ವಿಶ್ವ ರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಿ : ಡಾ| ಡಿ. ವೀರೇಂದ್ರ ಹೆಗ್ಗಡೆ ಕರೆ

ಧರ್ಮಸ್ಥಳ : ದೂರದೃಷ್ಟಿತ್ವ ಹೊಂದಿದ್ದ ನಮ್ಮ ಪೂರ್ವಜರಿಂದ ನಮಗೆ ಬಂದಿರುವ ಈ ಪ್ರಕೃತಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ ಮತ್ತು ಹಕ್ಕು. ಇತ್ತೀಚೆಗೆ ಉಜಿರೆಗೆ ಬಂದಿದ್ದ ದೇಶದ ಪ್ರಧಾನಿ ನರೇಂದ್ರ ಮೋದೀಜಿಯವರದ್ದೂ ಕೂಡ ವಿಶ್ವ ರಕ್ಷಿಸಿ ಎಂಬುದು ಘೋಷಣೆಯಾಗಿತ್ತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರ ಮಾರ್ಗದರ್ಶನದಲ್ಲಿ ಮುಂಡಾಜೆ ಸಹಕಾರಿ ಸಂಘದಿಂದ ಸಂಘದ ವತಿಯಿಂದ ವಿಶೇಷವಾಗಿ ಹಮ್ಮಿಕೊಳ್ಳಲಾಗಿರುವ ಸಹಕಾರಿ ಸಪ್ತಾಹದ ಭಾಗವಾಗಿ, ಏರುತ್ತಿರುವ ಜಾಗತಿಕ ತಾಪಮಾನ, ಪ್ರಾಕೃತಿಕ ವಿಕೋಪ ತಡೆ, ನೆಲ-ಜಲ-ಪರಿಸರ ಸಂರಕ್ಷಣೆ, ಸ್ವಚ್ಚ ಸಮೃದ್ಧ ಪರಿಸರ- ಸ್ವಸ್ಥ ವಾತಾವರಣಕ್ಕಾಗಿ ನಮ್ಮ ಕೊಡುಗೆ ಎಂಬುದರ ಬಗ್ಗೆ
ಮಾಹಿತಿ ಮತ್ತು ಜಾಗೃತಿ ಸಂದೇಶ ಪತ್ರವನ್ನು ಅವರು ನ. 14 ರಂದು ಶ್ರೀ ಕ್ಷೇತ್ರದ ಬೀಡಿನಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್. ಗೋಖಲೆ ಕಾರ್ಯಕ್ರಮದ ಉದ್ಧೇಶವನ್ನು ಪ್ರಸ್ತಾಪಿಸಿ ಹೆಗ್ಗಡೆಯವರನ್ನು ಸನ್ಮಾನಿಸಿ ಸ್ವಾಗತಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ನಿರ್ದೇಶಕರಾದ ಗೋವಿಂದ ಚಿಪ್ಲೂನ್ಕರ್, ಪ್ರಕಾಶ್ ನಾರಾಯಣ್ ರಾವ್ ಕೆ, ಮೋಹನಚಂದ್ರ ಗೋಖಲೆ, ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಪತ್ರಕರ್ತ ಶಿಬಿ ಧರ್ಮಸ್ಥಳ, ವಾಸುದೇವ ಗೋಖಲೆ, ಗಜಾನನ ವಝೆ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ವಂದನಾರ್ಪಣೆಗೈದರು. ಸಿಬ್ಬಂದಿ ಎಲ್ಯಣ್ಣ ಮತ್ತಿತರರು ಸಹಕಾರ ನೀಡಿದರು.
