ಚಾರ್ಮಾಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ಲೇಖನಗಳನ್ನು ವ್ಯಕ್ತಪಡಿಸಿರುವ ಲೇಖಕರಿಗೆ “ಐಎಆರ್ಡಿಒ” ವತಿಯಿಂದ ನೀಡಲಾಗುವ ಅಂತಾರಾಷ್ಟ್ರೀಯ ಪ್ರತಿಭಾನ್ವಿತ ಸಂಶೋಧಕ ಪ್ರಶಸ್ತಿ-2018 ನೇ ಸಾಲಿನ ಪುರಸ್ಕಾರವನ್ನು ಚಾರ್ಮಾಡಿಯ ರಿಯಾಝ್ ಅವರಿಗೆ ನೀಡಲಾಗಿದೆ.
ಇವರು ಹಲವು ವರ್ಷಗಳಿಂದ “ಐಎಸ್ಎಸ್ಎನ್”, “ಐಎಸ್ಬಿಎನ್”, “ಐಎಸ್ಒ”, ಹಾಗೂ “ಯುಜಿಸಿ” ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಲೇಖನಗಳನ್ನು ಪ್ರಕಟಿಸಿದ್ದಾರೆ.
ಇವರ ಈ ಸಾಧನೆಗೆ ಗೋವಾದ ಪಣಜಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಅಭಿನಂದನಾ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ನಡೆದಿದೆ.
ಥೈಲಾಂಡ್ ಇಂಟರ್ನ್ಯಾಷನಲ್ ಎಕಡಮಿಕ್ ಏಂಡ್ ಇಂಡಷ್ಟ್ರೀಯಲ್ ಎಡ್ವೈಸರ್ ಜಿದಾಪ ತವರಿತ್, ಜಾಯಿಂಟ್ ರಿಜಿಸ್ಟ್ರಾರ್ ಡಾ. ನಿತಿನ್ ಮಲಿಕ್, ಸಂಯೋಜಕ ಆರ್.ಕೆ ಶರ್ಮ ಇವರು ರಿಯಾಝ್ರಿಗೆ ಈ ಪುರಸ್ಕಾರ ನೀಡಿದರು.
ಪ್ರಸ್ತುತ ಇವರು ಜಿಲ್ಲೆಯ ಚೆನ್ನರಾಯಪಟ್ಟಣದ ಜ್ಞಾನಸಾಗರ ಪ. ಪೂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಾರ್ಮಾಡಿ ಸರಕಾರಿ ಶಾಲೆಯಲ್ಲಿ, ಪ್ರೌಢ, ಪ. ಪೂ ಮತ್ತು ಪದವಿ ವಿದ್ಯಾಭ್ಯಾಸವನ್ನು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ, ಸ್ನಾತಕೋತ್ತರ ಉನ್ನತ ಪದವಿಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಇವರು ಈಗಾಗಲೇ “ಒನ್ ರುಪಿ ಫ್ರಾಡ್ ಇಂದ ಮಾರ್ಕೆಟ್”, “ವುಮೆನ್ ಎಂಪವರ್ಮೆಂಟ್”, “ಕೆಎಸ್ಆರ್ಟಿಸಿ ಸರ್ವಿಸಸ್”, “ಅನ್ಲೈನ್ ಎಕ್ಸಾಂ” ಇತ್ಯಾಧಿ ವಿಚಾರಗಳ ಬಗ್ಗೆ ಮೌಲ್ಯವರ್ಧಿತ ಪ್ರಬಂಧರೂಪದ ಲೇಖನಗಳನ್ನು ಮಂಡಿಸಿ ಸೈ ಎನಿಸಿದ್ದಾರೆ.
ಇವರು ಚಾರ್ಮಾಡಿಯ ಅಬ್ದುಲ್ ರಹಿಮಾನ್ ಮುದ್ದೊಟ್ಟು (ಪುತ್ತುಮೋನು) ಮತ್ತು ಆಸಿಯಾ ದಂಪತಿ ಪುತ್ರರಾಗಿದ್ದಾರೆ.