ಸೋಜಾ ಸಮೂಹ ಸಂಸ್ಥೆಯಿಂದ ಬೆಳ್ತಂಗಡಿಯ ವೃದ್ಧಾಶ್ರಮದಲ್ಲಿ ದೀಪಾವಳಿ ಅಚರಣೆ

ಬೆಳ್ತಂಗಡಿ: ಮನೆಯ ಹಿರಿಯರು ಅಥವಾ ಹೆತ್ತವರನ್ನು ವೃದ್ಧಾಶ್ರಮದಲ್ಲಿಟ್ಟು ನಾವು ಮನೆಯಲ್ಲಿ ಆಚರಿಸುವ ದೀಪಾವಳಿ ಹಬ್ಬ ನಿಜವಾದ ಅರ್ಥದಲ್ಲಿ ಹಬ್ಬವಾಗಲು ಸಾಧ್ಯವಿಲ್ಲ. ಅಂತಹಾ ಆಡಂಬರದ ಆಚರಣೆಯ ಅಗತ್ಯವೂ ಇಲ್ಲ ಎಂದು ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳೆಂಜ ಹೇಳಿದರು.
ಸೋಜಾ ಇಲೆಕ್ಟ್ರಾನಿಕ್ಸ್ ಮತ್ತು ತನ್ನೆಲ್ಲಾ ಸಮೂಹ ಸಂಸ್ಥೆಗಳ ವತಿಯಿಂದ ಬೆಳ್ತಂಗಡಿ ಸುದೆಮುಗೇರುವಿನಲ್ಲಿ ಕಾರ್ಯಾಚರಿಸುತ್ತಿರುವ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ವೃದ್ಧಾಶ್ರಮದಲ್ಲಿ ನ. 11 ರಂದು ಆಯೋಜಿಸಿದ ದೀಪಾವಳಿ ಆಚರಣೆ, ವೃದ್ಧಾಶ್ರಮದಲ್ಲಿ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೀಪಬೆಳಗಿದ ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ ಮಾತನಾಡಿ, ಮಾನವೀಯತೆಗೆ ಮೀರಿದ ಧರ್ಮ ಇನ್ನೊಂದಿಲ್ಲ, ಇಲ್ಲಿ ಬಂದು ನೋಡಿದಾಗ ಆರ್ಥಿಕವಾಗಿ ಮತ್ತು ತಂತ್ರಜ್ಞಾದಲ್ಲಿ ಇಷ್ಟೊಂದು ಮುಂದುವರಿದಿರುವ ಈ ಕಾಲದಲ್ಲೂ ಕೂಡ ಮಕ್ಕಳು ತಮ್ಮ ಹೆತ್ತವರನ್ನು ಈ ರೀತಿ ತ್ಯಜಿಸಿ ವೃದ್ಧಾಶ್ರಮಗಳಿಗೆ ಸೇರುವಂತೆ ಮಾಡುತ್ತಾರೆಂದರೆ ಆಶ್ಚರ್ಯ ತರುವ ವಿಚಾರ. ಇಂತಹಾ ಕಡೆ ಅಲ್ಫೋನ್ಸ್ ಫ್ರಾಂಕೋ ಈ ಪುಣ್ಯದ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಎಸ್‌ಡಿಪಿಐ ತಾ. ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮಾತನಾಡಿ, ಇಂದು ಈ ಕೇಂದ್ರಕ್ಕೆ ದಾಖಲಾಗಿರುವ ನೀವು ಯಾರೂ ಅನಾಥರಲ್ಲ. ನಿಮ್ಮನ್ನು ಈ ಸ್ಥಿತಿಗೆ ತಳ್ಳಿರುವ ನಾವು ಇಂದು ಅನಾಥರು ಎಂಬುದು ನಮಗೆ ಇಂದು ವೇದ್ಯವಾಗುತ್ತಿದೆ. ಇಂತಹಾ ತಾಯಂದಿರಿಗೆ ಯಾರೂ ಇಲ್ಲ ಎನ್ನುವುದಕ್ಕಿಂತ ನಾವು ಅವರ ಮಕ್ಕಳಾಗಿ ಜೊತೆ ಇರಲು ಇಷ್ಟಪಡುತ್ತೇವೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದು 104 ವರ್ಷ ಬಾಳಿದ್ದ ನನ್ನ ಅಜ್ಜನ ಶುಶ್ರೂಷೆಯನ್ನು ತನ್ನ ತಾಯಿ ಮಾಡಿದ್ದರು ಎಂದು ನೆನಪಿಸಿಕೊಂಡರು. ಪತ್ರಕರ್ತ ಲ. ಅಶ್ರಫ್ ಆಲಿಕುಂಞಿ ಮಾತನಾಡಿ, ಹೆತ್ತವರ ಕಣ್ಣಲ್ಲಿ ನೀರು ತರಿಸುವ ಯಾವ ಮಕ್ಕಳೂ ಉದ್ಧಾರವಾಗಲು ಸಾಧ್ಯವಿಲ್ಲ. ಸರ್ವಧರ್ಮೀಯರು ಇರುವ ಇಲ್ಲಿ ಅಲ್ಫೋನ್ಸ್ ಫ್ರಾಂಕೋ ಅವರ ಈ ಕಾರ್ಯ ಭಾರತದ ಸಂಸ್ಕೃತಿ ಎಂದರು. ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜಾ ಮಾತನಾಡಿ, ತಾನು ಬ್ಯಾಂಕಿನ ಅಧಿಕಾರಿಯಾಗಿದ್ದು ಬೇರೆ ಬೇರೆ ಕಡೆ ಕೆಲಸ ಮಾಡಿದಾಗ ದೀಪಾವಳಿಯಂತಹಾ ಹಬ್ಬಗಳ ಸಂದರ್ಭ ಇದ್ದ ಸಾಮರಸ್ಯ ಈಗ ಮಾಯವಾಗಿರುವುದು ದುಃಖಕರ ಎಂದರು. ಕ್ರೈಸ್ತ ವಿವಾಹ ನೊಂದಣಾಧಿಕಾರಿ ಅಲೋಶಿಯಸ್ ಲೋಬೋ ಮಾತನಾಡಿ, ತಮ್ಮ ತಾಯಿಯ ದೈನಂದಿನ ಕೆಲಸಕ್ಕೆ ಇಂದೂ ನಾನು ನೆರವಾಗಿ ಈ ಸಮಾರಂಭಕ್ಕೆ ಬಂದೆ. ನಮ್ಮ ಹೆತ್ತವರ ಆಶೀರ್ವಾದವೇ ನಮ್ಮೆ ಬೆಳವಣಿಗೆ ಎಂದರು.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ ಮಾತನಾಡಿ, ತಂದೆ ತಾಯಿಯರ ಸೇವೆಗೆ ಪರಲೋಕದಲ್ಲಿ ಪುಣ್ಯ ದೊರೆಯುತ್ತದೆ ಎಂದು ಕುರಾನ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದರು.
ಅನುಗ್ರಹ ಚಾರಿಟೇಬಲ್ ಟ್ರಸ್ಟ್ ಸಿಸ್ಟರ್ ಸುಪೀಯರ್ ಸಿ. ಡೆನ್ನಿಸ್, ಸಹಾಯಕಿ ಸಿಸ್ಟರ್ ಡೆಸ್ಲಿನ್ ಸಹಕಾರ ನೀಡಿದರು. ಸೋಜಾ ಸಂಸ್ಥೆಯ ಸಿಬಂದಿಗಳಾದ ಚಿತ್ರಾ ಕುಲಾಲ್ ಅರಸಿನಮಕ್ಕಿ ನಿರೂಪಿಸಿದರು. ಶ್ರದ್ದಾ ಸುಬ್ರಹ್ಮಣ್ಯ ವಂದನಾರ್ಪಣೆಗೈದರು. ಎಲ್ಲ ಸಿಬಂದಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.