ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2019ನೇ ಫೆಬ್ರವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಪೂರಕವಾಗಿ ಬಿ.ಸಿ ರೋಡಿನಿಂದ ಧರ್ಮಸ್ಥಳವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ 100 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಲೋಕೋಪಯೋಗಿ ಇಲಾಖಾ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.
ಅ.24 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
23.5ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಶಿಲಾನ್ಯಾಸ: ಶ್ರೀ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ 22 ಕಿ.ಮೀ. ರಸ್ತೆಯನ್ನು7. ಮೀ ಅಗಲೀಕರಣಗೊಳಿಸಲಾಗುವಂತೆ ನೋಡಿಕೊಳ್ಳಲು ಮುಖ್ಯಮಂತ್ರಿಯ ಸೂಚನೆಯಂತೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರೇವಣ್ಣ ಹೇಳಿದರು.
ಸರಕಾರದ ಕೆಲಸ ಹೆಗ್ಗಡೆಯವರು ಮಾಡುತ್ತಿದ್ದಾರೆ:
51 ವರ್ಷಗಳ ಪೂಜ್ಯರ ಆಡಳಿತ ಕಾಲದಲ್ಲಿ ಅನೇಕ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಕಾಲೇಜು, ಗ್ರಾಮಾಭಿವೃದ್ಧಿ, ರೈತಾಪಿ ಜನರಿಗೆ ಬೇಕಾದ ಯೋಜನೆಗಳನ್ನು ತಂದು ಜನಕಲ್ಯಾಣ ಮಾಡಿದ್ದಾರೆ. ಸರಕಾರದ ಯೋಜನೆಗಳನ್ನು ಜನತೆಗೆ ತಲುಪುವಂತೆ ಅವರು ಕೆಲಸ ಮಾಡುತ್ತಿದ್ದು ವಿಶ್ವದಲ್ಲೇ ಮಾದರಿಯಾಗಿದೆ. ಇಲ್ಲಿ ಸ್ಥಾಪಿಸಲ್ಪಟ್ಟಿರುವ ಮಂಜೂಷಾ ವಸ್ತು ಸಂಗ್ರಹಾಲಯ ದೇಶದ ಇತಿಹಾಸದಲ್ಲೇ ನಾನು ಪ್ರಥಮ ಬಾರಿಗೆ ನೋಡಿದೆ ಎಂದರು.
ಸುವರ್ಣ ಪುಸ್ತಕ ಮಾಲಿಕೆಯ 6 ಪುಸ್ತಕಗಳ ಲೋಕಾರ್ಪಣೆ :
ಡಾ. ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಆಚರಣಾ ಸಮಿತಿ ಹೊರತರಲು ಆಲೋಚಿಸಿರುವ ಡಾ. ಹೆಗ್ಗಡೆಯವರ ಬದುಕು, ಕಾರ್ಯಯೋಜನೆ, ಆಡಳಿತ, ಧಾರ್ಮಿಕ ಚಟುವಟಿಕೆಗಳ ವಿಶೇಷ ದಾಖಲಿತ ಕೃತಿಗಳು ಸುವರ್ಣ ಪುಸ್ತಕ ಮಾಲಿಕೆಯ ವತಿಯಿಂದ ಪ್ರಾರಂಭದ ಹಂತದಲ್ಲಿ ತಯಾರಾಗಿರುವ ಮೌಲಿಕ ದಾಖಲೆಗಳುಳ್ಳ 6 ಪುಸ್ತಕಗಳು ಲೋಕಾರ್ಪಣೆಗೊಂಡವು.
