ಶಿರಾಡಿ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ 6 ಪಿಕಪ್ ವಶಕ್ಕೆ

ಶಿರಾಡಿ ಗ್ರಾಮದ ಗುಂಡ್ಯ, ಅಡ್ಡಹೊಳೆ, ಶಿರಾಡಿ, ಉದನೆ, ಎಂಜಿರ ಕಡೆಗಳಲ್ಲಿ ಹರಿಯುತ್ತಿರುವ ಕೆಂಪುಹೊಳೆ ನದಿ ಕಿನಾರೆಯಿಂದ ತಡರಾತ್ರೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗಳ ಅಡ್ಡೆಗಳಿಗೆ ನ.12 ರಂದು ರಾತ್ರಿ 12 ಗಂಟೆಯ ಸುಮಾರಿಗೆ ಪೋಲೀಸರು ದಾಳಿ ನಡೆಸಿದ್ದು, ಈ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ 6 ಪಿಕಪ್ ಗಳನ್ನು ಪೋಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ವಿವರ: ಉದನೆಯಿಂದ ತೊಡಗಿ ಶಿರಾಡಿ, ಗುಂಡ್ಯದವರೆಗೆ ಹರಿಯುತ್ತಿರುವ ಕೆಂಪುಹೊಳೆ ನದಿಕಿನಾರೆಗಳಲ್ಲಿ ಅವ್ಯಾಹತವಾಗಿ ರಾತ್ರಿ ವೇಳೆ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಸ್ಥಳೀಯ ಹಲವಾರು ಪಿಕಪ್ ಗಳು ಕಳೆದ ಕೆಲ ತಿಂಗಳುಗಳಿಂದ ರಾತ್ರಿ ವೇಳೆ ಈ ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಿರುವುದರ ಕುರಿತಾಗಿ ಈ ಮೊದಲೇ ಗಣಿ ಇಲಾಖೆಗೆ , ಪೊಲೀಸ್ ಉನ್ನತಾಧಿಕಾರಿಗಳಿಗೆ ಸ್ಥಳೀಯರಿಂದ ದೂರು ನೀಡಲಾಗಿತ್ತಾದರೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿರುವುದು, ಇಲಾಖೆಯ ಮೇಲೆಯೇ ಸಾರ್ವಜನಿಕರು ಸಂಶಯ ಪಡುವಂತಾಗಿತ್ತು.

ಕಳೆದ ಒಂದೆರಡು ವಾರಗಳ ಹಿಂದೆ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಈ ಮರಳು ಅಡ್ಡೆಗಳಿಗೆ ದಾಳಿಯನ್ನು ನಡೆಸಿದ್ದರಾದರೂ , ದಾಳಿಯ ಮುನ್ಸೂಚನೆಯನ್ನು ಅರಿತಿದ್ದ ಮರಳು ಸಾಗಾಟಗಾರರು ತಮ್ಮ ತಮ್ಮ ಪಿಕಪ್ ಗಳು ಪೋಲೀಸರಿಗೆ ಸಿಗದಂತೆ ಜಾಗ್ರತೆ ವಹಿಸಿದ್ದರು. ನದಿಕಿನಾರೆಯಲ್ಲಿದ್ದ ಬೋಟ್ ಗಳನ್ನು ವಶಪಡಿಸಿ ಅಂದು ಮರಳಿದ್ದ ಪೋಲೀಸರು ಸೋಮವಾರದಂದು ತಡರಾತ್ರೆ ಮತ್ತೆ ಕಾರ್ಯಾಚರಣೆ ನಡೆಸಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಕೆಲವೊಂದು ಪಿಕಪ್ ಗಳನ್ನು ಮರಳು ಸಮೇತ ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಸ್ಕ್ವಾಡ್ , ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು, ಉಪ್ಪಿನಂಗಡಿ ಉಪನಿರೀಕ್ಷಕರು ಮತ್ತು ನೆಲ್ಯಾಡಿಯ ಪೋಲೀಸ್ ಠಾಣೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಗುಂಡ್ಯ ಮತ್ತು ಶಿರಾಡಿ , ಗೋಳಿತೊಟ್ಟು ಮೂಲದ ಸುಮಾರು 6 ಪಿಕಪ್ ಗಳನ್ನು ಮರಳು ಸಹಿತ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಧಾಳಿಯ ಸಂದರ್ಭ ಪಿಕಪ್ ಗಳ ಚಾಲಕರು ಸ್ಥಳದಿಂದ ಪರಾರಿಯಾಗಿದ್ದು, ವಾಹನಗಳನ್ನು ಮತ್ತು ಮರಳನ್ನು ವಶಪಡಿಸಿಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.