HomePage_Banner_
HomePage_Banner_
HomePage_Banner_

ಧರ್ಮಸ್ಥಳ: ಆದಿದ್ರಾವಿಡ ಮಹಿಳಾ ಘಟಕ-ಟ್ಯೂಷನ್ ತರಗತಿ ಉದ್ಘಾಟನೆ

ಧರ್ಮಸ್ಥಳ: ಆದಿದ್ರಾವಿಡ ಸಮಾಜ ಸೇವಾ ಸಂಘ ಧರ್ಮಸ್ಥಳ ವಲಯ ಘಟಕದ ಆಶ್ರಯದಲ್ಲಿ ಸಮಾಜ ಬಾಂಧವರ ವಾರ್ಷಿಕ  ಸ್ನೇಹ ಕೂಟ -ನೂತನವಾಗಿ ರಚಿಸಲಾದ ಆದಿದ್ರಾವಿಡ ಮಹಿಳಾ ಘಟಕ ಮತ್ತು ಟ್ಯೂಷನ್ ತರಗತಿ ಉದ್ಘಾಟನಾ ಸಮಾರಂಭ   ಅಶೋಕನಗರದ ಸೂರ್ಯಭವನದಲ್ಲಿ ಇತ್ತೀಚೆಗೆ ಜರಗಿತು.
ಮಹಿಳಾ ಘಟಕ ಹಾಗೂ ಟ್ಯೂಷನ್ ತರಗತಿಯನ್ನು ಬಂಟ್ವಾಳ ತಾಲೂಕು ವೀರಕಂಬ ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಮಹಿಳೆಯರೇ ಪ್ರಮುಖ ಪಾತ್ರವಹಿಸುತ್ತಾರೆ. ಮಹಿಳೆಯರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಿದಲ್ಲಿ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗುತ್ತದೆ. ಇಂದು ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಯ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ನಿರಂತರವಾಗಿ ನಡೆಯಬೇಕು. ನಮ್ಮ ಮಕ್ಕಳೆಲ್ಲರೂ ಉತ್ತಮ ನಾಗರಿಕರಾಗಿ, ಸಮಾಜದಲ್ಲಿ ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಈ ದಿಶೆಯಲ್ಲಿ ಇಲ್ಲಿಯ ಆದಿದ್ರಾವಿಡ ಸಮಾಜ ಸೇವಾ ಸಂಘವು ಹಮ್ಮಿಕೊಂಡಿರುವ ಈ ಟ್ಯೂಷನ್ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾಗಿದೆ. ನಾವೆಲ್ಲರೂ ಸಂಘಟನೆಯ ಜೊತೆ ಕೈಜೋಡಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆದಿದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ. ಅವರು ಮಾತನಾಡಿ, ಸಂಘಟನೆಯ ಮೂಲ ಉದ್ದೇಶ ಆದಿದ್ರಾವಿಡ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು, ಯಾರೊಂದಿಗೂ ಸಂಘರ್ಷ-ಸ್ಪರ್ಧೆ ಮಾಡುವುದಲ್ಲ. ಈ ನಿಟ್ಟಿನಲ್ಲಿ ಧರ್ಮಸ್ಥಳ ವಲಯ ಘಟಕವು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ತಾಲೂಕಿಗೆ ಮಾದರಿಯಾಗಿದೆ. ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮದಲ್ಲಿ ವಾಸಿಸುತ್ತಿರುವ ನಮ್ಮ ಸಮಾಜ ಬಾಂಧವರ ಮನೆ ಭೇಟಿ ಮಾಡಿ ಅವರ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದು, ಎಲ್ಲಾ ಸಮಾಜ ಬಾಂಧವರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ ಸದಸ್ಯೆ ಶ್ರೀಮತಿ ಹೊನ್ನಮ್ಮ, ಅಶೋಕ ನಗರದ ಅಮ್ಮು ಗುರಿಕಾರ, ಕರಿಯ ಗುರಿಕಾರ, ಶಿಕ್ಷಕಿ ಕು. ಹೇಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಘಟಕದ ಅಧ್ಯಕ್ಷ ಶೇಖರ್ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಘಟಕದ ಉಪಾಧ್ಯಕ್ಷ ದಿನೇಶ್ ಕೊಕ್ಕಡ, ಬಿವಿಎಸ್ ನ ಉಮೇಶ್ ಮಡಂತ್ಯಾರು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶ್ರೀಮತಿ ಗಿರಿಜಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನೂತನ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುನೀತಾ ಸಂಘಟನೆಯನ್ನು ಬಲಪಡಿಸಲು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ಶೇಖರ್ ವಿ. ಸ್ವಾಗತಿಸಿ, ಸುಜಾತ ವರದಿ ವಾಚಿಸಿದರು ಕೊನೆಯಲ್ಲಿ ಕಾರ್ಯದರ್ಶಿ ದಿವಾಕರ ಕೆ. ಧನ್ಯವಾದವಿತ್ತರು. ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶರತ್ ಡಿ. ಕಾರ್ಯಕ್ರಮ ನಿರೂಪಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಧರ್ಮಸ್ಥಳ ಪ್ರಗತಿಬಂಧು ಒಕ್ಕೂಟ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.