ಮುಂಡಾಜೆ ಗ್ರಾ.ಪಂಕ್ಕೆ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

ಮುಂಡಾಜೆ : ಪಂಚಾಯತು ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರಿ ಅನುದಾನಗಳ ಸಮರ್ಪಕ ಸದ್ಬಳಕೆ ಹಾಗೂ ವಿಶೇಷ ಸಾಧನೆಗಾಗಿ ಮುಂಡಾಜೆ ಗ್ರಾ.ಪಂಗೆ ಸರಕಾರ ಎರಡನೇ ಬಾರಿಗೆ 2017-18 ನೇ ಸಾಲಿನ `ಗಾಂಧಿ ಗ್ರಾಮ ಪುರಸ್ಕಾರ’ ನೀಡಿ ಗೌರವಿಸಿದೆ.
ಅ.2 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪಂಚಾಯತದ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷೆ ವಸಂತಿ, ಅಭಿವೃದ್ಧಿ ಅಧಿಕಾರಿ ಸುಮ ಎ.ಎಸ್, ಕಾರ್ಯದರ್ಶಿ ಸಂಜೀವ ನಾಯ್ಕ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಮೀಣ ಅಭಿವೃದ್ಧಿ ಸಚಿವ ಕೃಷ್ಣಬೈರೇ ಗೌಡ, ದ.ಕ. ಜಿ.ಪಂ. ಸಹಾಯಕ ಯೋಜನಾಧಿಕಾರಿ ಸಚಿನ್, ಬೆಳ್ತಂಗಡಿ ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಹಾಗೂ ಪಂಚಾಯತು ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸರಕಾರಿ ಅನುದಾನಗಳ ಸಮರ್ಪಕ ಬಳಕೆ, ಬಯಲು ಶೌಚಾಲಯ ಮುಕ್ತ ಗ್ರಾಮ, ನೈರ್ಮಲಕ್ಕೆ ಹೆಚ್ಚಿನ ಒತ್ತು, ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧಿಸಿದ ಪ್ರಗತಿ, ಜಲಮರು ಪೂರಣಕ್ಕೆ ಆದ್ಯತೆ ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ ಕಿಂಡಿ ಅಣೆಕಟ್ಟುಗಳ ರಚನೆ. ಜಲಮರುಪೂರಣ, ಸ್ವಚ್ಛತಾ ಕಾರ್ಯ, ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನ, ರುದ್ರಭೂಮಿಗಳ ಅಭಿವೃದ್ಧಿ, ಜೈವಿಕ ಇಂಧನ ನೆಡುತೋಪು, ರಸ್ತೆ, ಕುಡಿಯುವ ನೀರು, ವಸತಿ ಯೋಜನೆಗಳು, ಸ್ವಉದ್ಯೋಗ ತರಬೇತಿ, 14 ನೇ ಹಣಕಾಸು ಯೋಜನೆಯ ಅನುದಾನ ಸಂಪೂರ್ಣ ಬಳಕೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿರುವುದು ಈ ಪಂಚಾಯತು ಪುರಸ್ಕಾರ ಪಡೆಯಲು ಕಾರಣವಾಗಿದೆ.
ಹಂತ, ಹಂತವಾಗಿ ಸಮರ್ಪಕವಾಗಿ ತ್ಯಾಜ್ಯವಿಲೇ, ಶೇ 99 ತೆರಿಗೆ ವಸೂಲಾತಿ, ನಿಯಾಮಾನುಸಾರ ಸಾಮಾನ್ಯ ಸಭೆ ನಡೆಸಿರುವುದು, ಗ್ರಾಮ ಸಭೆ, ಸ್ಥಾಯಿ ಸಮಿತಿ ಸಭೆ, ಇತರ ಅಭಿವೃದ್ಧಿ ಕುರಿತ ಸಭೆಗಳನ್ನು ನಡೆಸಿರುವುದು, ಮಹಿಳಾ ಗ್ರಾಮ ಸಭೆಯನ್ನು ಸಾರ್ವಜನಿಕವಾಗಿ ರ್‍ಯಾಲಿಗಳನ್ನು ನಡೆಸುವ ಮೂಲಕ ಮಾಡಿರುವುದು, ಪ್ರತಿ ತಿಂಗಳು ಗ್ರಾಮದ ಸಂಘ, ಸಂಸ್ಥೆಗಳನ್ನು ಸೇರಿಸಿಕೊಂಡು ವಿವಿಧ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿರುವುದು, ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸರಕಾರದ ವಿವಿಧ ಸೇವೆಗಳ ವಿತರಣೆ ಮೊದಲಾದ ಸಾಧನೆಯನ್ನು ಗುರುತಿಸಿ ಮುಂಡಾಜೆ ಗ್ರಾಮ ಪಂಚಾಯತನ್ನು ತಜ್ಞರ ಸಮಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
ಎಲ್ಲರ ಸಹಕಾರ- ಪಂಚಾಯತಕ್ಕೆ ಈ ಪ್ರಶಸ್ತಿ ಬರಲು ಗ್ರಾಮಸ್ಥರು, ಸಂಘ-ಸಂಸ್ಥೆಯವರು, ಆಡಳಿತ ಮಂಡಳಿಯವರು ನೀಡಿದ ಉತ್ತಮ ಸಹಕಾರ ಹಾಗೂ ಬೆಂಬಲ ಸಹಕಾರಿಯಾಗಿದೆ ಎಂದು ಅಧ್ಯಕ್ಷೆ ಶಾಲಿನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.