ಬೆಳ್ತಂಗಡಿ: ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಜಯಗಳಿಸಿ ಮೂರನೇ ಬಾರಿಗೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ವಿಶ್ವಾಸ ವ್ಯಕ್ತಪಡಿಸಿದರು. ನಗರದ ವಾರ್ತಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ರಮೇಶ್ ಕುಮಾರ್ ವರದಿ ಆಧರಿಸಿ ಸ್ಥಳೀಯ ಸಂಸ್ಥೆಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಿ ಶಶಕ್ತೀಕರಣ ಕಾರ್ಯ ಮಾಡಿತ್ತು. ಆ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ. ಅಲ್ಲದೆ ಅನೆಕ ಜನಪರ ಕಾರ್ಯಕ್ರಮಗಳೇ ಇಂದು ಚುನಾವಣೆಯಲ್ಲಿ ನಮಗೆ ರಕ್ಷೆಯಾಗಿದ್ದು ಜನ ನಮ್ಮನ್ನು ಬೆಂಬಲಿಸಲಿದ್ದಾರೆಂಬುದು ನಮ್ಮ ವಿಶ್ವಾಸ. ಬಿಜೆಪಿಯವರು ಯಾವುದೋ ಭ್ರಮೆಯಲ್ಲಿದ್ದಾರೆ. ಕೇಂದ್ರ ಸರಕಾರ ಅಧಿಕಾರಕ್ಕೆ ಬರುವಾಗ ನೀಡಿದ್ದ ಒಂದೂ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಸುಳ್ಳು ಸ್ಲೋಗನ್ ಮೂಲಕ ಜನರನ್ನು ಮೋಸಮಾಡಿದ್ದಾರೆ. ಇಂಧನ ಬೆಲೆ ಏರಿಕೆಗೊಳಿಸಿ ಬಡವರಿಗೆ ಅನ್ಯಾಯ, ಗ್ಯಾಸ್ ಬೆಲೆ ದುಪ್ಪಟ್ಟುಗೊಳಿಸಿ ಮಹಿಳೆಯರಿಗೆ ಅನ್ಯಾಯ, ಸಾಲ ಮನ್ನಾ ಮಾಡದೆ ರೈತಾಪಿವರ್ಗಕ್ಕೆ ಅನ್ಯಾಯವೆಸಗಿದ ಬಿಜೆಪಿಯನ್ನು ಜನ ಹೇಗೆ ಬೆಂಬಲಿಸಿಯಾರು ಎಂದು ನೀವೇ ಹೇಳಿ ಎಂದು ಐವನ್ ಪ್ರಶ್ನಿಸಿದರು. ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಸ್ಥಾನಗಳು ಕಡಿಮೆ ಬಂದಿದ್ದರೂ ಮತಗಳಿಕೆಯಲ್ಲಿ 36 ಶೇ. ಸಾಧನೆಯಾದರೆ, ಬಿಜೆಪಿಯದ್ದು 34 ಶೇ. ಮಾತ್ರ ಎಂದು ನೆನಪಿಸಿದ ಅವರು, ನಗರದಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರು ದೊಡ್ಡ ಮೊತ್ತದ ಅನುದಾನ ತಂದು ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಆದ್ದರಿಂದ ಇಲ್ಲಿ ನಮಗೆ ಗಲುವು ನಿಶ್ಚಿತ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಬಿ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ಅಭ್ಯರ್ಥಿಗಳಾದ ಹೆನ್ರಿ ಲೋಬೋ, ರಾಜಶ್ರೀ ರಮಣ್, ರಮೇಶ್ ಕಲ್ಕಣಿ, ಮುಖಂಡರಾದ ಅಬ್ದುಲ್ ರಹಿಮಾನ್ ಪಡ್ಪು ಮೊದಲಾದವರು ಉಪಸ್ಥಿತರಿದ್ದರು.