ನಾಳ: ರೂ.50 ಲಕ್ಷ ವೆಚ್ಚದ ಶ್ರೀ ದುರ್ಗಾಪರಮೇಶ್ವರೀ ಸಭಾಭವನಕ್ಕೆ ಶಿಲಾನ್ಯಾಸ

ನ್ಯಾಯತರ್ಪು : ಭವ್ಯ ಭಾರತದ ಇತಿಹಾಸದಲ್ಲಿ ಸನಾತನ ಹಿಂದೂ ಧರ್ಮಕ್ಕೆ ವಿಶೇಷವಾದ ಗೌರವದ ಸ್ಥಾನವಿದ್ದು, ವಿನಾಶದಂಚಿಗೆ ಹೋಗುತ್ತಿರುವ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಸಂಘಟಿತರಾಗಬೇಕು ಎಂದು ಶ್ರೀ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಅವರು ನ.21ರಂದು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನಾಳ ಇದರ ವತಿಯಿಂದ ಶ್ರೀ ಕ್ಷೇತ್ರದಲ್ಲಿ ನೂತನವಾಗಿ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ `ಶ್ರೀ ದುರ್ಗಾಪರಮೇಶ್ವರೀ ಸಭಾಭವನ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಸನಾತನ ಹಿಂದೂ ಧರ್ಮಕ್ಕೆ ದೊಡ್ಡ ಇತಿಹಾಸವಿದ್ದು, ಸಂಸ್ಕಾರ ಮತ್ತು ಸಂಸ್ಕೃತಿ ಈ ಧರ್ಮದ ಹಿರಿಮೆ. ಇದನ್ನು ನಮ್ಮ ಹಿರಿಯರು ಪರಂಪರಗತವಾಗಿ ಅನುಸರಿಸಿಕೊಂಡು ಬಂದಿದ್ದಾರೆ. ಆದರೆ ನಮ್ಮ ಯುವ ಸಮುದಾಯ ಆಧುನಿಕತೆಗೆ ಮಾರು ಹೋಗಿ ಇವುಗಳಿಂದ ವಿಮುಖವಾಗುತ್ತಿರುವುದು ಖೇದವನ್ನುಂಟು ಮಾಡುತ್ತಿದೆ. ಯುವ ಸಮುದಾಯ ಸಂಘಟಿತರಾಗಿ ಸಮಾಜ ಮುಖಿ ಕಾರ್ಯದ ಮೂಲಕ ನಮ್ಮ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕು. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ `ವಿಜ್ಞಾಪನ ಪತ್ರ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ನೂತನ ಸಭಾ ಭವನ ನಿರ್ಮಾಣಕ್ಕೆ ತನ್ನ ಶಾಸಕ ನಿಧಿಯಿಂದ ರೂ.5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿ, ಸರಕಾರದಿಂದ ಹೆಚ್ಚಿನ ಅನುದಾನಕ್ಕಾಗಿ ಮುಜರಾಯಿ ಇಲಾಖೆಯ ಸಚಿವರ ಜೊತೆ ಮಾತನಾಡಲು ಸಹಕರಿಸುವುದಾಗಿ ತಿಳಿಸಿದರು.
ಕೂಪನನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಶಾಲೆ ದೇವಸ್ಥಾನ ಊರಿನ ಎರಡು ಕಣ್ಣುಗಳಿದ್ದಂತೆ. ಊರಿನ ಎಲ್ಲರೂ ಸೇರಿದರೆ ಇಂತಹ ಕಾರ್ಯಗಳು ಯಶಸ್ವಿಯಾಗುತ್ತದೆ. ಈ ಸಭಾಭವನ ನಿರ್ಮಾಣಕ್ಕೆ ತನ್ನ ನಿಧಿಯಿಂದ ರೂ.೫ ಲಕ್ಷ ನೀಡುವುದಾಗಿ ಆಶ್ವಾಸನೆಯಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಅವರು ಸಾವಿರಾರು ವರ್ಷಗಳ ಹಿಂದೆ ದೇವಸ್ಥಾನದ ಬ್ರಹ್ಮರಥ ಎಳೆಯುವ ಬಾಕಿಮಾರು ಗದ್ದೆಯು ಅನ್ಯರಿಗೆ ಹೋಗಿದ್ದು, ಈಗ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟು ಕೊಡಲು ಅವರು ಒಪ್ಪಿದ್ದಾರೆ. ಅದಕ್ಕಾಗಿ ನಾವು ನಿಗದಿತ ಮೊತ್ತವನ್ನು ಅವರಿಗೆ ನೀಡಬೇಕಾಗಿದೆ ಇದಕ್ಕೆ ಎಲ್ಲ ಭಕ್ತರು ಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.
ಪುತ್ತೂರು ಆದರ್ಶ ಆಸ್ಪತ್ರೆಯ ವೈದ್ಯ ಡಾ| ಪ್ರಸಾದ್ ಭಂಡಾರಿಯವರು ಮಾತನಾಡಿ ಯುವಜನತೆ ದುಶ್ಚಟ ಮುಕ್ತರಾಗಿ ಉತ್ತಮ ಆರೋಗ್ಯ ನಡೆಸುವಂತೆ ಕರೆ ನೀಡಿದರು. ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಖ್ಯಾತ ಮಕ್ಕಳ ತಜ್ಞರಾದ ಡಾ| ಸದಾಶಿವ ರಾವ್, ನ್ಯಾಯವಾದಿ ಅಜಿತ್ ಎನ್. ನಾವರ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜಶೇಖರ ಶೆಟ್ಟಿ ಮಾತನಾಡಿ ಶುಭ ಕೋರಿದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಭಜನಾ ಮಂಡಳಿ ಅಧ್ಯಕ್ಷ ಶಶಿಧರ ಹಿರ್ಯ, ಶ್ರೀ ದುರ್ಗಾ ಮಾತೃ ಸಂಘದ ಅಧ್ಯಕ್ಷೆ ರೀತಾ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸತೀಶ್ ಭಂಡಾರಿ ನಾಳ ಇವರ ಪ್ರಾರ್ಥನೆ ಬಳಿಕ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸ್ವಾಗತಿಸಿದರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿ, ಅಶೋಕ ಆಚಾರ್ಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.