ಶಾಸಕರು ದಾಖಲೆ ಇದ್ದರೆ ಬಹಿರಂಗ ಚರ್ಚೆಗೆ ಬರಲಿ: ಮಾಜಿ ಶಾಸಕ ವಸಂತ ಬಂಗೇರರಿಂದ ಸವಾಲು

ಬೆಳ್ತಂಗಡಿ : ಹರೀಶ್ ಪೂಂಜ ಶಾಸಕರಾದದ್ದು ಮೇ. 15 ರಿಂದ. ಆದರೆ ಫೆಬ್ರವರಿ 16 ದಿನಾಂಕಕ್ಕೆ ನಾನು ಶಾಸಕನಾಗಿದ್ದಾಗ ಮಂಜೂರಾದ ಕಾಮಗಾರಿಗಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿ ಇದೆಲ್ಲವನ್ನೂ ನಾನೇ ಮಾಡಿದ್ದೆಂದು ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಎಲ್ಲಾ ದಾಖಲೆಗಳಿದ್ದು ಬಹಿರಂಗ ವೇದಿಕೆಗೆ ಅಥವಾ ಪ್ರೆಸ್‌ಕ್ಲಬ್‌ನಲ್ಲಾದರೂ ಸರಿ ನಾನು ಅವರನ್ನು ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ದಾಖಲೆಗಳಿದ್ದರೆ ಅವರು ಅಲ್ಲಿ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ವಸಂತ ಬಂಗೇರ ಸವಾಲು ಹಾಕಿದ್ದಾರೆ.
ನ. 28 ರಂದು ನಗರದ ವಾರ್ತಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ದಾಖಲೆ ಬಿಡುಗಡೆಗೊಳಿಸಿದರು.
ಶಿಲಾನ್ಯಾಸ ನೆರವೇರಿಸಿದ್ದೇನೆ: ಶಾಲಾ ಕೊಠಡಿ, ಕಿಂಡಿ ಅಣೆಕಟ್ಟು ಇವುಗಳನ್ನು ಬಿಟ್ಟು ಉಳಿದ ಎಲ್ಲಾ ಕಾಮಗಾರಿಗಳೂ ಚುನಾವಣೆಗೆ ಮುನ್ನ ಮಂಜೂರಾಗಿ ಟೆಂಡರ್ ಕರೆಯಲಾಗಿತ್ತು. ಆದರೆ ಟೆಂಡರ್ ತೆರೆಯುವ ಮುನ್ನ ಚುನಾವಣೆ ಘೋಷಣೆಯಾದುದರಿಂದ ಸರಕಾರವೇ ಅವುಗಳಿಗೆ ತಡೆಯಾಜ್ಞೆ ನೀಡಿತ್ತು. ಬಳಿಕ ಸರಕಾರ ತಡೆಯಾಜ್ಞೆ ತೆರವುಗೊಳಿಸಿ ಇದೀಗ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದ್ದಾರೆ. ಇಡೀ ರಾಜ್ಯದ ಚರಿತ್ರೆಯಲ್ಲಿ ಒಬ್ಬ ಶಾಸಕ ಶಿಲಾನ್ಯಾಸಗೊಳಿಸಿದ ಕಾಮಗಾರಿಯನ್ನು ಇನ್ನೊಬ್ಬ ಶಾಸಕ ಶಿಲಾನ್ಯಾಸಗೊಳಿಸಿದ್ದಿಲ್ಲ. ಆದರೆ ಕಾಜೂರು ಬಳಿ ನಾನು ಮಂಜೂರುಗೊಳಿಸಿದ ಸೇತುವೆಯ ಸಂಪರ್ಕ ರಸ್ತೆಗೆ ಹರೀಶ್ ಪೂಂಜ ಮತ್ತೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ಕಾಜೂರು ಸೇತುವೆಗೆ 2 ಕೋಟಿ ರೂ. ನಾನು ಮಂಜೂರುಗೊಳಿಸಿದ್ದು ಸಂಪರ್ಕ ರಸ್ತೆಗಾಗಿ ಜಾಗ ಕಳೆದುಕೊಳ್ಳುವವರು ಪರಿಹಾರದ ಬೇಡಿಕೆ ಇಟ್ಟಾಗ ಗುತ್ತಿಗೆದಾರರಲ್ಲಿ ಮಾತನಾಡಿ, ನಾನೂ ಕೈಯಿಂದ ಹಣ ಹಾಕಿ ನೀಡುವುದಾಗಿ ಹೇಳಿದ್ದೆ. ಆದರೆ ಈಗ ಶಾಸಕರು ತಾನೇ ಕೈಯಿಂದ ಹಣ ನೀಡುತ್ತಿರುವುದಾಗಿ ಬಿಂಬಿಸಿದ್ದಾರೆ ಎಂದರು.
