ನ.ಪಂ ಚುನಾವಣೆ: 11 ವಾರ್ಡ್‌ಗಳಿಗೆ 30 ಮಂದಿ ನಾಮಪತ್ರ; ವಿವಿಧ ಪಕ್ಷಗಳ ಪ್ರಮುಖರು ಕಣಕ್ಕೆ

ಬೆಳ್ತಂಗಡಿ : ಪ್ರತಿಷ್ಠಿತ ಬೆಳ್ತಂಗಡಿ ನಗರ ಪಂಚಾಯತದ ನೂತನ ಆಡಳಿತ ಮಂಡಳಿ ಆಯ್ಕೆಗೆ ಅ.28 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅವಧಿ ಕೊನೆಗೊಂಡಾಗ ವಿವಿಧ ಪಕ್ಷಗಳ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 33 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆಯಾಗಿತ್ತು. ಅ.17 ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, 6 ನಾಮಪತ್ರಗಳು ತಿರಸ್ಕೃತಗೊಂಡಿದೆ. ಅಂತಿಮವಾಗಿ 11 ವಾರ್ಡ್‌ಗಳಿಗೆ 30 ಮಂದಿಯ ನಾಮಪತ್ರ ಅಧಿಕೃತಗೊಂಡಿದೆ.
ಅ.20 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು ಅಂತಿಮ ಕಣದಲ್ಲಿ ಎಷ್ಟು ಮಂದಿ ಉಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಅ.28 ರಂದು ಬೆಳಗ್ಗೆ 7  ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಂಚಾಯತದ 11 ವಾರ್ಡ್‌ಗಳಿಗೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್ 1, ಬಿಎಸ್‌ಪಿ 2, ಎಸ್.ಡಿ.ಪಿ.ಐ 3 ಹಾಗೂ ಇಬ್ಬರು ಪಕ್ಷೇತರರು ಕಣದಲ್ಲಿ ಇದ್ದಾರೆ. ನ.ಪಂ. ಮಾಜಿ ಅಧ್ಯಕ್ಷರುಗಳಾದ ಮುಗುಳಿ ನಾರಾಯಣ ರಾವ್, ಮುಸ್ತರ್‌ಜಾನ್ ಮೆಹಬೂಬ್, ಮಾಜಿ ಉಪಾಧ್ಯಕ್ಷ ಜಗದೀಶ್ ಡಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಮತಾ ವಿ.ಶೆಟ್ಟಿ, ಮಾಜಿ ನಾಮನಿರ್ದೇಶನ ಸದಸ್ಯರಾದ ಜನಾರ್ದನ ಬಂಗೇರ ಮತ್ತು ಶಂಕರ ಹೆಗ್ಡೆ, ಪ್ರಮುಖರಾದ ರಮೇಶ್ ಆರ್, ಅಕ್ಬರ್, ಜಯಾನಂದ ಟಿ, ರಾಜಶ್ರೀ ರಮಣ್, ಹೆನ್ರಿಲೋಬೊ, ರಜನಿ ಕುಡ್ವ, ರಾಧಿಕಾ ವಸಂತ್, ಸತೀಶ್ ಶೆಟ್ಟಿ ಕಣಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಕೆ ವಿವರ: ವಾರ್ಡ್ 1 ಹಿಂದುಳಿದ ವರ್ಗ ಎ (ಮಹಿಳೆ)ಗೆ ಮೀಸಲಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ತಾಲೂಕು ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ರಮಣ್ ಕೋರ್ಟು ರಸ್ತೆ ಹಾಗೂ ಬಿಜೆಪಿ ಬೆಂಬಲಿತರಾಗಿ ಶ್ರೀಮತಿ ಸುಶ್ಮೀತಾ ಜೈನ್ ಪೇಟೆ ಇವರು ನಾಮಪತ್ರ ಸಲ್ಲಿಸಿದ್ದು, ಈ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ.
ವಾರ್ಡ್ 2 ಪರಿಶಿಷ್ಟ ಜಾತಿಗೆ ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ರಮೇಶ್ ಕಲ್ಕಣಿ, ಬಿಜೆಪಿ ಬೆಂಬಲಿತರಾಗಿ ಅಂಬರೀಶ್ ಕಲ್ಲಗುಡ್ಡೆ ಮತ್ತು ಪ್ರಸಾದ್ ಸುದೆಮುಗೇರು, ಬಿ.ಎಸ್.ಪಿ ಬೆಂಬಲಿತರಾಗಿ ಬಿ.ಎಸ್.ಪಿ ಪಕ್ಷದ ತಾಲೂಕು ಅಧ್ಯಕ್ಷ ರಮೇಶ್ ಆರ್. ರೆಂಕೆದಗುತ್ತು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಒಬ್ಬರು ನಾಮಪತ್ರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ.
