ಡಿ.1: ಬೆಳ್ತಂಗಡಿಯಲ್ಲಿ ಎಸ್‌ಎಮ್‌ಎ ಪುತ್ತೂರು ಜಿಲ್ಲಾ ಸಮ್ಮೇಳನ, ಮೀಲಾದ್ ಕಾನ್ಫರೆನ್ಸ್

ಬೆಳ್ತಂಗಡಿ: ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ಎಸ್‌ಎಮ್‌ಎ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಪುಣ್ಯ ಪ್ರವಾದಿಯವರ ಜನ್ಮಮಾಸದ ಅಂಗವಾಗಿ ಡಿ. 1 ರಂದು ಬೆಳ್ತಂಗಡಿ ತಾ. ಮೈದಾನದಲ್ಲಿ ಜಿಲ್ಲಾ ಸಮ್ಮೇಳನ, ಮೀಲಾದ್ ಕಾನ್ಫರೆನ್ಸ್ ನಡೆಯಲಿದೆ.
ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ತಾಲೂಕಿನ ವ್ಯಾಪ್ತಿ ಒಳಗೊಂಡಿರುವ ಎಸ್‌ಎಮ್‌ಎ ಪುತ್ತೂರು ಜಿಲ್ಲಾ ಸಮಿತಿ234 ಅರೆಬಿಕ್ ಮದರಸಗಳು, 14 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, ೧೫೦೦ ಸಂಖ್ಯೆಯ ಧಾರ್ಮಿಕ ಗುರುಗಳು ತೊಡಗಿಸಿಕೊಂಡು ಧಾರ್ಮಿಕ ವಿಧ್ಯಾಭ್ಯಾಸ ವಿಸ್ತಾರ ಕಾರ್ಯ ನಡೆಯುತ್ತಿದೆ.
ಇಸ್ಲಾಂನ ಮೂಲಭೂತ ಶಕ್ತಿಯಾಗಿರುವ ಮೊಹಲ್ಲಾಗಳ ಸಬಲೀಕರಣ, ಮಕ್ಕಳಿಗೆ ಎಳವೆ ಪ್ರಾಯದಲ್ಲೇ ನೈತಿಕ ಜಾಗೃತಿ ಮತ್ತು ದೇಶಾಭಿಮಾನ ಹುಟ್ಟುಹಾಕುವ ಶಿಕ್ಷಣ ಒದಗಿಸುವುದು, ಮೂಲಭೂತ ಸೌಲಭ್ಯಗಳಿಂದ ಹಿಂದುಳಿದ ಮದರಸಗಳ ಅಭಿವೃದ್ಧಿಗೆ ಆರ್ಥಿಕ ಸಹಕಾರ, ಮದರಸಗಳಲ್ಲಿ ಬೋಧಿಸುವ ಗುರುಗಳಿಗೆ ಮನೆ ನಿರ್ಮಾಣ, ಅನಾರೋಗ್ಯ ನೆರವು ಇತ್ಯಾಧಿ ಸಂಕಷ್ಟಗಳಿಗೆ ನೆರವು ನೀಡುವುದು, ಮದರಸ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಲ್ಲಿರುವ ತಪ್ಪುಕಲ್ಪನೆ ಹೋಗಲಾಡಿಸಿ, ವ್ಯವಸ್ಥೆಯನ್ನು ಅವಹೇಳಿಸುವವರ ವಿರುದ್ಧ ಧ್ವನಿ ಎತ್ತುವುದು ಮತ್ತು ಕಾನೂನು ಸಂಬಂಧಿ ಹೋರಾಟಗಳನ್ನು ನಡೆಸುವ ಕಾರ್ಯವನ್ನು ಈ ಸಂಘಟನೆ ಮಾಡುತ್ತಿದೆ.
ಇದೀಗ ಪುತ್ತೂರು ಜಿಲ್ಲಾ ಸಮಿತಿಯ ಕಾರ್ಯಕ್ರಮವು ಬೆಳ್ತಂಗಡಿಯಲ್ಲಿ ಆಯೋಜನೆಗೊಂಡಿದ್ದು, ಡಿ. 1 ರಂದು ಅಪರಾಹ್ನ 2.30 ಕ್ಕೆ ಮದರಸ ಮಕ್ಕಳಿಂದ ಸಂತೆಕಟ್ಟೆಯಿಂದ ಮೈದಾನದವರೆಗೆ ಆಕರ್ಷಕ ರ್‍ಯಾಲಿ, 3.30 ಕ್ಕೆ ಮೀಲಾದ್ ಸ್ನೇಹ ಕೂಟ ನಡೆಯಲಿದ್ದು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಝಮೀರ್ ಅಹ್ಮದ್, ಯು.ಟಿ ಖಾದರ್, ಬಿಷಪ್ ಲಾರೆನ್ಸ್ ಮುಕ್ಕುಯಿ, ಎನ್.ಕೆ.ಎಮ್ ಶಾಫಿ ಸಅದಿ, ಎಮ್.ಎಲ್.ಸಿ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ.
ಸಂಜೆ ನಡೆಯುವ ಮೀಲಾದ್ ಕಾನ್ಫರೆನ್ಸ್‌ನಲ್ಲಿ ಕೇರಳ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ. ಕೇರಳ ರಾಜ್ಯ ಕೆಎಮ್‌ಜೆಸಿ ಪ್ರ. ಕಾರ್ಯದರ್ಶಿ ಸಯ್ಯಿದ್ ಕಡಲುಂಡಿ ತಂಙಳ್, ದ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಸಹಿತ ಸಯ್ಯಿದರುಗಳು ಭಾಗಿಯಾಗಲಿದ್ದಾರೆ. ಎಸ್‌ಎಮ್‌ಎ ರಾಜ್ಯಾಧ್ಯಕ್ಷ ಸಯ್ಯಿದ್ ಮಲ್‌ಜಅ ಉಜಿರೆ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸ್ವಾಗತ ಸಮಿತಿ ಚೇರ್‌ಮೆನ್ ಎ.ಕೆ ಅಹಮ್ಮದ್, ಎಸ್‌ಎಮ್‌ಎ ರಾಜ್ಯ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್, ಕೋಶಾಧಿಕಾರಿ ಎಂ.ಕೆ ಬದ್ರುದ್ದೀನ್ ಪರಪ್ಪು, ಕನ್ವೀನರ್ ಅಶ್ರಫ್ ಸಖಾಫಿ ಮಾಡಾವು, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಮುಂಡಾಜೆ, ಝೋನ್ ಕಾರ್ಯದರ್ಶಿ ಅಶ್ರಫ್ ಹಿಮಮಿ ಉಜಿರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.