ಜಾನಪದ ವಿದ್ವಾಂಸ ಡಾ. ಕೆ ಚಿನ್ನಪ್ಪ ಗೌಡ ಬರೆದಿರುವ, ತುಳು ಸಮ್ಮೇಳನದ ಮೂಲಕ ಭಾಷಾ ಉಳಿವಿಗೆ ಕೈಗೊಂಡ ಕಾರ್ಯಕ್ರಮಗಳ ವಿವರದ ಪುಸ್ತಕ “ತುಳುಮಾನ್ಯ”, ಲೇಖಕ ಮಲ್ಲಿಕಾರ್ಜುನ ಹೊಸಲಾಳ್ಯ ನಿರೂಪಿಸಿದ, ಮದ್ಯಮುಕ್ತ ಭಾರತ ಕನಸು ವಿಚಾರವನ್ನೊಳಗೊಂಡ ಪುಸ್ತಕ “ದಿವ್ಯ ಜೀವನ”, ಯಕ್ಷಗಾನ ಬಯಲಾಟ ಅಕಾಡಮಿ ಅಧ್ಯಕ್ಷ ಪ್ರ. ಎಂ.ಎ ಹೆಗಡೆ ಬರೆದಿರುವ, ಧಾರ್ಮಿಕ ಮೌಲಿಕ ವಿಚಾರಗಳ ಅಪೂರ್ವ ಸಂಗ್ರಹ ಪುಸ್ತಕ “ಬೋಧಿಯ ನೆರಳಲ್ಲಿ”, ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದಿರುವ, ಧರ್ಮಸ್ಥಳ ಪ್ರಕೃತಿ ಚಿಕಿತ್ಸೆ ವಿಶ್ವವಿದ್ಯಾನಿಲಯ ಸಹಿತದ ವಿವರಗಳುಳ್ಳ ಪುಸ್ತಕ “ಮರಳಿ ಪ್ರಕೃತಿಗೆ”, ಡಾ. ಪಾದೆಕಲ್ಲು ವಿಷ್ಣು ಭಟ್ಟ ಬರೆದಿರುವ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಮೂಲಕ ಮಾಡಿರುವ ಕೈಂಕರ್ಯಗಳ ಬಗ್ಗೆ ಬರೆದಿರುವ ಪುಸ್ತಕ “ಸಂಸ್ಕೃತಿ ಸಂಶೋಧನೆ”, ಖ್ಯಾತ ಇತಿಹಾಸ ತಜ್ಞೆ ಡಾ. ಚೂಡಾಮಣಿ ನಂದಗೋಪಾಲ್ ಬರೆದಿರುವ, ಪ್ರಾಚೀನ ವಸ್ತು ಸಂಗ್ರಹಾಲಯದ ಬಗೆಗಿನ ಪುಸ್ತಕ “ಮಂಜೂಷಾ ಕರಂಡ” ಪುಸ್ತಕಗಳು ವೇದಿಕೆಯಲ್ಲಿ ಮೊದಲ ಹಂತದಲ್ಲಿ ಬಿಡುಗಡೆಗೊಂಡವು.
ಡಾ. ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಕೆಲವು ಅಪೂರ್ವ ದಾಖಲೆಗಳು, ಭಾವಚಿತ್ರಗಳು ಒಳಗೊಂಡಿರುವ ಚಿತ್ರ ಸಂಪುಟ ಕಾಪಿಟೇಬಲ್ ಪುಸ್ತಕ ಕೂಡ ವೇದಿಕೆಯಲ್ಲಿ ಬಿಡುಗಡೆಯಾಯಿತು. ಪುಸ್ತಕಗಳ ಎಲ್ಲಾ ಲೇಖಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಪತ್ನಿ ಭ್ಲೋಸಂ ಫೆರ್ನಾಂಡಿಸ್, ಡಿ. ಸುರೇಂದ್ರ ಕುಮಾರ್, ಶೃದ್ಧಾ ಅಮಿತ್, ಪದ್ಮಲತಾ ನಿರಂಜನ್ ಕುಮಾರ್ ಧಾರವಾಡ, ಡಾ| ನಿರಂಜನ್ ಕುಮಾರ್, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ತಾ.ಪಂ. ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಸರಕಾರಿ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಪೊಲೀಸ್ ಎಸ್.ಪಿ. ಡಾ| ರವಿಕಾಂತೇ ಗೌಡ, ಹೆಚ್ಚುವರಿ ಎಸ್.ಪಿ ಸಜಿತ್ ವಿ.ಜಿ ಉಪಸ್ಥಿತರಿದ್ದರು.
ಡಿ. ಹಷೇಂದ್ರ ಕುಮಾರ್ ಸ್ವಾಗತಿಸಿ, ಶಾಲಿನಿ, ಸೀತಾರಾಮ ತೋಳ್ಪಾಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ, ಗಿರೀಶ್ ಹೆಗ್ಡೆ ಇವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ನೆರವೇರಿಸಿದರು. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್. ಮಂಜುನಾಥ ಧನ್ಯವಾದವಿತ್ತರು.