ಬೆಳ್ತಂಗಡಿ: ನಾನು ಶಾಸಕನಾಗಿದ್ದ ಕೊನೆಯ ಅವಧಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಂತೆ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ 7 ರಸ್ತೆಗಳಿಗೆ 16.02 ಕೋಟಿ ರೂ. ಮತ್ತು ಕೇಂದ್ರ ಸರಕಾರದ ಸಿಆರ್ಎಫ್ ನಿಧಿಯಿಂದ 2 ರಸ್ತೆಗಳಿಗೆ 17.83 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯೂ ಮುಗಿದು ಕೆಲಸ ಪ್ರಾರಂಭದ ಹಂತಕ್ಕೆ ಬಂದಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ತಿಳಿಸಿದರು.
ನ. 17 ರಂದು ನಗರದ ವಾರ್ತಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಅವರು ವಿವರ ನೀಡಿದರು.
7 ಪಿಡಬ್ಲ್ಯುಡಿ ರಸ್ತೆಗಳಿಗೆ 16.02 ಕೋಟಿ ರೂ: ಮಡಂತ್ಯಾರು ಕಕ್ತೇಶ್ವರಿಪದವು ಬಂಗೇರಕಟ್ಟೆ ರಸ್ತೆ 4.02 ಕೋಟಿ ರೂ., ಮುಂಡೂರು ಗ್ರಾಮದ ಕೋಟಿಕಟ್ಟೆ ದುರ್ಗಾಪರಮೇಶ್ವರೀ ದೇವಸ್ಥಾನ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ., ಬಳೆಂಜ ಗ್ರಾಮದ ಕಾಪಿನಡ್ಕ-ಬಳೆಂಜ ರಸ್ತೆ ಅಭಿವೃದ್ಧಿಗೆ 90 ಲಕ್ಷ ರೂ., ಇಂದಬೆಟ್ಟು ಗ್ರಾಮದ ಪಾಲೆದಬೆಟ್ಟು ಕರ್ಮಿನಡ್ಕ ನಾವೂರು ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ., ರೆಖ್ಯಾ ಗ್ರಾಮದ ಉಪ್ಪಾರು ರಸ್ತೆ ಅಭಿವೃದ್ಧಿಗೆ 2.85 ಕೋಟಿ ರೂ. ಸಹಿತ ಒಟ್ಟು 16.02 ಕೋಟಿ ರೂ. ಮಂಜೂರಾತಿಯಾಗಿದೆ.
2 ರಸ್ತೆಗಳಿಗೆ ಕೇಂದ್ರ ಸಿಆರ್ಎಫ್ ನಿಂದ 17.83ಕೋಟಿ ರೂ: ಕೇಂದ್ರ ರಸ್ತೆ ನಿಧಿ ಸಿಆರ್ಎಫ್ ನಿಂದ ಕಕ್ಕಿಂಜೆ-ನೆರಿಯ-ಪುದುವೆಟ್ಟು 6 ರಿಂದ 13 ಕಿ. ಮೀ. ವರೆಗೆ ಅಭಿವೃದ್ಧಿಗೆ 6.70 ಕೋಟಿ ರೂ.,ಮತ್ತು ಉಜಿರೆ- ಬೆಳಾಲು-ಕುಪ್ಪೆಟಿ ರಸ್ತೆ ಅಭಿವೃದ್ಧಿಗೆ 11.13 ಕೋಟಿ ರೂ. ಹೀಗೆ ಒಟ್ಟು 17.83 ಕೋಟಿ ರೂ. ಮಂಜೂರಾಗಿದೆ.
2 ಸೇತುವೆ ರಚನೆಗೆ 4.50 ಕೋಟಿ ರೂ:
ಮಚ್ಚಿನ ಗ್ರಾಮದ ಕುಂಡಡ್ಕ ಸೇತುವೆ ನಿರ್ಮಾಣಕ್ಕೆ 54 ಲಕ್ಷ ರೂ., ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲು ಎತ್ತಿನಗಂಡಿ ಸೇತುವೆಗೆ 4 ಕೋಟಿ ರೂ. ಬಿಡುಗಡೆಯಾಗಿದೆ.