ವಾರ್ಡ್ 3 ಸಾಮಾನ್ಯ ಸ್ಥಾನಕ್ಕೆ ನೀಡಲಾಗಿದ್ದು, ಕಾಂಗ್ರೆಸ್‌ನಿಂದ ಕೆಥೋಲಿಕ್ ಸಹಕಾರಿ ಸಂಘದ ಅಧ್ಯಕ್ಷ ಹೆನ್ರಿ ಲೋಬೋ ನೇತಾಜಿ ರಸ್ತೆ ಮತ್ತು ಬಿಜೆಪಿಯಿಂದ ಕೃಷ್ಣೋತ್ಸವ ಸಮಿತಿ ಅಧ್ಯಕ್ಷ ಶರತ್‌ಕುಮಾರ್ ಅಲ್ಲಾಟಬೈಲು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಸ್ಪರ್ಧೆ ನಡೆಯಲಿದೆ.
ವಾರ್ಡ್ 4 ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ನ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಮತಾ ವಿ. ಶೆಟ್ಟಿ ರಾಮನಗರ ಹಾಗೂ ಬಿಜೆಪಿ ಬೆಂಬಲಿತರಾಗಿ ಶ್ರೀಮತಿ ರಜನಿ ಕುಡ್ವ ಸುದೆಮುಗೇರು ಅವರು ನಾಮಪತ್ರ ಸಲ್ಲಿಸಿದ್ದು, ಈ ಕ್ಷೇತ್ರದಲ್ಲಿಯೂ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.
ವಾರ್ಡ್ 5 ಸಾಮಾನ್ಯರಿಗೆ ನೀಡಲಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ಶ್ರೀ ಗುರುದೇವ ಕಾಲೇಜಿನ ಸಿಬ್ಬಂದಿ ಜನಾರ್ದನ ಕುಂಬಾರ ಸಂಜಯನಗರ, ಬಿಜೆಪಿ ಬೆಂಬಲಿತರಾಗಿ ಗಣೇಶ್ ಉದಯನಗರ, ಎಸ್.ಡಿ.ಪಿ.ಐ ಬೆಂಬಲಿತರಾಗಿ ಮಹಮ್ಮದ್ ರಶೀದ್ ಸಂಜಯನಗರ ಹಾಗೂ ಉದ್ಯಮಿ ಹನೀಫ್ ಸಂಜಯನಗರ ಅವರು ನಾಮಪತ್ರ ಸಲ್ಲಿದ್ದಾರೆ.
ವಾರ್ಡ್ 6ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಬಿಜೆಪಿ ಬೆಂಬಲಿತರಾಗಿ ಶ್ರೀಮತಿ ರಾಧಿಕಾ ವಸಂತ್ ಹಬೇಬೈಲು, ಕಾಂಗ್ರೆಸ್ ಬೆಂಬಲಿತರಾಗಿ ನ.ಪಂ ಮಾಜಿ ಸದಸ್ಯೆ ಶ್ರೀಮತಿ ಮುಸ್ತರ್‌ಜಾನ್ ಮೆಹಬೂಬ್ ಸಂಜಯನಗರ, ಎಸ್.ಡಿ.ಪಿ.ಐ ಬೆಂಬಲಿತರಾಗಿ ಶ್ರೀಮತಿ ಶಯನ ಯಾನೆ ಪೌಝಿಯಾ ಸಂಜಯನಗರ ಮತ್ತು ಶ್ರೀಮತಿ ನಸೀಮಾ ಸಂಜಯನಗರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ್ 7 ಪರಿಶಿಷ್ಟ ಪಂಗಡಕ್ಕೆ ನಿಗದಿಯಾಗಿದ್ದು, ಬಿಜೆಪಿ ಬೆಂಬಲಿತರಾಗಿ ಲೋಕೇಶ್ ಮತ್ತು ಕಾಂಗ್ರೆಸ್ ಬೆಂಬಲಿತರಾಗಿ ಸತೀಶ್ ನಾಯ್ಕ ರೆಂಕೆದ ಗುತ್ತು ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ವಾರ್ಡ್ 8 ಹಿಂದುಳಿದ ವರ್ಗ ಎಗೆ ನಿಗದಿಯಾಗಿದ್ದು, ಬಿಜೆಪಿ ಬೆಂಬಲಿತರಾಗಿ ನಗರ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಮನಿರ್ದೇಶಕ ಸದಸ್ಯ ಶಂಕರ ಹೆಗ್ಡೆ, ಕಾಂಗ್ರೆಸ್ ಬೆಂಬಲಿತರಾಗಿ ನ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಗದೀಶ್ ಡಿ. ಸುದೆಮುಗೇರು ಮತ್ತು ನ.