ನಿವೃತ ಶಿಕ್ಷಕ ಯು. ಪಕೀರಬ್ಬ ಮಾಸ್ಟರ್ ಉಜಿರೆ ನಿಧನ

ಉಜಿರೆ: ಇಲ್ಲಿನ ಹಳೆಪೇಟೆ ಮಸೀದಿ ಬಳಿ ನಿವಾಸಿ ನಿವೃತ ಶಿಕ್ಷಕ ಯು. ಪಕೀರಬ್ಬ ಮಾಸ್ಟರ್ (83ವ.)ರವರು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾದರು.
ವಯೋಸಹಜ ಅನಾರೋಗ್ಯಗಳಿಗೆ ತುತ್ತಾಗಿದ್ದ ಅವರಿಗೆ ನ.25 ರಂದು  ರಾತ್ರಿ ಇದ್ದಕ್ಕಿದ್ದಂತೆ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಅಸ್ವಸ್ತತೆಗೊಳಗಾದರು. ಈ ವೇಳೆ ಅವರಿಗೆ ಚಿಕಿತ್ಸೆ ಕೊಡಿಸುವ ಎಲ್ಲಾ ಪ್ರಯತ್ನ ನಡೆಯಿತಾದರೂ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.
ಶಿಕ್ಷಣದಲ್ಲಿ ಮುಸ್ಲಿಂ ಸಮಾಜ ಹಿಂದಿಳಿದಿದ್ದ ಆ ಕಾಲದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದ ಅವರು ಸರಕಾರಿ ಶಾಲಾ ಶಿಕ್ಷಕರಾಗಿ ಪಂಜ, ಸುಳ್ಯ, ದೊಂಪದಪಳಿಕೆ, ಮಂಜೊಟ್ಟಿ, ಮುಂಡಾಜೆ, ಬೆಳ್ತಂಗಡಿ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಕಲ್ಮಂಜ ಶಾಲೆಯಲ್ಲಿ ಕರ್ತವ್ಯಗೈದು ನಿವೃತರಾಗಿದ್ದರು. ಶಿಸ್ತಿನ ಸಿಪಾಯಿಯಂತಿದ್ದ ಅವರು ಮಕ್ಕಳ ಏಳಿಗೆಗಾಗಿ ಶಿಕ್ಷೆ ನೀಡುತ್ತಿದ್ದುದೂ ಮಾತ್ರವಲ್ಲದೆ ಅವರನ್ನು ಅಷ್ಟೇ ಪ್ರೀತಿಸಿ ನೈತಿನ ಮೌಲ್ಯ ಜಾಗೃತಿಗೊಳಿಸುವಲ್ಲಿ ಕಾರಣರಾಗಿದ್ದರು. ಸಾಕ್ಷರತಾ ಆಂದೋಲನ ಜಾರಿ ಸಂದರ್ಭ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದರು. ಉಜಿರೆ ಸಹಕಾರಿ ಸಂಘ ಮತ್ತು ಆಗಿನ ಸರಕಾರಿ ನೌಕರರ ಸಹಕಾರಿ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಹಿತ್ಯಾಸಕ್ತರೂ ಆಗಿದ್ದ ಅವರು ಬರವಣಿಗೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಅವರ ಈ ಎಲ್ಲಾ ಶೈಕ್ಷಣಿಕ ಸೇವೆ ಮತ್ತು ಸಾಮಾಜಿಕ ಕಳಕಳಿಯನ್ನು ಗುರುತಿಸಿ ಸಂಜಯ ಗಾಂಧಿ ಪ್ರತಿಷ್ಟಾನದಿಂದ ಅವರಿಗೆ ಪುರಸ್ಕಾರ ಲಭಿಸಿದ್ದೂ ಮಾತ್ರವಲ್ಲದೆ ಡಾ. ಎಂ ವೀರಪ್ಪ ಮೊಲಿ ಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕೈಯ್ಯಿಂದ ರಾಜ್ಯಮಟ್ಟದಲ್ಲಿ ಸನ್ಮಾನವೂ ದೊರೆತಿತ್ತು. ಇನ್ನೂ ಅನೇಕ ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಗೌರವಿಸಿದ್ದರು.
ಇದೀಗ ಮೃತರು ಪತ್ನಿ ಮೈಮುನಾ ಬೇಗಂ, ಪುತ್ರ ನ್ಯಾಯವಾದಿ ಹಾಗೂ ನೋಟರಿ ಪಬ್ಲಿಕ್ ಆಗಿರುವ ಮುಹಮ್ಮದ್ ಹನೀಫ್, ವಿದೇಶದಲ್ಲಿರುವ ಅಬ್ದುಲ್ ಲತೀಫ್ ಬೆಳ್ತಂಗಡಿ, ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರಾಗಿರುವ (ಎಪಿಪಿ) ಮುಹಮ್ಮದ್ ಶೌಕತ್ತ್ ಅಲಿ, ಉಜಿರೆ ಎಸ್ಸೆಸ್ಸೆಫ್ ಸೆಕ್ಟರ್ ಅಧ್ಯಕ್ಷರಾಗಿರುವ ಮುಹಮ್ಮದ್ ಅಶ್ರಫ್, ಪುತ್ರಿಯರಾದ ಕಳಿಯ ಗ್ರಾ.ಪಂ ಮಾಜಿ ಅಧ್ಯಕ್ಷೆ ಝೈತೂನ್, ಶಂಶಾದ್ ಮುಂಡಾಜೆ, ಶಮೀನಾ ಬಾನು ಸಹಿತ ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಅವರ ಶಿಷ್ಯವೃಂದದವರು, ಜಮಾಅತ್ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.