ಚಾರ್ಮಾಡಿ: ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಮಂಗಳೂರು ಇವರು ಕೊಡಮಾಡುವ ‘ಸೌರಭ ರತ್ನ’ ರಾಜ್ಯ ಪ್ರಶಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಗೊಳ್ಳುತ್ತಿರುವ ‘ನಿರಂತರ ಪ್ರಗತಿ’ ಮಾಸಪತ್ರಿಕೆಯ ಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಇವರು ಆಯ್ಕೆಯಾಗಿದ್ದಾರೆ.
ಶ್ರೀ ಹರಿಕೃಷ್ಣ ಪುನರೂರು ಮತ್ತು ಪಿ.ವಿ. ಪ್ರದೀಪ್ ಕುಮಾರ್ರವರ ನೇತೃತ್ವದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮ, ಕೃತಿ, ಸಾಹಿತ್ಯ, ಸಮಾಜಸೇವೆ, ಧಾರ್ಮಿಕ, ಸಂಗೀತ, ಯಕ್ಷಗಾನ, ವೈದ್ಯಕೀಯ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಚಂದ್ರಹಾಸ ಚಾರ್ಮಾಡಿಯವರು ಕಳೆದ ಹತ್ತು ವರ್ಷಗಳಿಂದ ಪತ್ರಕರ್ತರಾಗಿ ದುಡಿಯುತ್ತಿದ್ದು, ಈಗಾಗಲೇ ರಾಜ್ಯದ ಬೇರೆ ಬೇರೆ ಪತ್ರಿಕೆಗಳಲ್ಲಿ ಇವರು ಬರೆದ ಸಾವಿರಾರು ಲೇಖನಗಳು ಪ್ರಕಟಗೊಂಡಿವೆ. ಕಥೆ, ಕಾದಂಬರಿ, ತುಳು ನಾಟಕಗಳನ್ನು ಇವರು ರಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಲ್ಪಡುವ ಪ.ಗೋ.ಪ್ರಶಸ್ತಿ – 2015 ಅನ್ನು ಇವರು ಪಡೆದಿದ್ದಾರೆ. ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಗಳೂರು ಇವರಿಂದ ‘ಅತ್ಯುತ್ತಮ ಬರಹ’ ಪ್ರಶಸ್ತಿಯನ್ನೂ ಪಡೆದ ಇವರು ತುಳು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಸದಸ್ಯರಾಗಿರುವ ಇವರು ಅತ್ಯುತ್ತಮ ಛಾಯಾಗ್ರಾಹಕರು ಕೂಡಾ ಆಗಿದ್ದಾರೆ. ಕನ್ನಡ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಹಂಪಿ ವಿಶ್ವವಿದ್ಯಾನಿಲಯದಡಿ ಪಿಎಚ್.ಡಿ. ಸಂಶೋಧನೆಯನ್ನೂ ಕೈಗೊಂಡಿದ್ದಾರೆ.
ಚಾರ್ಮಾಡಿ ಗ್ರಾಮದ ಪರ್ಲಾನಿಯ ಚನನ ಗೌಡ ಮತ್ತು ಶ್ರೀಮತಿ ಶಾರದ ದಂಪತಿಗಳ ಪುತ್ರನಾಗಿರುವ ಇವರು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿಯನ್ನು ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರಸಕ್ತ ಸಾಲಿನ ‘ಸೌರಭ ರತ್ನ’ ಪ್ರಶಸ್ತಿಗೆ ಚಂದ್ರಹಾಸರವರನ್ನು ಪರಿಗಣಿಸಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ನ.15ರಂದು ಮಂಗಳೂರಿನಲ್ಲಿ ನಡೆಯಲಿದೆ.