ಧರ್ಮಸ್ಥಳದಲ್ಲಿ ದೀಪೋತ್ಸವ: 86ನೇ ಸರ್ವಧರ್ಮ ಸಮ್ಮೇಳನ

ಧರ್ಮಸ್ಥಳ: ದಾನವೆಂಬುದು ಅತ್ಯಂತ ಮಹತ್ವದ ವಿಚಾರ. ಅದರ ಬಗ್ಗೆ ತಿಳಿದುಕೊಂಡು ದಾನವನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳಬೇಕು ಎಂದು ಗುಜುರಾತ್ ದ್ವಾರಕ ಸೂರ್ಯಪೀಠದ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 86 ನೇ ಸರ್ವಧರ್ಮ ಸಮ್ಮೇಳವನ್ನು ಉದ್ಘಾಟಿಸಿ ಆಶೀವರ್ಚನ ನೀಡಿದರು.
ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯೂ ಎಲ್ಲಾ ಮತಧರ್ಮಗಳನ್ನು ಸ್ವೀಕರಿಸಿದ್ದಾನೆ ಎಂಬುದು ಇಲ್ಲಿನ ಕಾರ್ಯಚಟುವಟಿಕೆಗಳನ್ನು ಅವಲೋಕಿಸಿದಾಗ ವೇದ್ಯವಾಗುತ್ತದೆ. ದಾನ ಪರಂಪರೆಯಿಂದಾಗಿಯೆ ಧರ್ಮಸ್ಥಳದ ಸಾಮರ್ಥ್ಯ ಅಧಿಕವಾಗಿದೆ ಎಂದರು. ಮನುಷ್ಯ ಜೀವನ ಭಗವಂತನ ಕೃಪೆಯಿಂದ ನಿರ್ಮಾಣವಾಗಿದೆ. ಭಗವಂತ ನಮಗೆ ಶರೀರವನ್ನು ದಾನ ಮಾಡಿದ್ದಾನೆ. ಹೀಗಾಗಿ ಈ ದಾನ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಆಧ್ಯಾತ್ಮ ಮಾರ್ಗದರ್ಶಕ ಶ್ರೀ ಎಂ (ಮಮ್ತಾಜ್ ಅಲಿ) ಅವರು ನಮ್ಮ ದೇಶದ ವಿಶಾಲವಾದ ಆಧ್ಯಾತ್ಮಿಕ ಪರಂಪರೆಯಲ್ಲಿ ನಾವು ತಿಳಿದುಕೊಂಡಿರುವುದು ಸ್ವಲ್ಪ ಮಾತ್ರ ಎಂದರು. ಇದು ಕುರುಡರು ಆನೆಯನ್ನು ವರ್ಣಿಸಿದಂತಾಗಿದೆ. ನಾವು ಎಲ್ಲಾ ಧರ್ಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಹಾಗೆಯೇ ಸರ್ವಧರ್ಮವನ್ನು ಗೌರವಿಸಬೇಕು ಎಂಬುದನ್ನು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅವರು ಎಲ್ಲಾ ಧರ್ಮಗಳಲ್ಲಿರುವ ಸೂಕ್ತ ತತ್ವಗಳನ್ನು ಆಯ್ದು ಅದನ್ನು ಪ್ರೀತಿಸಿ ಅದರಿಂದ ಮಾರ್ಗದರ್ಶನ ಪಡೆಯಬೇಕು ಎಂದರು. ಆಗ ಮಾತ್ರ ಸಮಗ್ರ ವಿಶ್ವದ ಉದ್ಧಾರವಾಗುತ್ತದೆ. ಧರ್ಮದ ಮೂಲ ಉದ್ದೇಶವೇ ಸಮನ್ವಯತೆಯಾಗಿದೆ. ಹಾಗಾಗಿ ವಿಶ್ವದೆಲ್ಲೆಡೆಯಿಂದ ಒಳ್ಳೆಯ ವಿಚಾರಗಳು ನಮ್ಮಲ್ಲಿಗೆ ಹರಿದು ಬರಲಿ. ಧಾರ್ಮಿಕ ವಿಚಾರಗಳು ದುರುಪಯೋಗವಾಗುತ್ತಿರುವ ಈಗಿನ ದಿನಗಳಲ್ಲಿ ಇಂತಹ ಸಮ್ಮೇಳನಗಳು ಅಗತ್ಯ ಎಂದರು.
ಸಮ್ಮೇಳನದಲ್ಲಿ ಗಾಂಧೀಜಿ ಅವರ ದೃಷ್ಟಿಯಲ್ಲಿ ಧಾರ್ಮಿಕ ಸಮನ್ವಯತೆಯ ಬಗ್ಗೆ ಮಾಜಿ ಶಾಸಕ ಜೆ. ಆರ್ ಲೋಬೋ ಉಪನ್ಯಾಸ ಮಂಡಿಸಿದರು. ಸೂಫೀ ಸಿದ್ಧಾಂತ ಮತ್ತು ಭಾವೈಕ್ಯತೆಯ ಬಗ್ಗೆ ಶಫೀ ಸಂತ ಪದ್ಮಶ್ರೀ ಇಬ್ರಾಹಿಂ ಸುತಾರ ,ಜೈನ ಧರ್ಮದಲ್ಲಿ ಸಮನ್ವಯತೆ ಎಂಬ ವಿಷಯದ ಬಗ್ಗೆ ಖ್ಯಾತ ಚಿತ್ರನಟ ಡಾ. ಶ್ರೀಧರ್ ಅವರು ಉಪನ್ಯಾಸ ಮಂಡಿಸಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ. ಸುರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರೊ. ಎಸ್ ಪ್ರಭಾಕರ್ ಉಪಸ್ಥಿತರಿದ್ದರು, ಡಾ. ಬಿ ಯಶೋವರ್ಮ ಹಾಗೂ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಡಾ. ಬಿ.ಪಿ. ಸಂಪತ್ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಎ. ಪಿ. ಎಂ .ಸಿ ಅಧ್ಯಕ್ಷ ಕೇಶವಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.