6 ತಿಂಗಳಲ್ಲಿ ಹರೀಶ್ ಪೂಂಜ ಒಂದೇ ಒಂದು ಪೈಸೆ ಅನುದಾನ ತಂದಿಲ್ಲ: ತಾನು ಶಾಸಕನಾದರೆ 15 ದಿನಗಳಲ್ಲಿ ರಸ್ತೆ, ಸೇತುವೆ ಇತರ ಕಾಮಗಾರಿಗಳನ್ನು ಮಾಡುವುದಾಗಿ ಹರೀಶ್ ಪೂಂಜ ಚುನಾವಣೆ ವೇಳೆ ಜನತೆಗೆ ಭರವಸೆ ಕೊಟ್ಟಿದ್ದರು. ಆದರೆ ಅವರು ಶಾಸಕರಾಗಿ 6 ತಿಂಗಳಾಗಿದ್ದು ರಾಜ್ಯ ಸರಕಾರದಿಂದ ಅವರು ಒಂದೇ ಒಂದು ಪೈಸೆ ಅನುದಾನ ತಂದಿಲ್ಲ ಎಂದು ವಸಂತ ಬಂಗೇರ ಹೇಳಿದರು.
ಒಟ್ಟು 48 ಕೋಟಿ ರೂ. ಅನುದಾನ ನಾನೇ ಮಂಜೂರು ಮಾಡಿಸಿ ತಂದದ್ದು: ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟು, ಶಾಲಾ ಕೊಠಡಿ, ಶಾಲಾ ಕೊಠಡಿಗಳ ದುರಸ್ಥಿ, ಸಿಆರ್‌ಎಫ್ ಫಂಡ್ ಮೂಲಕ ರಸ್ತೆ ಹೀಗೆ ಒಟ್ಟು  47,85,76,926   ರೂ. ಬಿಡುಗಡೆಗೊಳಿಸಿ ತಂದಿದ್ದೇನೆ. ನಿಟ್ಟಡೆ ಕುಕ್ಕುಜೊಟ್ಟು ಕಿಂಡಿ ಅಣೆಕಟ್ಟಿಗೆ ರೂ.6.92 ಕೋಟಿ ಮತ್ತು ಕಡಿರುದ್ಯಾವರ ಉದ್ಧಾರ ಕಿಂಡಿ ಅಣೆಕಟ್ಟಿಗೆ ರೂ. 4.92 ಕೋಟಿ ಮಂಜೂರಾಗಿದೆ. ಸಿಆರ್‌ಎಫ್ ಫಂಡ್‌ಗೆ ಕ್ಷೇತ್ರದ ಶಾಸಕರೇ ಲೋಕೋಪಯೋಗಿ ಇಲಾಖೆಗೆ ಬರೆದು ಅಲ್ಲಿಂದ ಅದು ಕೇಂದ್ರಕ್ಕೆ ರವಾನೆಯಾಗಿ ಮಂಜೂರಾಗಿ ಬರವಂತಹದ್ದು. ಸಿಆರ್‌ಎಫ್ ಫಂಡ್ ಬಿಡುಗಡೆಯಾಗಬೇಕಾದರೆ ಕನಿಷ್ಠ ಒಂದೂವರೆ ವರ್ಷ ಕಾಯಬೇಕಾಗುತ್ತದೆ ಎಂದರು. ಆದರೆ ಶಾಸಕರು ತಾವು ಶಾಸಕರಾಗುವ ಮುನ್ನವೇ ಅನುದಾನ ತಂದಿದ್ದೇನೆ ಎಂದು ಹೇಳಿಕೊಂಡುದರ ಅರ್ಥ ಏನು ಎಂದು ತಿಳಿಯುತ್ತಿಲ್ಲ. ಆ ಮೂಲಕ ಶಾಸಕ ಪೂಂಜ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.