ಮಡಂತ್ಯಾರು ಗ್ರಿಪ್ ಹಗ್ಗ ಜಗ್ಗಾಟ ಸಮಾರೋಪ, ಸನ್ಮಾನ

ಮಡಂತ್ಯಾರು: ಮಡಂತ್ಯಾರಿನಲ್ಲಿ ಪರಸ್ಪರ ಧರ್ಮೀಯರು ಅನ್ಯೋನ್ಯತೆಯಿಂದ ಬಾಳುತ್ತಿದ್ದು ಇದು ಭಾರತದ ಸಂಸ್ಕೃತಿ ಪ್ರತಿಬಿಂಭಿಸುವ ಸುಂದರ ನಾಡು. ಸೌಹಾರ್ದತೆಯ ಬಾಳಿಗೆ ಮಡಂತ್ಯಾರು ಊರೇ ಒಂದು ಉತ್ತಮ ಉದಾಹರಣೆ ಎಂದು ಸೇಕ್ರೆಡ್ ಹಾರ್ಟ್ ಚರ್ಚ್‌ನ ಸಹಾಯಕ ಧರ್ಮಗುರು ರೆ. ಫಾ| ರಿಚಾರ್ಡ್ ಡಿಸೋಜಾ ಹೇಳಿದರು.
ಫ್ರೆಂಡ್ಸ್ ಮಡಂತ್ಯಾರು ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಕೊರೆಯ ಕಂಪೌಂಡ್‌ನಲ್ಲಿ ನ. 4 ರಂದು ನಡೆದ ಮುಕ್ತ ಸಿಂಗಲ್ ಗ್ರಿಪ್ ಹಗ್ಗಜಗ್ಗಾಟ ಇದರ ಸಮಾರೋಪ ಮತ್ತು ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಮಾತನಾಡಿ, ಫ್ರೆಂಡ್ಸ್ ಮಡಂತ್ಯಾರು ಈ ಸಂಘದಲ್ಲಿ ಎಲ್ಲ ಜಾತಿ ಧರ್ಮದವರೂ ಇದ್ದು ಈ ಸಂಘವೇ ಒಂದು ಸೌಹಾರ್ದತೆಯ ಸಂಕೇತ. ಇವರ ಕಾರ್ಯಕ್ರಮಗಳೂ ಕೂಡ ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿದೆ ಎಂದರು. ಶ್ರೀ ಕ್ಷೇತ್ರ ನಡುಬೊಟ್ಟು ಧರ್ಮದರ್ಶಿ ರವಿ ಎಂ ಮಾತನಾಡಿ, ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದ ಪ್ರೀತಿ ಸಹಭಾಳ್ವೆ, ಸೌಹಾರ್ದತೆ ಮಡಂತ್ಯಾರಿನಲ್ಲಿ ಕಾಣಲು ಸಾಧ್ಯವಾಗುತ್ತದೆ ಎಂದರು. ಇನ್ನೊರ್ವ ಮುಖ್ಯ ಅತಿಥಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ, ಎಲ್ಲ ಜಾತಿ ಧರ್ಮೀಯರನ್ನೂ ಸೇರಿಸಿ ಮಾಡುವ ಫ್ರೆಂಡ್ಸ್ ಮಡಂತ್ಯಾರು ತಂಡದವರ ಈ ಕಾರ್ಯಕ್ರಮದ ಬಗ್ಗೆ ನಮ್ಮ ಪಕ್ಷದ ಮೆಚ್ಚುಗೆ ಇದೆ ಎಂದರು.
ಸಮಾರಂಭದಲ್ಲಿ ಎಪಿಎಂಸಿ ಸದಸ್ಯ ಸೆಲೆಸ್ಟಿನ್ ಡಿಸೋಜಾ, ಮಡಂತ್ಯಾರಿನ ಉದ್ಯಮಿ ಮ್ಯಾಕ್ಸಿಂ ಕೊರೆಯ, ನವೀನ್ ಡಿಸೋಜಾ ಬೆಂಗಳೂರು, ಫ್ರೆಂಡ್ಸ್ ಮಡಂತ್ಯಾರು ಗೌರವಾಧ್ಯಕ್ಷ ರೋಶನ್ ಸೇರಾ, ಕಾರ್ಯದರ್ಶಿ ರಾಮಣ್ಣ ಮೂಲ್ಯ ಅಲೆಕ್ಕಿ, ಕೋಶಾಧಿಕಾರಿ ಮುಹಮ್ಮದ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರೋಶನ್ ಲೋಬೋ ವಹಿಸಿದ್ದರು.
ಸನ್ಮಾನ:
ಸಮಾರಂಭದಲ್ಲಿ ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರದ ಸಾಧನೆಗಾಗಿ ಫೆಲಿಕ್ಸ್ ಮೊರಾಸ್, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಬಶೀರ್ ಪರನೀರು, ಸಾಮಾಜಿಕ ಸೇವಾ ಕರ್ತರಾದ ರಮೇಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ತಾ.ಪಂ ಮಾಜಿ ಸದಸ್ಯ ವಿನ್ಸೆಂಟ್ ಟಿ ಡಿಸೋಜಾ, ಮಡಂತ್ಯಾರು ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಸಹಾಯಕ ವಿ.ಎ ಸದಾಶಿವ ಸನ್ಮಾನಿತರ ಪರಿಚಯ ಮಾಡಿದರು.
ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ್ಯಾಕ್ಸಿಂ ಕಾರ್ಲೊ ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.