ಮಕ್ಕಳಿಗೆ ಸ್ವಾವಲಂಬಿ ಜೀವನದ ಪಾಠ ಕಲಿಸಬೇಕು: ಡಾ. ವಿಜಯ ಸಂಕೇಶ್ವರ

ಉಜಿರೆ: ಸಣ್ಣ ಕೆಲಸವನ್ನೂ ದೇವರ ಪೂಜೆಯಂತೆ ಶ್ರದ್ಧೆಯಿಂದ ಮಾಡುವಂತೆ ಮಕ್ಕಳಿಗೆ ಪ್ರೇರಣೆ ನೀಡಿ ಸ್ವಾವಲಂಬಿ ಜೀವನದ ಪಾಠ ಕಲಿಸಬೇಕು ಎಂದು ಹುಬ್ಬಳ್ಳಿಯ ವಿ.ಆರ್.ಎಲ್. ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ. ವಿಜಯಸಂಕೇಶ್ವರ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ 86 ನೇ ಅಧಿವೇಶನವನ್ನು ಡಿ.6 ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನಡೆದು ಬಂದ ದಾರಿ, ಜೀವನ ಶೈಲಿ, ಸಾಧನೆ ಮತ್ತು ಸೇವೆ ಆದರ್ಶ ಹಾಗೂ ಅನುಕರಣೀಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಸಾಲ ನೀಡಿ ,ಯೋಜನೆಯ ಸದುಪಯೋಗ ಪಡೆದು ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸುತ್ತಿರುವ ಬಗ್ಗೆ ಅವರು ಶ್ಲಾಘಿಸಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮ, ವಿಜ್ಞಾನ ಮತ್ತು ಸಾಹಿತ್ಯದ ನಡುವೆ ಆತ್ಮೀಯ ಸಂಬಂಧವಿದೆ. ಮಾನವ ಜೀವನಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಭಾರತೀಯ ಸಾಹಿತ್ಯದಲ್ಲಿ ಧರ್ಮ ಮತ್ತು ತ್ಯಾಗಕ್ಕೆ ವಿಶೇಷ ಮಹತ್ವ ಕೊಡಲಾಗಿದೆ.
ರಾಮಾಯಣ ಹಾಗೂ ಮಹಾ ಭಾರತದ ಸಾಹಿತ್ಯದ ಹಿನ್ನೆಲೆ ಇರುವ ಕಥಾ ವಸ್ತುಗಳು ಸಾಹಿತ್ಯ ರಚನೆಗೆ ಪ್ರೇರಣೆ ನೀಡಿವೆ. ಇದೇ ರೀತಿ ಧರ್ಮ ಕೂಡಾ ಸಾಹಿತ್ಯವನ್ನು ತನ್ನ ಪ್ರಸಾರದ ಮಾಧ್ಯಮವಾಗಿ ಬಳಸಿಕೊಂಡಿತ್ತು. ಸಾಹಿತ್ಯದ ಮೂಲಕ ಧರ್ಮವು ಜನರ ಮನೆ-ಮನಗಳನ್ನು ಪ್ರವೇಶಿಸಲು ಸಾಧ್ಯವಾಯಿತು. ಧರ್ಮದ ತತ್ತ್ವ, ಸಿದ್ದಾಂತಗಳನ್ನು ಕವಿಗಳು, ಸಾಹಿತಿಗಳು, ದಾಸರು, ವಚನಕಾರರು ಸರಳವಾಗಿ ಜನರಿಗೆ ತಲುಪಿಸಿದರು.
ವಿಜ್ಞಾನ ಕೂಡ ಜನರಲ್ಲಿ ವಿವೇಕ, ಕುತೂಹಲ, ಜಿಜ್ಞಾಸೆಗಳನ್ನು ಜಾಗೃತಗೊಳಿಸುತ್ತದೆ. ಮನುಷ್ಯ ಸುಶಿಕ್ಷಿತನಾದಂತೆ ಅವನಲ್ಲಿ ವಿವೇಕ ಪ್ರಜ್ಞೆ ಜಾಗೃತವಾಗಬೇಕು. ಪರಿಣಾಮವಾಗಿ ಮೂಢನಂಬಿಕೆ, ಅಂಧ ವಿಶ್ವಾಸ ದೂರವಾಗಬೇಕು. ಜ್ಞಾನವೂ ಬೆಳೆಯಬೇಕು. ಸಾಹಿತ್ಯವೂ ಬೆಳೆಯಬೇಕು ಎಂದು ಹೆಗ್ಗಡೆಯವರು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಖ್ಯಾತ ವಿಮರ್ಶಕ ಸಾಗರದ ಪ್ರೊ. ಟಿ.ಪಿ. ಅಶೋಕ ಮಾತನಾಡಿ, ಜೀವನಾನುಭವವೇ ಸಾಹಿತ್ಯದ ಮೂಲ ದ್ರವ್ಯವಾಗಿದೆ. ಸಾಹಿತ್ಯಾನುಭವವನ್ನು ಎರವಲು ಪಡೆಯಲು ಸಾಧ್ಯವಿಲ್ಲ. ಪ್ರಜ್ಞೆ ಹಾಗೂ ಭಾವ ವಿಕಾಸದೊಂದಿಗೆ ಎಲ್ಲರಿಗೂ ಸುರಕ್ಷಿತ ಅಡಗುತಾಣ ಸಾಹಿತ್ಯವಾಗಿದೆ. ಸಾಹಿತ್ಯ ಇಂದು ಹೆಚ್ಚು ಪ್ರಸ್ತುತವಾಗಿದ್ದು ನಮ್ಮ ಅಂತರಂಗದ ಶುದ್ಧತೆ ಹಾಗೂ ನೈತಿಕತೆ ಕಾಪಾಡಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಕಥೆ ಹೇಳುವುದು ಮತ್ತು ಕೇಳುವುದು ಪುಣ್ಯದ ಕೆಲಸವಾಗಿದೆ ಇದರಿಂದ ನಮ್ಮ ಭಾವ ವಿಕಾಸವಾಗುತ್ತದೆ. ನಮ್ಮ ಬದುಕಿನಲ್ಲಿ ಅಮರತ್ವ ಇಲ್ಲ. ಸಾವು ಮತ್ತು ವೃದ್ಧಾಪ್ಯ ಅನಿವಾರ್ಯ. ಇವುಗಳನ್ನು ಧೈರ್ಯದಿಂದ ಎದುರಿಸಲು ಸಾಹಿತ್ಯ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
“ಕುವೆಂಪು ದರ್ಶನ”ದ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ, ಕುವೆಂಪು ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಠಿಕೋನದಿಂದ ಸಾಹಿತ್ಯವನ್ನು ಆಶ್ರುಸಿದರು. ಕುವೆಂಪು ದೊಡ್ಡ ಆರಾಧಕರು. ಕಲಾಸ್ಟೃಗೆ ಕೊರತೆ ಆಗದಂತೆ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದರು. ಶಾಸ್ತ್ರ, ಸಂಪ್ರದಾಯ ಪರಂಪರೆಯ ಒಳಿತು-ಕೆಡುಕನ್ನು ವಿಮರ್ಶಿಸಿ ನಮ್ಮ ವಿವೇಕದಿಂದ ಸ್ವೀಕರಿಸುವ ಅಥವಾ ತಿರಸ್ಕರಿಸುವ ಮನೊಭಾವ ಹೊಂದಿರಬೇಕು. ನ್ಯಾಯ ಒದಗಿಸುವಲ್ಲಿ ಹೆಣ್ಣು ಮತ್ತು ಗಂಡಿಗೆ ಒಂದೇ ರೀತಿಯ ಮಾನದಂಡವಿರಬೇಕು ಎಂದು ಕುವೆಂಪು ಪ್ರತಿಪಾದಿಸಿದ್ದಾರೆ.
ಎಂದು ಅವರು ಹೇಳಿದರು.
“ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ”ದ ಬಗ್ಗೆ ಮಾತನಾಡಿದ ಚಲನಚಿತ್ರ ನಿರ್ದೇಶಕ ಬೆಂಗಳೂರಿನ ಅಬ್ದುಲ್ ರೆಹಮಾನ್ ಪಾಷ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಸುಧಾ ಮತ್ತು ಪ್ರಜಾವಾಣಿ ಪತ್ರಿಕೆಗಳು ವಿಜ್ಞಾನ ಸಾಹಿತ್ಯ ಪ್ರಸಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಕ್ಷರ, ಸಾಕ್ಷರತೆಗಿಂತ ವಿಜ್ಞಾನ ಸಾಕ್ಷರತೆ, ಪ್ರೌಢಿಮೆ ಮತ್ತು ಮನೊಭಾವ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಟಿ.ವಿ. ವಾಹಿನಿಗಳು ಮೌಢ್ಯ್ಯವನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಅವರು ಖೇದ ವ್ಯಕ್ತಪಡಿಸಿ ಇದು ಅತ್ಯಂತ ಅಪಾಯಕಾರಿಯಾಗಿದೆ. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸಿಕೊಳ್ಳುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ಸರ್ಕಾರವೇ ಮೌಢ್ಯದಲ್ಲಿ ಮುಳುಗಿದೆ ಎಂದು ಅವರು ವಿಷಾದಿಸಿದರು.
ಪುತ್ತೂರಿನ ಲೇಖಕಿ ಕವಿತಾ ಅಡೂರ್, “ಕಗ್ಗದಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯದ ಬಗ್ಗೆ ಮಾತನಾಡಿ, ಪರಿವರ್ತನೆ ಜಗದ ನಿಯಮ. ಬರವಣಿಗೆ ನಮ್ಮ ಅರಿವನ್ನು ಒರೆಗೆ ಹಚ್ಚುತ್ತದೆ. ವ್ಯಕ್ತಿತ್ವ ಪರಿಷ್ಕರಣೆಗೆ ಸಹಕಾರಿಯಾಗಿದೆ. ಕಗ್ಗ ಸದಾ ತನ್ನ ಮೌಲ್ಯ ಮತ್ತು ಮಾನವೀಯತೆಯನ್ನು ಉಳಿಸಿಕೊಂಡಿದೆ. ಬದುಕಿನಲ್ಲಿ ಅಭಾವ ವೈರಾಗ್ಯ ಸಲ್ಲದು. ನಾವು ಜೀವನ್ಮುಖಿಯಾಗಿ ಬಾಳಿ ಬದುಕುವಂತೆ ಜೀವನೋತ್ಸಾಹವನ್ನು ಕವಿತೆಗಳು ಮೂಡಿಸುತ್ತವೆ ಎಂದು ಅವರು ಹೇಳಿದರು.
ಉಜಿರೆ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ವಿನಯಕುಮಾರ್ ಧನ್ಯವಾದವಿತ್ತರು. ಕಾರ್ಕಳದ ಪ್ರೊ. ಎಂ. ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.