ಪೆರಾಡಿ ಬಾವುಟ ವಿವಾದ: ಶಾಸಕ ಪೂಂಜ ಭೇಟಿ

ಪೆರಾಡಿ: ಪೆರಾಡಿ ಕಟ್ಟೆಯೊಂದರಲ್ಲಿದ್ದ ಮಾವಿನಮರಕ್ಕೆ ಹಾಕಿದ್ದ ಭಗವಧ್ವಜವನ್ನು ಪೊಲೀಸರು ಕಿತ್ತುಹಾಕಿದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಮತ್ತೆ ಭಗವಧ್ವಜ ಸ್ಥಾಪಿಸಿ, ಇದನ್ನು ತೆರವುಗೊಳಿಸಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪೆರಾಡಿಯ ಜಂಕ್ಷನ್‌ನಲ್ಲಿ ಮಾವಿನಮರ ಇರುವ ಕಟ್ಟೆಯೊಂದಿದ್ದು, ಕೆಲವು ವರ್ಷಗಳಿಂದೀಚೆಗೆ ಮರದ ತುದಿಗೆ ಭಗವಧ್ವಜವನ್ನು ಹಾರಿಸುವುದನ್ನು ರೂಢಿಸಿಕೊಂಡು ಬಂದಿದ್ದರು. ಆದರೆ ನ.೨೯ ರಂದು ಪೊಲೀಸರು ಭಗವಧ್ವಜವನ್ನು ತೆರವುಗೊಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಭಗವಧ್ವಜ ಸನಿಹ ಹಸಿರು ಬಾವುಟವನ್ನು ಕಟ್ಟಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಹಸಿರು ಬಾವುಟವನ್ನು ಹಿಂದೂಗಳು ತೆರವುಗೊಳಿಸಿದ್ದರು. ಈ ಸಂದರ್ಭ ಎರಡೂ ಸಮುದಾಯದ ಮಧ್ಯೆ ಗೊಂದಲಉಂಟಾಗಿದ್ದು, ಬಳಿಕ ಬೇರೊಂದುಕಡೆ ಹಸಿರು ಬಾವುಟ ಹಾರಿಸುವಂತೆ ಮುಸ್ಲಿಂ ಸಮುದಾಯದವರಿಗೆ ಸಲಹೆ ನೀಡಲಾಗಿತ್ತು. ಬೇರೆ ಕಡೆ ಹಾರಿಸಿದ ಧ್ವಜ ಮನೆಯೊಂದಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ಬಂದಕಾರಣ, ಹಸಿರು ಬಾವುಟವನ್ನು ತೆಗೆಯಲು ಒತ್ತಾಯಿಸಲಾಗಿತ್ತು. ಇದರಿಂದ ಮತ್ತಷ್ಟು ಗೊಂದಲಉಂಟಾದ ಕಾರಣ ವೇಣೂರು ಪೊಲೀಸರು ಎರಡೂ ಧ್ವಜವನ್ನು ತೆರವುಗೊಳಿಸಿದ್ದರು.
ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ಹಸಿರು ಧ್ವಜ ಮಾತ್ರವಲ್ಲದೆ, ಹಲವು ವರ್ಷಗಳಿಂದ ಸ್ಥಾಪಿಸಿದ್ದ ಭಗವಧ್ವಜವನ್ನೂ ತೆರವುಗೊಳಿಸಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕೆರಳಿಸದೆ. ಘಟನೆ ತಿಳಿದು ನ.30 ರಂದು ಸ್ಥಳಕ್ಕಾಗಮಿಸಿದ ಶಾಸಕ ಹರೀಶ್ ಪೂಂಜ ಮತ್ತೆ ಭಗವಧ್ವಜವನ್ನು ಸ್ಥಾಪಿಸಿ, ಸೌಹಾರ್ದತೆಯ ನೆಪದಲ್ಲಿ ಭಗವಧ್ವಜವನ್ನು ತೆಗೆಯುವುದು ಸರಿಯಲ್ಲ. ಹಿಂದೂ ಸಮಾಜದ ರಕ್ಷಣೆಗಾಗಿ ಜೈಲಿಗೆ ಹೋಗಲೂ ಸಿದ್ಧ. ಪ್ರಕರಣ ದಾಖಲಿಸುವುದಿದ್ದಲ್ಲಿ ನನ್ನ ಮೇಲೆ ದಾಖಲಿಸಿ. ನನಗೆ ಹಿಂದುತ್ವ ಮುಖ್ಯವೇ ಹೊರತು ಶಾಸಕತ್ವ ಅಲ್ಲ. ಮುಂದೆ ಧ್ವಜ ತೆಗೆಯುವ ಕೆಲಸಕ್ಕಿಳಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್, ಬಜರಂಗದಳ ತಾಲೂಕು ಸಂಚಾಲಕ ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.