ಉಜಿರೆ: ಇಲ್ಲಿಯ ಗುರಿಪಳ್ಳ ಕ್ರಾಸ್ ಅಳಕೆ ರಸ್ತೆಯಲ್ಲಿ ಅಪರಿಚಿತ ಯುವಕ ಮೃತದೇಹ ನ.11 ರಂದು ಪತ್ತೆಯಾಗಿದೆ. ಯುವಕನ ಮುಖಕ್ಕೆ ಪ್ಲಾಸ್ಟಿಕ್ ಟೇಪ್ ಸುತ್ತಲಾಗಿದ್ದು, ಇದೊಂದು ಕೊಲೆಯಾಗಿರಬಹುದು ಎಂದು ಸಂಶಯಿಸಲಾಗಿದೆ.
ಯುವಕನ ವಯಸ್ಸು ಸುಮಾರು 30 ರಿಂದ 35 ವರ್ಷವೆಂದು ಅಂದಾಜಿಸಲಾಗಿದ್ದು, ಕಪ್ಪು ಪ್ಯಾಂಟ್ ಹಾಗೂ ಬೂದು ಬಣ್ಣದ ಟಿ ಶರ್ಟ್ ಧರಿಸಿದ್ದಾರೆ. ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಇವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ವಾಹನದಲ್ಲಿ ತಂದು, ಶವವನ್ನು ಇಲ್ಲಿ ಎಸೆದಿರಬೇಕು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಅನಿಲ್ ಪ್ರಕಾಶ್ ಡಿಸೋಜಾ ರವರು ನ.11 ರಂದು ಬೆಳಿಗ್ಗೆ ವಾಕಿಂಗ್ ಹೋಗುವ ಸಂದರ್ಭ ಮೃತದೇಹ ಚರಂಡಿ ಬದಿಯಲ್ಲಿ ಕಂಡುಬಂದಿದೆ. ಅವರು ನೀಡಿದ ಮಾಹಿತಿಯಂತೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ, ಪಿಎಸ್ಐ ರವಿ ಬಿ.ಎಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.