ಸ್ಪೋಟಕ ಆರೋಪಿಯಿಂದ ಲಂಚ ಆರೋಪ: ಪುಂಜಾಲಕಟ್ಟೆ ಠಾಣಾ ಎಎಸ್‌ಐ, ಹೆಡ್‌ಕಾನ್ಸ್‌ಟೇಬಲ್ ಅಮಾನತು

ಬೆಳ್ತಂಗಡಿ: ಅಕ್ರಮ ಸ್ಪೋಟಕ ಮದ್ದು ಗುಂಡು ಸಾಗಾಟ ಆರೋಪಿಯಿಂದ ಲಂಚಪಡೆದು ಕರ್ತವ್ಯಲೋಪವೆಸಗಿದ ಆರೋಪದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಎಸ್‌ಐ ಲಕ್ಷ್ಮಣ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಇಬ್ರಾಹಿಂ ಎಂಬಿಬ್ಬರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಎಸ್‌ಪಿ ಆದೇಶ ನೀಡಿದ್ದಾರೆಂದು ವರದಿಯಾಗಿದೆ.
ಕುಕ್ಕಳ ಗ್ರಾಮದ ಬಸವನಗುಡಿ ಚಿನ್ನಸ್ವಾಮಿ ಅವರನ್ನು ಅಕ್ರಮ ಮದ್ದುಗುಂಡು ಸಾಗಾಟ ಪ್ರಕರಣದಲ್ಲಿ ಡಿಸಿಐಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆದರೆ ಇದಕ್ಕೂ ಮುನ್ನ ಮುಖ್ಯಪೇದೆ ಇಬ್ರಾಹಿಂ ಅವರು ಎಎಸ್‌ಐ ಲಕ್ಷ್ಮಣ್ ಅವರನ್ನು ಕರೆದೊಯ್ದು ದಾಳಿ ನಡೆಸಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಹಣಕಾಸು ವ್ಯವಹಾರ ಕುದುರಿಸಿ ಬಿಟ್ಟುಬಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ಅಂದು ಹೆಡ್‌ಕಾನ್ಸ್‌ಟೇಬಲ್ ಇಬ್ರಾಹಿಂ ಅವರು ವಾರಂಟ್ ಜಾರಿ ಇದೆ ಎಂದು ತಿಳಿಸಿ ಎಎಸ್‌ಐ ಲಕ್ಷ್ಮಣ್‌ರನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಚಿನ್ನಸ್ವಾಮಿ ಅವರ ಸ್ಕೂಟರ್ ತಡೆದು ನಿಲ್ಲಿಸಿ ಅವರ ಬಳಿ ಇದ್ದ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಂತೆ ಸೀನ್ ಕ್ರಿಯೇಟ್ ಮಾಡಿದ್ದರು. ಆ ಬಳಿಕ ಕೆದ್ದಳಿಕೆ ಶಾಲೆಯ ಬಳಿ ವ್ಯಕ್ತಿಯೊಬ್ಬರ ಮನೆಗೆ ಕರೆದುಕೊಂಡುಹೋಗಿ ಅಲ್ಲಿ ಮಾತುಕತೆ ನಡೆಸಿ ಒಂದು ಮೊತ್ತಕ್ಕೆ ಡೀಲ್ ಕುದುರಿಸಿ ಆ ಮೊತ್ತವನ್ನು ಪರಸ್ಪರ ಹಂಚಿಕೊಂಡಿದ್ದರು. ಆ ಬಳಿಕ ಆರೋಪಿ ಚಿನ್ನಸ್ವಾಮಿ ಅವರನ್ನು ಅಕ್ರಮ ಮದ್ದುಗುಂಡುಗಳ ಸಹಿತ ಭಾವಚಿತ್ರವನ್ನೂ ತೆಗೆಸಿಕೊಂಡು, ಆ ವಸ್ತುಗಳನ್ನು ತಮ್ಮ ವಶಕ್ಕೆ ಇಟ್ಟುಕೊಂಡು ಕೆಲದಿನಗಳ ಬಳಿಕ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವಿಚಾರ ಎಸ್‌ಪಿ ಯವರಿಗೆ ತಿಳಿದು ಖಚಿತ ಮಾಹಿತಿ ಮೇರೆಗೆ ಚಿನ್ನಸ್ವಾಮಿ ಅವರನ್ನು ಡಿಸಿಐಬಿ ಪೊಲೀಸರು ಬಂಧಿಸಿ ಸ್ಪೋಟಕ ವಶಕ್ಕೆ ಪಡೆದುಕೊಂಡಿದ್ದರು.
ತನಿಖೆಯ ವೇಳೆ ಪೊಲೀಸರ ಕರ್ತವ್ಯಲೋಪ ಸಾಬೀತಾದುದರಿಂದ ಅವರ ವಿರುದ್ಧ ಕ್ರಮಕೈಗೊಂಡು ಇದೀಗ ಇಬ್ಬರನ್ನೂ ಅಮಾನತುಗೊಳಿಸಿ ಇಲಾಖಾ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.