ಸಂಘ ಸಂಸ್ಥೆಗಳ ಸಹಯೋಗ:
ಅದ್ದೂರಿ ರಹಿತವಾಗಿ ವಿಶೇಷ ರೀತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಸಹಕಾರಿ ಸಪ್ತಾಹದ ಕಾರ್ಯಕ್ರಮಕ್ಕೆ ಮುಂಡಾಜೆ ಸಹಕಾರಿ ಸಂಘದ ಕೇಂದ್ರ ಕಚೇರಿ ಮತ್ತು ಶಾಖೆಗಳು ಇರುವ ಎಲ್ಲಾ ಗ್ರಾ.ಪಂಚಾಯತ್‌ಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಗ್ರಾಹಕರ ಶತಾಬ್ಧಿ ಸಹಕಾರ ಸಂಘಗಳು, ರೈತ ಸೇವಾ ಕೂಟಗಳು, ಹಾಗೂ ಸೆಲ್ಕೋ ಸೋಲಾರ್ ಪ್ರೈ ಲಿಮಿಟೆಡ್, ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ, ಕ್ಯಾಂಪ್ಕೋ ಸಂಸ್ಥೆಗಳು ಸಹಯೋಗ ನೀಡಿದೆ.
ಶಾಲಾ ಕಾಲೇಜುಗಳಲ್ಲಿ ಕರಪತ್ರ ಪ್ರದರ್ಶನಕ್ಕೆ ಸೂಚನೆ:
ಮುಂಡಾಜೆ ಸಹಕಾರಿ ಸಂಘದ ಮೂಲಕ ಬಿಡುಗಡೆಗೊಳಿಸಲಾದ ಈ ಕರಪತ್ರವನ್ನು ಸ್ಥಳೀಯ ತಮ್ಮ ಶಿಕ್ಷಣ ಸಂಸ್ಥೆಗಳ ಸೂಚನಾಫಲಕಗಳಲ್ಲಿ ಪ್ರದರ್ಶಿಸುವಂತೆ ಹಾಗೂ, ತಾಪಮಾನ ನಿಯಂತ್ರಣ, ಪ್ರಕೃತಿ ರಕ್ಷಣೆ ಬಗ್ಗೆ ತಯಾರಿಸಲಾದ ಬಿತ್ತಿಪತ್ರವನ್ನು ಕನ್ನಡ ಭಾಷೆಯಲ್ಲೂ ಮುದ್ರಿಸಿ ಧರ್ಮಸ್ಥಳದ ಕ್ಯೂಕಾಂಪ್ಲೆಕ್ಸ್ ಮತ್ತು ಇತರೇ ಜನಸಂದಣಿ ಪ್ರದೇಶದಲ್ಲಿ ಪ್ರದರ್ಶಿಸುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಅವರು ಸೂಚಿಸಿದರು.

65ನೇ ಸಹಕಾರಿ ಸಪ್ತಾಹಕ್ಕೆ ಮುಂಡಾಜೆ ಸಹಕಾರಿ ಸಂಘ ಅದ್ದೂರಿಯಲ್ಲದ ಹೊಸರೂಪ ನೀಡಿದೆ. ಸುಮಾರು 50 ವರ್ಷಗಳಿಂದ ನಾನು ಎನ್.ಎಸ್ ಗೋಖಲೆಯವರನ್ನು ನೋಡುತ್ತಾ ಬಂದಿದ್ದು ಪ್ರತಿಯೊಂದು ವಿಚಾರದಲ್ಲೂ ಅವರು ವಿಭಿನ್ನ ಚಿಂತನೆ ಹೊಂದಿರುತ್ತಾರೆ. ಎಲ್ಲೆಡೆ ಸಹಕಾರಿ ಸಪ್ತಾಹವನ್ನು ಇಂದು ಮೆರವಣಿಗೆ, ವೈಭವದ ಸಭಾ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡುಬಂದರೆ, ಮುಂಡಾಜೆ ಸಂಘ ಸರ್ವರಿಗೂ ಬೇಕಾದ, ಸಕಾಲಿಕ ವಿಚಾರವನ್ನು ಮುಂದಿಟ್ಟುಕೊಂಡು ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿದೆ.
-ಡಾ. ಡಿ. ವೀರೇಂದ್ರ ಹೆಗ್ಗಡೆಯವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.