾಲಕಟ್ಟೆ ಸಬ್‌ಇನ್ಸ್ ಪೆಕ್ಟರ್ ಸೌಮ್ಯಾ, ಕಂದಾಯ ನಿರೀಕ್ಷಕ ರವಿ ಕುಮಾರ್, ಗ್ರಾಮ ಸಹಾಯಕ ಗುಣಕರ, ಇವರೆಲ್ಲಾ ಧಾವಿಸಿ ಬಂದರು.
ಶಾಲೆಯ ಕಡೆಯಿಂದ ಎಸ್‌ಡಿಎಂಸಿ ಅಧ್ಯಕ್ಷ ಸೋಮಯ್ಯ, ಮಾಜಿ ಶಾಸಕ ಪ್ರಭಾಕರ ಬಂಗೇರ, ತಾ.ಪಂ ಸದಸ್ಯ ಜೋಯೆಲ್ ಮೆಂಡೋನ್ಸಾ, ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪದ್ಮನಾಭ ಶೆಟ್ಟಿ ಅರ್ಕಜೆ, ಸಹಕಾರಿ ಸಂಘದ ಅಧ್ಯಕ್ಷ ಅರವಿಂದ ಜೈನ್, ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಮುಖರಾದ ವಿಜಯ ಸಾಲಿಯಾನ್, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಯರಾಜ್ ಜೈನ್ ಮೊದಲಾದವರು ಒಟ್ಟು ಸೇರಿದ್ದರು.
ಡಿಎಸ್‌ಎಸ್ ಕಡೆಯಿಂದ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ಡಿಎಸ್‌ಎಸ್ ತಾ| ಸಂಚಾಲಕ ನೇಮಿರಾಜ್, ಮಾಜಿ ಸಂಚಾಲಕ ವೆಂಕಣ್ಣ ಕೊಯ್ಯೂರು, ಮೈಸೂರು ವಿಭಾಗೀಯ ಸಂಚಾಲಕ ಚಂದು ಎಲ್, ಪ್ರಮುಖರಾದ ಬಿ.ಕೆ ವಸಂತ್, ರಮೇಶ್, ಬಾಬಿ ಎಂ, ಜೆ.ಎಮ್ ಶಂಕರ್, ಉಮೇಶ್, ಮೊದಲಾದವರು ಒಟ್ಟು ಸೇರಿದ್ದರು.  ಶೇಖರ್ ಕುಕ್ಕೇಡಿ, ಡಿಎಸ್‌ಎಸ್ ತಾ| ಸಂಚಾಲಕ ನೇಮಿರಾಜ್, ಮಾಜಿ ಸಂಚಾಲಕ ವೆಂಕಣ್ಣ ಕೊಯ್ಯೂರು, ಮೈಸೂರು ವಿಭಾಗೀಯ ಸಂಚಾಲಕ ಚಂದು ಎಲ್, ಪ್ರಮುಖರಾದ ಬಿ.ಕೆ ವಸಂತ್, ರಮೇಶ್, ಬಾಬಿ ಎಂ, ಜೆ.ಎಮ್ ಶಂಕರ್, ಉಮೇಶ್, ಮೊದಲಾದವರು ಒಟ್ಟು ಸೇರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.