ಪಂ ಮಾಜಿ ನಾಮನಿರ್ದೇಶನ ಸದಸ್ಯ ಜನಾರ್ದನ ಬಂಗೇರ ಮೂಡಾಯಿಗುತ್ತು, ಎಸ್.ಡಿ.ಪಿ ಬೆಂಬಲಿತರಾಗಿ ಎಸ್‌ಡಿಪಿಐ ತಾಲೂಕು ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಜಿಲ್ಲಾ ಸಮಿತಿ ಸದಸ್ಯರಾಗಿರುವ ಅಕ್ಬರ್ ಸಂಜಯನಗರ ಹಾಗೂ ಪಕ್ಷೇತರರಾಗಿ ಜನಾರ್ದನ ಬಂಗೇರ ಮೂಡಾಯಿಗುತ್ತು ನಾಮಪತ್ರ ಸಲ್ಲಿಸಿದ್ದಾರೆ. ಜನಾರ್ದನ ಬಂಗೇರ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದು, ಬಿ ಫಾರಂ ದೊರೆಯದಿದ್ದರೆ ಪಕ್ಷೇತರರಾಗಿ ಈ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಸಿದ್ಧತೆ ನಡೆಸಿದ್ದಾರೆ.
ವಾರ್ಡ್ 9 ಸಾಮಾನ್ಯ ಮಹಿಳೆಗೆ ನೀಡಲಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ಶ್ರೀಮತಿ ಪ್ರೇಮಾ ದೇವಾಡಿಗ ಹುಣ್ಸೆಕಟ್ಟೆ, ಬಿಜೆಪಿ ಬೆಂಬಲಿತರಾಗಿ ಶ್ರೀಮತಿ ತುಳಸಿ, ಕೆರಳಕೋಡಿ, ಜೆಡಿಎಸ್ ಬೆಂಬಲಿತರಾಗಿ ಶ್ರೀಮತಿ ಅನಿತಾ ಕೆಂಬರ್ಜೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ವಾರ್ಡ್ 10 ಪರಿಶಿಷ್ಟ ಜಾತಿ ಮಹಿಳೆಗೆ ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ಶ್ರೀಮತಿ ಲತಾ ಕೆ ಕೆಲ್ಲಗುತ್ತು, ಬಿಜೆಪಿ ಬೆಂಬಲಿತರಾಗಿ ಶ್ರೀಮತಿ ಗೌರಿ ಕೆಲ್ಲಗುತ್ತು, ಬಿ.ಎಸ್.ಪಿ ಬೆಂಬಲಿತರಾಗಿ ಶ್ರೀಮತಿ ಪ್ರೇಮ ಕೆಲ್ಲಗುತ್ತು ನಾಮಪತ್ರ ಸಲ್ಲಿಸಿದ್ದು, ಈ ಕ್ಷೇತ್ರಲ್ಲೂ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.
ಪ್ರತಿಷ್ಠೆಯ ಹಾಗೂ ಎಲ್ಲರ ಗಮನ ಸೆಳೆದಿರುವ ವಾರ್ಡ್ 11 ಸಾಮಾನ್ಯರಿಗೆ ನೀಡಲಾಗಿದ್ದು, ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ನ.ಪಂ ನಿಕಟಪೂರ್ವ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪಕ್ಷೇತರರಾಗಿ ನಾಮಪತ್ರ ನೀಡಿದ್ದಾರೆ.
ಇವರಿಗೆ ಪ್ರತಿ ಸ್ಪರ್ಧಿಯಾಗಿ ಬಿಜೆಪಿ ಬೆಂಬಲಿತರಾಗಿ ಗೌಡರ ಯುವ ವೇದಿಕೆ ತಾಲೂಕು ಅಧ್ಯಕ್ಷ ಜಯಾನಂದ ಗೌಡ ಟಿ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಸತೀಶ್ ಶೆಟ್ಟಿ ದೊಡ್ಡಮನೆ ಜೈನ ಪೇಟೆ ಅವರು ನಾಮಪತ್ರ ಸಲ್ಲಿಸಿದ್ದು, ಚುನಾವಣೆ ತೀವ್ರ ಕುತೂಹಲ ಕೆರಳಿಸಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.