ಸರಕಾರದಿಂದ ಇದ್ದ ತಡೆಯಾಜ್ಞೆ ತೆರವು, ಟೆಂಡರ್ ಅಂತ್ಯ: ಕಳೆದ ವಿಧಾನ ಸಭಾ ಚುನಾವಣೆಗೆ ಮುನ್ನವೇ ಈ ಕಾಮಗಾರಿಗಳ ಮಂಜೂರಾತಿ ಪ್ರಕ್ರೀಯೆಗಳು ಸಂಪೂರ್ಣಗೊಂಡಿತ್ತಾದರೂ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸರಕಾರವೇ ತಡೆಯಾಜ್ಞೆ ನೀಡಿತ್ತು. ಆದರೆ ಇದೀಗ ಈ ತಡೆ ತೆರವಾಗಿದ್ದು ಟೆಂಡರ್ ನಡೆದು ಕಾಮಗಾರಿ ಆರಂಭಗೊಳ್ಳಲಿದೆ. ಸಿಆರ್ಎಫ್ ಅನುದಾನದ ಕಾಮಗಾರಿಗಳಿಗೆ ಟೆಂಡರ್ ಮುಗಿದಿದ್ದು ಕೆಲಸ ಪ್ರಾರಂಭಗೊಳ್ಳಲಿದೆ ಎಂದರು.
ಸುಳ್ಳು ಭರವಸೆ ಎಂದು ಅಪ್ರಪ್ರಚಾರ ಮಾಡಿದ್ದರು:
ಈ ಕಾಮಗಾರಿಗಳ ಪೈಕಿ ಕೆಲವೊಂದಕ್ಕೆ ಶಿಲಾನ್ಯಾಸವನ್ನೂ ನೆರವೇರಿಸಿದುದರಿಂದ ವಿರೋಧ ಪಕ್ಷದವರು ಇದನ್ನು ಅಪಪ್ರಚಾರ ಮಾಡುತ್ತಾ, ನಾನು ಜನತೆಗೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿದ್ಧೇನೆ ಎಂದಿದ್ದರು. ಕಾಮಗಾರಿ ಮಂಜೂರಾದುದರಿಂದಲೇ ನಾನು ಅವುಗಳಿಗೆ ಶಿಲಾನ್ಯಾಸ ನೆರವೇರಿಸಿದ್ದೆ ಎಂದು ಸ್ಪಷ್ಟಪಡಿಸಿದರು.
ಶಾಸಕರಿಂದ ಬದಲಿ ಪ್ರಸ್ತಾವನೆ ಇದ್ದರೂ ನನ್ನ ಪ್ರಸ್ತಾವನೆ ಮಂಜೂರಾಗಿದೆ
ಶಾಸಕ ಹರೀಶ್ ಪೂಂಜಾ ನಾನು ಮಂಜೂರುಗೊಳಿಸಿದ್ದ 2 ಕಾಮಗಾರಿಗಳನ್ನು ಬದಲಿಸಲು ಮರು ಪ್ರಸ್ತಾವನೆ ಸಲ್ಲಿಸಿದ್ದರು. ಮಚ್ಚಿನ ಗ್ರಾಮದ ಕುಂಡಡ್ಕ ಸೇತುವೆ ಬದಲು ತಾರೆಮಾರು ಎಂಬಲ್ಲಿ ಸೇತುವೆ ನಿರ್ಮಾಣ, ಇಂದಬೆಟ್ಟು ಗ್ರಾಮದ ಪಾಲೇದು -ಕರ್ಮಿನಡ್ಕ -ನಾವೂರು ರಸ್ತೆಯ ಬದಲು ಕುತ್ತಿಜಾಲು -ನೆಲ್ಲಿಗುಡ್ಡೆ -ಮಾಲ್ನ -ಮಂಕಾಳ -ಸಾಂತ್ಯಾಯ ರಸ್ತೆ ಅಭಿವೃದ್ಧಿಗೊಳಿಸುವಂತೆ ಅವರು ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಅಂಗೀಕಾರವಾಗದೆ ತಾನು ಕಳುಹಿಸಿದ ಪ್ರಸ್ತಾವನೆಯೇ ಮಂಜೂರಾಗಿದೆ ಎಂದು ತಿಳಿಸಿದ ವಸಂತ ಬಂಗೇರರು, ಶಾಸಕರು ನೀಡಿದ ಬದಲಿ ಪ್ರಸ್ತಾವನೆಯ ದಾಖಲೆಪತ್ರ ಬಿಡುಗಡೆಗೊಳಿಸಿದರು.